ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಹನುಮ ಜಯಂತಿಯ (Hanuma Jayanti) ಅಂಗವಾಗಿ ಭಾನುವಾರ (ಡಿ. ೪) ನಡೆದಿದ್ದ ಸಂಕೀರ್ತನಾ ಯಾತ್ರೆ ವೇಳೆ ಮುಸ್ಲಿಮರೊಬ್ಬರಿಗೆ ಸೇರಿದ ಮನೆ ಮೇಲೆ ಹತ್ತಿದ ನಾಲ್ವರು ಹನುಮ ಮಾಲಾಧಾರಿಗಳು ಮೇಲಿದ್ದ ಹಸಿರು ಬಾವುಟವನ್ನು ಕಿತ್ತು ಹಾಕಿ ಕೇಸರಿ ಬಾವುಟವನ್ನು ಹಾರಿಸಿದ ಪ್ರಕರಣ ಸಂಬಂಧ ಸೋಮವಾರ (ಡಿ.೫) ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಗಂಜಾಂನ ಸೈಯದ್ ರೆಹಮಾನ್ ಎಂಬುವವರ ಮನೆ ಮೇಲೆ ಇದ್ದ ಹಸಿರು ಧ್ವಜವನ್ನು ಕಿತ್ತು ಕೇಸರಿ ಧ್ವಜವನ್ನು ಹಾರಿಸಲಾಗಿತ್ತು. ಇದು ವ್ಯಾಪಕ ಟೀಕೆ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು. ನಾಲ್ವರು ಹನುಮ ಮಾಲಾಧಾರಿಗಳು ದುರುದ್ದೇಶಪೂರ್ವಕವಾಗಿ ಮನೆ ಮೇಲೆ ಹತ್ತಿದ್ದು, ಹಸಿರು ಧ್ವಜವನ್ನು ಕಿತ್ತು ಹಾಕಿದ್ದಾರೆ. ಬಳಿಕ ಆ ಜಾಗದಲ್ಲಿ ಕೇಸರಿ ಧ್ವಜವನ್ನು ಹಾರಿಸಿ ಘೋಷಣೆ ಕೂಗಿ ಧರ್ಮ ಪ್ರಚೋದನೆ ನಡೆಸಿದ್ದಾರೆ ಎಂದು ಮನೆ ಮಾಲೀಕ ದೂರು ನೀಡಿದ್ದಾರೆ.
ಅಲ್ಲದೆ, ಈ ವೇಳೆ ಮನೆಯ ಸ್ವತ್ತುಗಳು ಹಾನಿಗೊಳಪಟ್ಟಿವೆ. ಜತೆಗೆ ಮನೆಯಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನನಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಇದರ ಬಗ್ಗೆ ನನ್ನ ಸಮುದಾಯದವರಿಗೂ ವಿಷಯವನ್ನು ತಿಳಿಸಿದ್ದೇನೆ. ಅವರೂ ಸಹ ದೂರು ನೀಡಿದ್ದಾರೆ ಎಂದು ಸೈಯದ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಏನಿದು ಪ್ರಕರಣ?
ಹನುಮ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲೆಯ ಗಂಜಾಂನಲ್ಲಿ ಹಮ್ಮಿಕೊಂಡಿದ್ದ ಸಂಕೀರ್ತನಾ ಯಾತ್ರೆ ಮೆರವಣಿಗೆಯಲ್ಲಿ ಹನುಮ ಮಾಲಾಧಾರಿಯೊಬ್ಬ ಮುಸ್ಲಿಮರ ಮನೆಯ ಮೇಲಿದ್ದ ಹಸಿರು ಧ್ವಜ ತೆಗೆದು, ಕೇಸರಿ ಧ್ವಜ ನೆಟ್ಟಿದ್ದಾನೆ. ಇದಕ್ಕೆ ಕೆಲವು ಹನುಮ ಮಾಲಾಧಾರಿಗಳು ಬೆಂಬಲ ನೀಡಿದ್ದರು ಎಂದು ಹೇಳಲಾಗಿದೆ. ಬಳಿಕ ಅಲ್ಲಿಂದ ಜಾಮಿಯಾ ಮಸೀದಿ ಬಳಿ ಮೆರವಣಿಗೆ ತೆರಳಿತ್ತು. ಮಧ್ಯಾಹ್ನ ಸುಮಾರು ೧ ಗಂಟೆ ವೇಳೆಗೆ ಈ ಘಟನೆ ನಡೆದಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಕೊಡಗಿನ ಹೋಮ್‌ಸ್ಟೇನಲ್ಲಿ ತಂಗಿದ್ದರೇ ಕುಕ್ಕರ್ ಬಾಂಬ್ ಸ್ಫೋಟದ ಹಿಂದಿನ 11 ಆರೋಪಿಗಳು?