ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿ ಉತ್ಸವದ (Hampi utsava) ದಿನಾಂಕವನ್ನು ಮರುನಿಗದಿ ಮಾಡಲಾಗಿದೆ. ಜನವರಿ ಆರಂಭದಲ್ಲಿ ನಡೆಯುತ್ತಿದ್ದ ಉತ್ಸವ ಈ ಬಾರಿ ಸಂಕ್ರಾಂತಿ ಬಳಿಕವೇ ನಡೆಯಲಿದೆ ಎಂದು ವಿಸ್ತಾರ ನ್ಯೂಸ್ ಹಿಂದೆಯೇ ವರದಿ ಮಾಡಿತ್ತು. ಇದೀಗ ಜನವರಿ ತಿಂಗಳಾಂತ್ಯದಲ್ಲಿ ಮೂರು ದಿನಗಳ ಕಾಲ ಹಂಪಿ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಕಲ ಸಿದ್ಧತೆಯನ್ನು ನಡೆಸುವಂತೆ ವಿಜಯನಗರ ಜಿಲ್ಲಾ ಉಸ್ತವಾರಿ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ನೀಡಿದ್ದಾರೆ.
ಹೊಸಪೇಟೆಯಲ್ಲಿ ಅಧಿಕಾರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಹಂಪಿ ಉತ್ಸವವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಯಿತು. ಈ ಮೊದಲು 2023ರ ಜನವರಿ ತಿಂಗಳ 7 ಮತ್ತು 8 ರಂದು ಎರಡು ದಿನಗಳ ಕಾಲ ಹಂಪಿ ಉತ್ಸವ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಅದೇ ಸಮಯದಲ್ಲಿ ಹಾವೇರಿಯಲ್ಲಿ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಇರುವುದರಿಂದ ಕಾರ್ಯಕ್ರಮವನ್ನು ಜನವರಿ ತಿಂಗಳಾಂತ್ಯಕ್ಕೆ ನಡೆಸಲು ತೀರ್ಮಾನಿಸಲಾಗಿದೆ. ಜನವರಿ 27, 28 ಮತ್ತು 29ರಂದು ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಸಲು ದಿನಾಂಕವನ್ನು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ. ಆದರೆ, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ದಿನಾಂಕವನ್ನು ಅಂತಿಮಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕೋವಿಡ್ ಸಾಂಕ್ರಾಮಿಕದ ಕಾರಣ ಕಳೆದ ಎರಡು ವರ್ಷಗಳಿಂದ ಹಂಪಿ ಉತ್ಸವವನ್ನು ಆಯೋಜಿಸಲಾಗಿರಲಿಲ್ಲ. ಹೀಗಾಗಿ ಈ ಬಾರಿ ಕಳೆದ ಎಲ್ಲಾ ಹಂಪಿ ಉತ್ಸವಗಳಿಗಿಂತಲೂ ಅದ್ದೂರಿಯಾಗಿ ಆಚರಿಸಲಾಗುವುದು. ಮೂರು ದಿನಗಳ ಕಾಲ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಸಾರುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಜನವರಿ ತಿಂಗಳಾಂತ್ಯಕ್ಕೆ ಹಂಪಿ ಉತ್ಸವ ನಡೆಯಲೇಬೇಕು. ವಿಜಯನಗರ ಗತ ವೈಭವವನ್ನು ಮರುಸೃಷ್ಟಿಸುವ ರೀತಿಯಲ್ಲಿ ಉತ್ಸವ ಆಯೋಜಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಉತ್ಸವ ಆಚರಣೆಗೆ ಅನುದಾನ ಈಗಾಗಲೇ 2021-22 ನೇ ಸಾಲಿನ ಹಂಪಿ ಉತ್ಸವ ಆಚರಣೆಯ ಸಲುವಾಗಿ ಕನ್ನಡ ಸಂಸ್ಕೃತಿ ಇಲಾಖೆಯಿಂದ 4.10 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿದೆ. ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿದೆ. 6 ಕೋಟಿ ರೂಪಾಯಿಗಳ ಅನುದಾನ ನೀಡುವಂತೆ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯಲಾಗಿದೆ. ಅಗತ್ಯ ಅನುದಾನವನ್ನು ನೀಡುವಂತೆ ಈಗಾಗಲೇ ಸರಕಾರದ ವಿವಿಧ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ಇದಲ್ಲದೆ ಖಾಸಗಿ ಕಂಪನಿಗಳ ಸಿಎಸ್‌ಆರ್ ನಿಧಿಯನ್ನು ನೀಡುವಂತೆ ಕೋರಲಾಗುವುದು ಎಂದರು.
2 ಮುಖ್ಯ ವೇದಿಕೆಗಳಲ್ಲಿ ಕಾರ್ಯಕ್ರಮ
ಈ ಬಾರಿ ಎರಡು ಭವ್ಯ ಮುಖ್ಯ ವೇದಿಕೆಗಳನ್ನು ನಿರ್ಮಿಸಲು ಯೋಜಿಸಲಾಗಿದ್ದು, ಕಲಾವಿದರುಗಳ ಲಭ್ಯತೆ ಹಾಗೂ ಕಾರ್ಯಕ್ರಮಗಳ ಸೇರ್ಪಡೆಯ ಮೇಲೆ ಇನ್ನೂ 2 ಉಪ ವೇದಿಕೆಗಳನ್ನು ಸೇರ್ಪಡಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ವಿಜಯನಗರದ ಭವ್ಯತೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಹಂಪಿ ಉತ್ಸವ ಬಹಳ ಮಹತ್ವದ್ದು. ನೂತನ ಜಿಲ್ಲೆಯಾದ ನಂತರದ ಮೊದಲ ಉತ್ಸವವನ್ನು ಅದ್ಧೂರಿಯಾಗಿ ಆಚರಿಸುವುದು ನಮ್ಮ ಉದ್ದೇಶವಾಗಿದೆ. ಈ ಬಗ್ಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜನವರಿ ಕೊನೆಯ ವಾರದಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ದಿನಾಂಕ ಅಂತಿಮ ಮಾಡುತ್ತೇವೆ ಎಂದು ಶಶಿಕಲಾ ಜೊಲ್ಲೆ ಹೇಳಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಎಸ್ಪಿ ಶ್ರೀಹರಿಬಾಬು, ಸಂಸದ ದೇವೇಂದ್ರಪ್ಪ, ನಗರಸಭೆ ಅಧ್ಯಕ್ಷೆ ಸುಂಕಮ್ಮ ಸೇರಿದಂತೆ ಹಲವು ಜನಪ್ರತಿನಿಧಿಗಳು ಇದ್ದರು.
ಹಿಂದಿನ ವರದಿ | Hampi utsav | ಹಂಪಿ ಉತ್ಸವದ ಟೈಮಲ್ಲಿ ಸಾಹಿತ್ಯ ಸಮ್ಮೇಳನ, ಸಂಕ್ರಾಂತಿ ಬಳಿಕವೇ ಹೊಸ ಮುಹೂರ್ತ?