ವಿಜಯನಗರ: ಇಲ್ಲಿನ ಹೊಸಪೇಟೆ ತಾಲೂಕಿನ ಕಮಲಾಪುರ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಜೂಲಾಕಲ್ ಪಾರ್ಕ್‌ಗೆ (Hampi Zoo) ನೂತನ ಅತಿಥಿಯೊಂದರ ಆಗಮನವಾಗಿದೆ.
ಬಿಹಾರದ ಪಾಟ್ನಾ ಮೃಗಾಲಯದಿಂದ ಜಿರಾಫೆಯ ಆಗಮನವಾಗಿದೆ. ಜಿರಾಫೆಯನ್ನು ಹೊಂದಿರುವ ರಾಜ್ಯದ ಎರಡನೇ ಹಾಗೂ ಉತ್ತರ ಕರ್ನಾಟಕದ ಪ್ರಥಮ ಮೃಗಾಲಯ ಎಂಬ ಹೆಗ್ಗಳಿಕೆಗೆ ಈ ಮೃಗಾಲಯವು ಪಾತ್ರವಾಗಿದೆ.
2017ರಲ್ಲಿ ಪ್ರಾರಂಭಗೊಂಡ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯ ರಾಜ್ಯದ ಮೂರನೇ ಹುಲಿ ಮತ್ತು ಸಿಂಹ ಸಫಾರಿ ಸ್ಥಳವಾಗಿದೆ. ಈಗಾಗಲೇ ಉದ್ಯಾನವನದಲ್ಲಿ ಹುಲಿ, ಸಿಂಹ, ಸ್ಪಾಟರ್ ಜಿಂಕೆ, ಸಾಂಬಾರ್, ಬಾರ್ಕಿಂಗ್ ಜಿಂಕೆ ಮತ್ತು ಇತರ ಪ್ರಾಣಿಗಳಿವೆ. ಮೊಸಳೆಗಳು, ಕತ್ತೆಕಿರುಬ, ಚಿರತೆ, ಕರಡಿ, ಆಮೆ, ನರಿ ಮತ್ತು ಲಂಗೂರ್ ಸೇರಿದಂತೆ 80ಕ್ಕೂ ಹೆಚ್ಚಿನ ಜಾತಿಯ ಪಕ್ಷಿಗಳಿವೆ. ಇವುಗಳ ಗುಂಪಿಗೆ ಹೊಸದಾಗಿ ಜಿರಾಫೆ ಸೇರ್ಪಡೆಯಾಗಿದೆ.
ಉದ್ದನೆಯ ಗೋಣು, ಉದ್ದವಾದ ಕಾಲುಗಳು ಹಾಗೂ ಎತ್ತರದ ಮೈಕಟ್ಟು ಹೊಂದಿರುವ ಸಸ್ಯಾಹಾರಿ ಪ್ರಾಣಿಯಾಗಿರುವ ಜಿರಾಫೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮೃಗಾಲಯದ ಪ್ರಾಣಿಗಳ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಜಿರಾಫೆಯನ್ನು ತರಿಸಿಕೊಳ್ಳಲಾಗಿದೆ. ಮೈಸೂರು ಮೃಗಾಲಯ ನೀಡಿದ ಜೀಬ್ರಾ, ಕಾಡೆಮ್ಮೆ ಮತ್ತಿತರ ಪ್ರಾಣಿಗಳ ಬದಲಾಗಿ ನಾಲ್ಕು ವರ್ಷದ ಹೆಣ್ಣು ಜಿರಾಫೆಯನ್ನು ಪಾಟ್ನಾ ಮೃಗಾಲಯವು ಕರ್ನಾಟಕಕ್ಕೆ ನೀಡಿದ್ದು, ಅದು ಹಂಪಿ ಈಗ ಮೃಗಾಲಯವನ್ನು ತಲುಪಿದೆ.
ಈ ಜಿರಾಫೆಯನ್ನು ಕರೆತರುವುದಕ್ಕಾಗಿ ಒಂದು ತಿಂಗಳ ಹಿಂದೆಯೇ ಪಾಟ್ನಾ ಮೃಗಾಲಯದ ಜಿರಾಫೆ ಪಂಜರದಲ್ಲಿ ದೊಡ್ಡ ಬೋನ್ ಅಳವಡಿಸಲಾಗಿತ್ತು. ಹಲವು ಬಾರಿ ಬೋನ್ ಒಳಗೆ ಹೋಗಿದ್ದ ಜಿರಾಫೆಗೆ ಅದರಲ್ಲಿನ ವಾತಾವರಣ ರೂಢಿಯಾಗಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಅದನ್ನು ಸಾಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಆನಂದ್ ಸಿಂಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Political clash: ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಆದವನ ಮೇಲೆ ಹಲ್ಲೆ; ನಾಲ್ವರ ಮೇಲೆ ಎಫ್‌ಐಆರ್ ದಾಖಲು
ಜಿರಾಫೆಯನ್ನು ತರಲು ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಉಪ ಸಂರಕ್ಷಣಾಧಿಕಾರಿ ಎಂ.ಎನ್.ಕಿರಣ್ ನೇತೃತ್ವದಲ್ಲಿ ಎಂಟು ಜನ ಸಿಬ್ಬಂದಿ ಸತತ 8 ದಿನಗಳ ಕಾಲ 2500 ಕಿ.ಮೀ. ದೂರ ಕ್ರಮಿಸಿ ಜಿರಾಫೆಯೊಂದಿಗೆ ಕಮಲಾಪುರ ಸಮೀಪದ ಹಂಪಿ ಜೂಗೆ ತಲುಪಿದ್ದಾರೆ. ಸದ್ಯ ಜಿರಾಫೆಗಾಗಿ ವಿಶೇಷವಾದ ಆವರಣವನ್ನು ಸಿದ್ಧಪಡಿಸಲಾಗಿದ್ದು, ಅದಕ್ಕೆ ಬೇಕಾದ ಆಹಾರ ಹಾಗೂ ಆರೈಕೆಯನ್ನು ಮಾಡಲಾಗುತ್ತಿದೆ.