Site icon Vistara News

Weather Report : ಇಂದಿನಿಂದ ಅರ್ಧ ಕರ್ನಾಟಕದಲ್ಲಿ ವರ್ಷಧಾರೆ; ಬೆಂಗಳೂರು ಸ್ವಲ್ಪ ಕೂಲ್!

women with umbrella in Rain and childrens

ಬೆಂಗಳೂರು: ‌ಬುಧವಾರ ಮತ್ತು ಗುರುವಾರ (ಆಗಸ್ಟ್‌ 09, 10) ಅರ್ಧ ಕರ್ನಾಟಕದಲ್ಲಿ ಮಳೆ (Rain News) ಆಗಲಿದ್ದು, ಕೆಲವು ಕಡೆ ಭರ್ಜರಿ ಮಳೆ ಸುರಿದರೆ, ಮತ್ತೆ ಕೆಲವು ಕಡೆ ಸಾಧಾರಣವಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿಯಲ್ಲಿ (Weather report) ತಿಳಿಸಿದೆ.

ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದ್ದರೆ, ಮಲೆನಾಡು ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ ಎಂದು ತಿಳಿಸಲಾಗಿದೆ. ಇನ್ನು ಒಳನಾಡು ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಲಿದೆ.

ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಲಘು ಮಳೆಯಾಗಲಿದೆ. ಇನ್ನು ಉತ್ತರ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮಂಡ್ಯ, ರಾಮನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರಲ್ಲಿ ತಗ್ಗಿದ ಉಷ್ಣಾಂಶ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವೇ ಹೆಚ್ಚಿರುತ್ತದೆ. ಕೆಲವು ಪ್ರದೇಶಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Spandana Vijay Raghavendra: ಅಮ್ಮನ ಜತೆ ಕಣ್ಣೀರು ಸುರಿಸಿದ ಪುನೀತ್ ಮಕ್ಕಳು; ಮಗನನ್ನು ಸಮಾಧಾನ ಮಾಡಲು ವಿಜಯ್‌ ಹರಸಾಹಸ!

ಬಿರುಗಾಳಿ ಎಚ್ಚರಿಕೆ

ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ. ಇರುವ ಸಾಧ್ಯತೆ ಇದೆ. ಆದರೆ, ಮೀನುಗಾರರಿಗೆ ಯಾವುದೇ ಎಚ್ಚರಿಕೆ ನೀಡಿಲ್ಲ. ಬಿರುಗಾಳಿ ಹಿನ್ನೆಲೆಯಲ್ಲಿ ಜನರು ಮರದಡಿ ನಿಲ್ಲುವುದು, ಆಶ್ರಯ ಪಡೆಯುವುದನ್ನು ಮಾಡದಂತೆ ಸೂಚಿಸಲಾಗಿದೆ.

Exit mobile version