Site icon Vistara News

Hanuma Jayanti | ಶ್ರೀರಂಗಪಟ್ಟಣದಲ್ಲಿ ಕೇಸರಿ ಧ್ವಜ, ಬಂಟಿಂಗ್ಸ್‌ ತೆರವು; ಆಕ್ರೋಶಕ್ಕೆ ಮಣಿದು ವಾಪಸ್‌ ಕಟ್ಟಿದ ಪುರಸಭೆ

srirangapattana flex ಹನುಮ ಜಯಂತಿ ಫ್ಲೆಕ್ಸ್‌ ಬಂಟಿಂಗ್ಸ್‌ ತೆರವು ವಿವಾದ

ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಹನುಮ ಜಯಂತಿ (Hanuma Jayanti) ಪ್ರಯುಕ್ತ ಪ್ರಮುಖ ಬೀದಿಗಳಲ್ಲಿ ಹಾಕಲಾಗಿದ್ದ ಕೇಸರಿ ಧ್ವಜ, ಬಂಟಿಂಗ್ಸ್‌ಗಳನ್ನು ಸೋಮವಾರ (ಡಿ. ೫) ಏಕಾಏಕಿ ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ ಹಿನ್ನೆಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದಲ್ಲದೆ, ಹಿಂದು ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಕೊನೆಗೆ ಜನಾಕ್ರೋಶಕ್ಕೆ ಮಣಿದ ಪುರಸಭೆ ಅಧಿಕಾರಿಗಳು ವಾಪಸ್‌ ಫ್ಲೆಕ್ಸ್‌ಗಳನ್ನು ಕಟ್ಟಿಸಿದ್ದಾರೆ.

ಶ್ರೀರಂಗಪಟ್ಟಣದ ಪುರಸಭೆ ವೃತ್ತದಲ್ಲಿ ಹಿಂದು ಸಂಘಟನೆಗಳು ಭಾನುವಾರ ಸಂಕೀರ್ತನಾ ಯಾತ್ರೆ ಅಂಗವಾಗಿ ಕೇಸರಿ ಬಣ್ಣದ ಬಾವುಟ, ಬಂಟಿಂಗ್ಸ್‌ಗಳನ್ನು ಕಟ್ಟಿದ್ದರು. ಆದರೆ, ಈ ವೇಳೆ ಮುಸ್ಲಿಮರೊಬ್ಬರಿಗೆ ಸೇರಿದ ಮನೆ ಮೇಲಿದ್ದ ಹಸಿರು ಬಾವುಟವನ್ನು ಕಿತ್ತುಹಾಕಿ, ಕೇಸರಿ ಧ್ವಜವನ್ನು ನೆಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಪುರಸಭೆ ವೃತ್ತದಲ್ಲಿ ಬಾವುಟಗಳನ್ನು ತೆರವುಗೊಳಿಸಲಾಯಿತು. ಇದು ಹಿಂದು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಭಜನೆ ಮಾಡಿ ಪ್ರತಿಭಟನೆ
ಪಟ್ಟಣ ಪುರಸಭೆಯ ಮುಂದೆ ಧರಣಿ ಕುಳಿತ ಹಿಂದು ಸಂಘಟನೆಗಳ ಕಾರ್ಯಕರ್ತರು ಹಾಗೂ ಹನುಮ ಭಕ್ತರು ಭಜನೆ ಮಾಡುವ ಮೂಲಕ ಆಕ್ರೋಶವನ್ನು ಹೊರಹಾಕಿದರು. ಹಿಂದು ಜಾಗರಣೆ ವೇದಿಕೆ ಸಂಚಾಲಕ ಚಂದನ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಅಲ್ಲದೆ, ಹಿಂದು ವಿರೋಧಿ ನೀತಿ ಎಂದು ಧಿಕ್ಕಾರವನ್ನು ಕೂಗಲಾಗಿದೆ. ಪುನಃ ಫ್ಲೆಕ್ಸ್‌ಗಳನ್ನು ಹಾಕದಿದ್ದರೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.

ಹನುಮ ಭಕ್ತರ ಪ್ರತಿಭಟನೆಗೆ ಮಣಿದು ಮತ್ತೆ ಅದೇ ಸ್ಥಳದಲ್ಲಿ ಯಥಾಸ್ಥಿತಿ ಬಂಟಿಂಗ್ಸ್ ಕಟ್ಟಲು ಪುರಸಭೆ ಸಿಬ್ಬಂದಿ ಮುಂದಾಗಿದ್ದು, ಎಲ್ಲವನ್ನೂ ಕಟ್ಟಿದ ಬಳಿಕ ಪ್ರತಿಭಟನಾಕಾರರು ಸ್ಥಳದಿಂದ ತೆರಳಿದ್ದಾರೆ. ಈ ವೇಳೆ ಅಹಿತಕರ ಘಟನೆ ಆಗದಂತೆ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಇದನ್ನೂ ಓದಿ | Criminal politics | ರೌಡಿಶೀಟರ್‌ಗಳಿಗೆ ಕ್ಲೀನ್‌ ಚಿಟ್‌ ಕೊಟ್ಟಿಲ್ಲ ಎಂದ ಸಿ.ಟಿ ರವಿ, ಕೆಪಿಸಿಸಿ ಅಧ್ಯಕ್ಷರೇ ಕೊತ್ವಾಲ ಶಿಷ್ಯ ಎಂದ ರೇಣುಕಾಚಾರ್ಯ

Exit mobile version