ಹೊಸಪೇಟೆ(ವಿಜಯನಗರ): ಹಂಪಿ ಉತ್ಸವ 2024 (Hampi Utsav 2024) ರ ಅಂಗವಾಗಿ ಶನಿವಾರ ತಾಲೂಕಿನ ಮಲಪನಗುಡಿ ಗ್ರಾಮದ ಬಳಿ ನಿರ್ಮಿಸಲಾಗಿದ್ದ ಕುಸ್ತಿ ಅಖಾಡದಲ್ಲಿ ನಡೆದ ಬಯಲು ಕುಸ್ತಿ ಸ್ಪರ್ಧೆಯು ಪ್ರೇಕ್ಷಕರ ಮನಸೂರೆಗೊಳಿಸಿತು.
ಸ್ಪರ್ಧೆಗೆ ಹೊಸಪೇಟೆ ಶಾಸಕ ಎಚ್.ಆರ್. ಗವಿಯಪ್ಪ ಹಾಗೂ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಚಾಲನೆ ನೀಡಿದರು. ಶಾಸಕ ಎಚ್.ಆರ್. ಗವಿಯಪ್ಪ ಅವರು 86 ಕೆ.ಜಿ. ವಿಭಾಗದಲ್ಲಿ ದಾವಣಗೆರೆಯ ಬಸವರಾಜ ಪಾಟೀಲ ಹಾಗೂ ಮರಿಯಮ್ಮನಹಳ್ಳಿಯ ಹನುಮಂತ ಸ್ಪರ್ಧಿಗಳ ನಡುವೆ ಹಸ್ತಲಾಘವ ಮಾಡಿಸಿ, ಕುಸ್ತಿಪಟುಗಳನ್ನು ಅಖಾಡಕ್ಕೆ ಧುಮುಕಿಸಿದರು.
ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕುಸ್ತಿ ಪಟುಗಳು ಭಾಗವಹಿಸಿದ್ದರು. ಈ ಬಾರಿ ಮಹಿಳಾ ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ಕೂಡ ವಿಶೇಷವಾಗಿತ್ತು.
ಇದನ್ನೂ ಓದಿ: Cervical Cancer: ಗರ್ಭಕಂಠದ ಕ್ಯಾನ್ಸರ್ ತಡೆ ಲಸಿಕೆ; ಪ್ಯಾಪ್ ಟೆಸ್ಟ್ ಬಗ್ಗೆ ತಿಳಿದಿರಲಿ
ದಾವಣಗೆರೆಯ ಬಸವರಾಜ ಪಾಟೀಲ ಹಾಗೂ ಮರಿಯಮ್ಮನಹಳ್ಳಿಯ ಹನುಮಂತ ಅವರ ನಡುವೆ ನಡೆದ ಪ್ರಾರಂಭಿಕ ಕುಸ್ತಿ ಸ್ಪರ್ಧೆಯಲ್ಲಿ ಬಸವರಾಜ ಪಾಟೀಲ ಎದುರಾಳಿಯನ್ನು ಮಣಿಸಿ, ಗೆಲುವು ಸಾಧಿಸಿದರು.
ಗದುಗಿನ ತೇಜಸ್ವಿನಿ ಹಾಗೂ ಗದುಗಿನ ಶ್ರೀದೇವಿ ಮಡಿವಾಳ ಹಾಗೂ ಗದುಗಿನ ತೇಜಸ್ವಿನಿ ಬಿಂಗಿ ಅವರ ನಡುವೆ ನಡೆದ ಪ್ರಾರಂಭಿಕ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ತೇಜಸ್ವಿನಿ ಅವರು ವಿಜಯ ಸಾಧಿಸಿದರು. ಈ ಬಾರಿ ಒಟ್ಟು 15 ಮಹಿಳಾ ಕುಸ್ತಿ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಕುಸ್ತಿ ಪಂದ್ಯಗಳಲ್ಲಿ ಸೆಣಸಿದರು.
ವಿವಿಧೆಡೆಗಳಿಂದ ಆಗಮಿಸಿದ್ದ ಸಾರ್ವಜನಿಕರು ಕುತೂಹಲದಿಂದ ಕುಸ್ತಿ ಪಂದ್ಯಗಳನ್ನು ವೀಕ್ಷಿಸಿಲು ಅಖಾಡದ ಬಳಿ ನೆರೆದಿದ್ದರು. ಸುಡು ಬಿಸಿಲನ್ನು ಲೆಕ್ಕಿಸದೆ ಕುಸ್ತಿ ಸ್ಪರ್ಧಾಳುಗಳು ಎದುರಾಳಿಗಳ ವಿರುದ್ಧ ಪಟ್ಟು ಹಾಕುವತ್ತ ಬೀಳಿಸಲು ಹಾತೊರೆಯುತ್ತಿದ್ದರು. ಒಟ್ಟಾರೆ ಕುಸ್ತಿ ಪಂದ್ಯಾವಳಿ ರೋಚಕತೆಯಿಂದ ಕೂಡಿತ್ತು. ಕುಸ್ತಿ ಸ್ಪರ್ಧೆಯ ಫಲಿತಾಂಶ ಇಂತಿದೆ.
ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ಕಡಿಮೆ ಆಯ್ತಾ ಚಳಿ ಅಬ್ಬರ? ಏರಲಿದ್ಯಾ ಬಿಸಿಲ ತಾಪ
ಪುರುಷರ ಕುಸ್ತಿ ಸ್ಪರ್ಧೆಯ ಫಲಿತಾಂಶ
ಹಂಪಿ ಕೇಸರಿ: ಮುಸ್ಲಿಕ್ ಆಲಂ ರಾಜಾಸಾಬ್- ಬೆಳಗಾವಿ.
ಹಂಪಿ ಕಂಠೀರವ: ಆದಿತ್ಯ, ಧಾರವಾಡ.
ಹಂಪಿ ಕಿಶೋರ: ಮಂಜು ಗೊರವರ, ಹರಪನಹಳ್ಳಿ.
ಹಂಪಿ ಕುಮಾರ: ಶರತ್ ಸಾದರ್, ಹರಪನಹಳ್ಳಿ.
ಮಹಿಳೆಯರ ಕುಸ್ತಿ ಸ್ಪರ್ಧೆ ಫಲಿತಾಂಶ:
ಹಂಪಿ ಕೇಸರಿ- ತೇಜಸ್ವಿನಿ ಬಿಂಗಿ, ಗದಗ.
ಹಂಪಿ ಕಂಠೀರವ- ಭುವನೇಶ್ವರಿ ಕೋಳಿವಾಡ, ಗದಗ.
ಹಂಪಿ ಕಿಶೋರಿ- ವೈಷ್ಣವಿ ಇಮ್ಮಡಿಯವರ, ಗದಗ.
ಹಂಪಿ ಕುಮಾರಿ- ಭುವನೇಶ್ವರಿ ಕೆ.ಎಸ್., ಶಿವಮೊಗ್ಗ.
ಎತ್ತಿನ ಬಂಡಿ ಗಾಲಿ ಜೋಡಣೆ ಸ್ಪರ್ಧೆ
ಹಂಪಿ ಉತ್ಸವದ ಅಂಗವಾಗಿ ತಾಲೂಕಿನ ಮಲಪನಗುಡಿ ಗ್ರಾಮದ ಬಳಿ ಎತ್ತಿನ ಬಂಡಿ ಗಾಲಿ ಬಿಚ್ಚಿ ಜೋಡಿಸುವ ಸ್ಪಧೆ ಏರ್ಪಡಿಸಲಾಗಿತ್ತು. ಸಂಪೂರ್ಣ ದೇಸಿ ಸೊಗಡಿನ ಕ್ರೀಡೆಯಾಗಿರುವ ಎತ್ತಿನ ಬಂಡಿ ಗಾಲಿ ಜೋಡಿಸುವ ಸ್ಪರ್ಧೆಗೆ ಇಲ್ಲಿನ ಗ್ರಾಮೀಣ ಪ್ರದೇಶದವರೇ ಉತ್ಸಾಹದಿಂದ ಪಾಲ್ಗೊಂಡಿದ್ದರು. ಕುತೂಹಲದಿಂದ ಕೂಡಿದ ಸ್ಪರ್ಧೆಯಲ್ಲಿ ಬಾಣದಕೆರೆ ಕಣಿವೆಪ್ಪ ಅತ್ಯಂತ ಕಡಿಮೆ ಸಮಯದಲ್ಲಿ ಎತ್ತಿನ ಬಂಡಿ ಗಾಲಿ ಜೋಡಿಸುವ ಮೂಲಕ ಪ್ರಥಮ ಬಹುಮಾನ ಪಡೆದುಕೊಂಡರು. ವೆಂಕೋಬ ಬಾಣದಕೆರೆ ಹಾಗೂ ಮಾರುತಿ ಮ್ಯಾಸಕೆರೆ ಅವರು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು.
ಇದನ್ನೂ ಓದಿ: Actor Nagabhushana: ಆರತಕ್ಷತೆ ದಿನವೇ ಹೊಸ ಸಿನಮಾ ಅನೌನ್ಸ್ ಮಾಡಿದ ನಟ ನಾಗಭೂಷಣ್!
ಗುಂಡು ಎತ್ತುವ ಸ್ಪರ್ಧೆ
ಗ್ರಾಮೀಣ ಭಾಗದಲ್ಲಿ ಜರುಗುವ ಅದರಲ್ಲೂ ಜಾತ್ರೆ, ಉತ್ಸವದ ಸಂದರ್ಭಗಳಲ್ಲಷ್ಟೇ ಜರುಗುವ ಕಲ್ಲಿನ ಗುಂಡು ಎತ್ತುವಂತಹ ರೋಚಕ ಸ್ಪಧೆಯನ್ನು ಈ ಬಾರಿಯ ಹಂಪಿ ಉತ್ಸವದ ಸಂಗವಾಗಿ ಮಲಪನಗುಡಿ ಗ್ರಾಮದ ಬಳಿ ಕಲ್ಲಿನ ಗುಂಡು ಎತ್ತುವಂತಹ ರೋಚಕ ಸ್ಪರ್ಧೆ ಆಯೋಜಿಸಲಾಗಿತ್ತು. ನೆರೆದಿದ್ದ ಪ್ರೇಕ್ಷಕರು ಸ್ಪರ್ಧಾಳುಗಳಿಗೆ ಚಪ್ಪಾಳೆ, ಸಿಳ್ಳೆಗಳ ಮೂಲಕ ಹುರಿದುಂಬಿಸಿದರು. ಅಂತಿಮವಾಗಿ ವಿಜಯಪುರದ ಶೇಖಪ್ಪ 155 ಕೆ.ಜಿ. ಗುಂಡು ಎತ್ತುವ ಮೂಲಕ ಮೊದಲ ಬಹುಮಾನ ತಮ್ಮದಾಗಿಸಿಕೊಂಡರು. ಗಂಗಾಧರ ಮರಿಯಮ್ಮನಹಳ್ಳಿ ಹಾಗೂ ಹೊಸಪೇಟೆಯ ಸೀಗೇನಹಳ್ಳಿ ಚಂದ್ರಪ್ಪ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರು.