ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಎದುರು ಸಾವಿರಾರು ಹನುಮ ಮಾಲಾಧಾರಿಗಳು ಜಮಾಯಿಸಿ ಪ್ರತಿಭಟನೆ ನಡೆಸಿ, ಮಸೀದಿ ನಿರ್ಮಾಣವಾಗಿರುವ ಜಾಗ ನಮ್ಮದು, ಸ್ಥಳದಲ್ಲಿ ಹನುಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಘೋಷಣೆಗಳನ್ನು ಕೂಗಿದ್ದರಿಂದ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಯಿತು. ಹನುಮ ಜಯಂತಿ ಹಿನ್ನೆಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹನುಮ ಸಂಕೀರ್ತನಾ ಯಾತ್ರೆ (Hanuman sankirtan yatra) ವೇಳೆ ಹನುಮ ಮಾಲಾಧಾರಿಗಳು ಮಸೀದಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಅಲ್ಲದೆ, ಒಂದು ಕಡೆ ಮನೆಯೊಂದರ ಮೇಲೆ ಮುಸ್ಲಿಂ ಬಾವುಟವನ್ನು ಕಿತ್ತುಹಾಕಿ ಕೇಸರಿ ಧ್ವಜವನ್ನು ಸ್ಥಾಪನೆ ಮಾಡಿರುವುದು ಸಹ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ.
ಗಂಜಾಂ ಬಳಿಯ ನಿಮಿಷಾಂಭ ದೇವಾಲಯದ ಬಳಿಯ ಆಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಹನುಮ ಸಂಕೀರ್ತನಾ ಯಾತ್ರೆ ಆರಂಭವಾಯಿತು. ಕೇಸರಿ ಧ್ವಜಗಳೊಂದಿಗೆ ಸಾವಿರಾರು ಹನುಮ ಮಾಲಾಧಾರಿಗಳು ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ತೆರಳುತ್ತಿದ್ದರು. ಆದರೆ, ಯಾತ್ರೆ ಜಾಮಿಯಾ ಮಸೀದಿ ಬಳಿಗೆ ಬಂದಾಗ ಹನುಮ ಮಾಲಾಧಾರಿಗಳು, ರಸ್ತೆಯಲ್ಲಿ ಕುಳಿತು ಮಸೀದಿ ಜಾಗ ನಮ್ಮದು, ಮಂದಿರ ಕಟ್ಟುತ್ತೇವೆ. ಆಂಜನೇಯ ದೇಗುಲ ಕೆಡವಿ ಮಸೀದಿ ಕಟ್ಟಲಾಗಿದೆ. ನಮಗೆ ನ್ಯಾಯ ಬೇಕು ಎಂದು ಪಟ್ಟುಹಿಡಿದರು.
ಬಳಿಕ ಬೇಕೆ ಬೇಕು ನ್ಯಾಯಬೇಕು ಎಂದು ಘೋಷಣೆಗಳನ್ನು ಕೂಗುತ್ತಾ ಮಾಲಾಧಾರಿಗಳು, ಮಸೀದಿಯತ್ತ ನುಗ್ಗಲು ಯತ್ನಿಸಿದರು. ಇದಕ್ಕೆ ಪೊಲೀಸರು ಅಡ್ಡಿಪಡಿಸಲು ಯತ್ನಿಸಿದಾಗ ಹನುಮ ಭಕ್ತರು ಹಾಗೂ ಪೊಲೀಸರ ನಡುವೆ ನೂಕು ನುಗ್ಗಲು ಉಂಟಾಯಿತು. ಈ ವೇಳೆ ಧಿಕ್ಕಾರ ಘೋಷಣೆಗಳನ್ನು ಕೂಗಿ ಹನುಮ ಮಾಲಾಧಾರಿಗಳು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ | Karnataka Election 2023 | ಶಿವಮೊಗ್ಗ ಜಿಲ್ಲೆಯಲ್ಲಿ ಕಮಲ ಆಪರೇಷನ್: ಇಬ್ಬರು ಖ್ಯಾತ ವ್ಯಕ್ತಿಗಳು ಬಿಜೆಪಿ ಸೇರ್ಪಡೆ
ಹಿಂದು ಜಾಗರಣಾ ವೇದಿಕೆ ಮುಖಂಡ ಉಲ್ಲಾಸ್ ಮಾತನಾಡಿ, ಜಾಮಿಯಾ ಮಸೀದಿಯನ್ನು ಕೈಯಲ್ಲಿ ಮುಟ್ಟಿದರೂ ಅದು ಹಿಂದು ದೇವಾಲಯವೆಂದು ಗೊತ್ತಾಗುತ್ತದೆ. ಮೇಲುಕೋಟೆಯ ದೇವಾಲಯದ 7 ಅರ್ಚಕರನ್ನು ಕೊಂದಿರುವ ಟಿಪ್ಪು ಸುಲ್ತಾನ್, ಬೆಂಗಳೂರು-ಮೈಸೂರು ರಸ್ತೆಯ ಬದಿಯಲ್ಲಿದ್ದ ಮೂಡಲಬಾಗಿಲು ಆಂಜನೇಯ ಸ್ವಾಮಿ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಾಣ ಮಾಡಿದ್ದಾನೆ ಎಂದು ಕಿಡಿಕಾರಿದರು.
ಮಸೀದಿ ಜಾಗ ಹನುಮ ದೇವಾಲಯಕ್ಕೆ ಸೇರಿದ್ದಾಗಿದೆ. ಮೂಡಲಬಾಗಿಲು ಆಂಜನೇಯ ದೇವಾಲಯ ನಿರ್ಮಾಣ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ಹೀಗಾಗಿ ಹನುಮ ಮಾಲಾಧಾರಿಗಳು ಹಳ್ಳಿ ಹಳ್ಳಿಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಅದರ ಪರಿಣಾಮ ಆರಂಭದಲ್ಲಿ ನೂರು ಇನ್ನೂರು ಸಂಖ್ಯೆಯಲ್ಲಿ ಯಾತ್ರೆಗೆ ಬರುತ್ತಿದ್ದ ಹನುಮ ಮಾಲಾಧಾರಿಗಳು ಇಂದು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದಾರೆ ಎಂದು ಹೇಳಿದರು.
ಹಿಂದು ಜಾಗರಣ ವೇದಿಕೆ ಲೋಹಿತ್ ಅರಸ್ ಮಾತನಾಡಿ, ಟಿಪ್ಪು, ಹೈದರಾಲಿ ಮೆರೆದ ಕ್ರೌರ್ಯವನ್ನು ಜನರಿಗೆ ತಿಳಿಸುವ ಅಗತ್ಯವಿದೆ. ಇವರು ಹಿಂದು ಸಮಾಜಕ್ಕೆ ದ್ರೋಹ ಬಗೆದಿದ್ದಾರೆ. ಜನರಿಗೆ ಇದನ್ನು ತಿಳಿಸುವ ಕೆಲಸವನ್ನು ಹಿಂದು ಜಾಗರಣ ವೇದಿಕೆ ಮಾಡುತ್ತಿದೆ. ಮಸೀದಿಯನ್ನು ಕೆಡವಿ ಹನುಮ ಮಂದಿರ ಕಟ್ಟಬೇಕು. ಮಂದಿರ ಕಟ್ಟುವವರೆಗೂ ಈ ಹೋರಾಟ ನಡೆಯುತ್ತದೆ ಎಂದು ಹೇಳಿದ್ದಾರೆ.
ಹೈದರಾಲಿ ಮತ್ತು ಟಿಪ್ಪು ಹೇಡಿ ಮತ್ತು ಕೇಡಿಗಳಾಗಿದ್ದಾರೆ. ಟಿಪ್ಪು ಮೈಸೂರು ಹುಲಿಯಲ್ಲ. ಡಾಗ್ ಆಫ್ ಶ್ರೀರಂಗಪಟ್ಟಣ ಆಗಿದ್ದಾನೆ. ಶಸ್ತ್ರ ಇಲ್ಲದ ಅರ್ಚಕರನ್ನು ಕೊಲೆ ಮಾಡಿದ ಟಿಪ್ಪು, ಹುಲಿ ಅಲ್ಲ ನಾಯಿ. ಮುಸ್ಲಿಮರಿಗೆ ಮಸೀದಿ ಮಂದಿರ ಎಂದು ಗೊತ್ತಿದೆ. ಹೀಗಾಗಿ ನಮ್ಮ ಮಂದಿರವನ್ನು ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದರು.
ಹಸಿರು ಧ್ವಜ ತೆಗೆದು ಕೇಸರಿ ಧ್ವಜ ಕಟ್ಟಿದ ಮಾಲಾಧಾರಿ
ಹನುಮ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲೆಯ ಗಂಜಾಂನಲ್ಲಿ ಹಮ್ಮಿಕೊಂಡಿದ್ದ ಸಂಕೀರ್ತನಾ ಯಾತ್ರೆ ಮೆರವಣಿಗೆಯಲ್ಲಿ ಹನುಮ ಮಾಲಾಧಾರಿಯೊಬ್ಬ, ಮುಸ್ಲಿಮರ ಮನೆಯ ಮೇಲಿದ್ದ ಹಸಿರು ಧ್ವಜ ತೆಗೆದು, ಕೇಸರಿ ಧ್ವಜ ನೆಟ್ಟಿರುವುದು ಕಂಡುಬಂದಿದೆ.
ಗಂಜಾಂ ಗ್ರಾಮದಲ್ಲಿ ನೂರಾರು ಮಾಲಾಧಾರಿಗಳ ಸಮ್ಮುಖದಲ್ಲಿ ಸಂಕೀರ್ತನಾ ಯಾತ್ರೆ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಮಾಲಾಧಾರಿ ಏಕಾಏಕಿ ಮುಸ್ಲಿಮರ ಮನೆ ಮೇಲೆ ಹತ್ತಿ, ಹಸಿರು ಧ್ವಜ ಕಿತ್ತೆಸೆದು ಕೇಸರಿ ಧ್ವಜ ಪ್ರತಿಷ್ಠಾಪನೆ ಮಾಡಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿ, ಕೆಳಗಿಳಿದು ಬಾ ಎಂದು ಸೂಚಿಸಿದ್ದಾರೆ. ಆದರೆ ಮಾಲಾಧಾರಿಯು ಮನೆಯ ಮೇಲಿಂದ ಹಸಿರು ಧ್ವಜ ಕೆಳಗೆಸೆದು ಮತ್ತೆ ಮೆರವಣಿಗೆಯಲ್ಲಿ ಸೇರ್ಪಡೆಯಾದ. ನಂತರ ಪೊಲೀಸರು ಹಿಡಿಯಲು ಯತ್ನಿಸಿದಾಗ ಮಾಲಾಧಾರಿ ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ | Panchamasali Reservation | ಪಂಚಮಸಾಲಿ ಮೀಸಲಾತಿ ಹೋರಾಟ ಸ್ವಾರ್ಥದ್ದು, ಒಕ್ಕಲಿಗರಿಗೆ ನನ್ನ ಬೆಂಬಲ: ಚೇತನ್ ಅಹಿಂಸಾ