Site icon Vistara News

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

#image_title

ಬೆಂಗಳೂರು: ಯುಗಾದಿ ಹಬ್ಬದ (Ugadi 2023) ಮಾರನೇ ದಿನ ಮಾಂಸಾಹಾರಿಗಳು ಹೊಸತೊಡಕು ಆಚರಣೆ ಮಾಡುತ್ತಾರೆ. ಈ ವೇಳೆ ಹಲಾಲ್‌ ಮಾಂಸವನ್ನು ಬಹಿಷ್ಕರಿಸಿ ಮತ್ತು ಜಟ್ಕಾ ಮಾಂಸವನ್ನು ಖರೀದಿಸಬೇಕೆಂದು ಹಿಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಹಲಾಲ್‌ ಬಾಯ್ಕಾಟ್‌ (Halal Ban) ಅಭಿಯಾನಕ್ಕೆ ಮಂಗಳವಾರ (ಮಾ.21) ಚಾಲನೆ ನೀಡಿದರು.

ಮೈಸೂರು ಬ್ಯಾಂಕ್ ಸರ್ಕಲ್‌ ಬಳಿ ಇರುವ ಆಂಜನೇಯ ದೇಗುಲದಲ್ಲಿ ಭಿತ್ತಿಪತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಹಲಾಲ್ ಬಾಯ್ಕಟ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬಳಿಕ ಬೆಂಗಳೂರು ನಗರ ಜಿಲ್ಲಾಧಿಕಾರಿ ಮೂಲಕ ಹಲಾಲ್ ಸರ್ಟಿಫಿಕೇಟ್ ಬ್ಯಾನ್ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.

ಬಾಯ್ಕಾಟ್‌ ಹಲಾಲ್‌ ಅಭಿಯಾನಕ್ಕೆ ಚಾಲನೆ ಕೊಟ್ಟ ವಿಡಿಯೊ ಇಲ್ಲಿದೆ

ಹಿಂದು ಜನ ಜಾಗೃತಿ ವೇದಿಕೆಯ ಮೋಹನ್ ಗೌಡ, ಹಿಂದುಪರ ಹೋರಾಟಗಾರ ಪ್ರಶಾಂತ್ ಸಂಬರ್ಗಿ, ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಅಭಿಯಾನ ನಡೆಯುತ್ತಿದೆ. ಈ ಜಾಗೃತಿ ಅಭಿಯಾನದಲ್ಲಿ ಶ್ರೀ ರಾಮಸೇನೆ, ಹಿಂದು ದಲಿತ ಸೇನೆ, ಹಿಂದು ಜನಜಾಗೃತಿ, ರಾಷ್ಟ್ರ ರಕ್ಷಣಾ ಪಡೆ ಸೇರಿದಂತೆ ಬಜರಂಗದಳದ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

ಹಿಂದು ಜನಜಾಗೃತಿ ಸಮಿತಿಯ ಸದಸ್ಯ ಮೋಹನ್ ಗೌಡ ಪ್ರತಿಕ್ರಿಯಿಸಿದ್ದು, ಹಲಾಲ್ ಮುಕ್ತ ಯುಗಾದಿ ಅಭಿಯಾನ ಮಾಡುತ್ತಿದ್ದೇವೆ. ದಕ್ಷಿಣ ಭಾರತದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ಕರಪತ್ರ ಹಂಚುವ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಸರ್ಕಾರಕ್ಕೂ ಪತ್ರ ನೀಡುವ ಮೂಲಕ ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿದ್ದೇವೆ ಎಂದಿದ್ದಾರೆ.

ಹಲಾಲ್‌ ಬ್ಯಾನ್‌ ಬಗ್ಗೆ ಪ್ರಶಾಂತ್‌ ಸಂಬರಗಿ ಪ್ರತಿಕ್ರಿಯೆ

ಅಭಿಯಾನ ಸಂಬಂಧ ಮಾತನಾಡಿರುವ ಪ್ರಶಾಂತ್ ಸಂಬರ್ಗಿ, ಹಲಾಲ್ ಕಟ್ ಬ್ಯಾನ್ ಮಾಡಲು ಅಭಿಯಾನ ಶುರು ಮಾಡಲಾಗುತ್ತಿದೆ. ರಾಜ್ಯದಲ್ಲಿ ಹಲಾಲ್ ಉತ್ಪನ್ನಗಳು ಬ್ಯಾನ್ ಆಗಬೇಕು. ಹಲಾಲ್ ಮುಕ್ತ ಯುಗಾದಿ ಬಗ್ಗೆ ಕರಪತ್ರ ಹಂಚಲಿದ್ದೇವೆ. ಜನರಿಗೆ ಜಟ್ಕಾ ಕಟ್ ಮಾಂಸ ಬಳಸಲು ಸೂಚಿಸಿದ್ದೇವೆ ಎಂದಿದ್ದಾರೆ.

ಹಿಂದು ಸಂಘಟನೆಗಳು ಹೇಳುವುದು ಏನು?

ಯುಗಾದಿಯ ಸಮಯದಲ್ಲಿ ಹಲಾಲ್ ಮಾಂಸದ ಬದಲು ಜಟ್ಕಾ ಮಾಂಸವನ್ನು ಬಳಸಬೇಕು. ಹಲಾಲ್ ಮಾಂಸದ ಪ್ರಕ್ರಿಯೆಯಲ್ಲಿ ಪ್ರಾಣಿಗಳನ್ನು ಮೆಕ್ಕಾ ದಿಕ್ಕಿಗೆ ಮುಖ ಮಾಡಿ ಕುರಾನ್ ಕಲ್ಮಾಗಳನ್ನು ಹೇಳಲಾಗುತ್ತದೆ. ಅಲ್ಲಾಹ್‌ಗೆ ಅರ್ಪಣೆ ಮಾಡಿದ ನಂತರ, ರಕ್ತಸ್ರಾವವಾಗುವ ಹಾಗೆ ಪ್ರಾಣಿಗಳ ರಕ್ತನಾಳವನ್ನು ಕತ್ತರಿಸಿ, ಕ್ರೂರ ರೀತಿಯಲ್ಲಿ ಪ್ರಾಣಿಗಳ ಹತ್ಯೆ ಮಾಡುವ ಪದ್ಧತಿಯೇ ಹಲಾಲ್ ಆಗಿದೆ. ಇಂತಹ ಎಂಜಲು ಮಾಡಿದ ಮಾಂಸವನ್ನು ಪುನಃ ಹಿಂದು ದೇವರಿಗೆ ಅರ್ಪಿಸುವುದು ಹಿಂದು ಧರ್ಮಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Assault Case: ಫೋನ್‌ ಕಾಲ್‌ ರಿಸೀವ್‌ ಮಾಡಿಲ್ಲವೆಂದು ಚಾಲಕನಿಗೆ ಥಳಿಸಿದ ಕಾರು ಮಾಲೀಕ

ಹಾಗಾಗಿ ಸರ್ಕಾರವು ಹಿಂದುಗಳ ಧಾರ್ಮಿಕ ಹಕ್ಕನ್ನು ಗಮನದಲ್ಲಿರಿಸಿ ರಾಜ್ಯದ ಎಲ್ಲ ಕಡೆ ಜಟ್ಕಾ ಮಾಂಸ ಸಿಗುವ ಹಾಗೆ ವ್ಯವಸ್ಥೆಯನ್ನು ಮಾಡಬೇಕೆಂದು ಒತ್ತಾಯಿಸಿದ್ದಾರೆ. ಯುಗಾದಿಯ ಸಮಯದಲ್ಲಿ ಜಟ್ಕಾ ಮಾಂಸವನ್ನೇ ಖರೀದಿ ಮಾಡಬೇಕೆಂದು ಅಭಿಯಾನವನ್ನು ಶುರು ಮಾಡಿದ್ದಾರೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version