ಕೊಡುಗು/ಬೆಳಗಾವಿ/ವಿಜಯಪುರ: ದೇಶಾದ್ಯಂತ ಹರ್ ಘರ್ ತಿರಂಗ (Har Ghar Tiranga) ಅಭಿಯಾನ ಹಿನ್ನೆಲೆಯಲ್ಲಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಕೊಡಗಿನಲ್ಲಿ ಮಳೆಯನ್ನೂ ಲೆಕ್ಕಿಸದೆ ಜನರು ಮನೆ ಮನೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ತಮ್ಮ ಮನೆಯಲ್ಲಿ ತ್ರಿವರ್ಣ ಧ್ವಜ ಏರಿಸಿದರು.
75 ಕೆಜಿ ತೂಕವುಳ್ಳ ಧ್ವಜದ ಆರೋಹಣ
ಬೆಳಗಾವಿಯಲ್ಲಿ ದೇಶದ ಅತಿ ಎತ್ತರದ ಧ್ವಜಸ್ತಂಭದ ಮೇಲೆ ಧ್ವಜಾರೋಹಣ ನೆರವೇರಿಸಲಾಯಿತು. ಧ್ವಜಾರೋಹಣಕ್ಕೂ ಮುನ್ನ ಧ್ವಜಸ್ತಂಭಕ್ಕೆ ಬಿಜೆಪಿ ಶಾಸಕ ಅನಿಲ್ ಬೆನಕೆ ಪೂಜೆ ಮಾಡಿದರು. ಬೆಳಗಾವಿಯ ಕೋಟೆ ಕೆರೆ ಆವರಣದಲ್ಲಿರುವ 110 ಮೀಟರ್ ಎತ್ತರದ ಧ್ವಜಸ್ತಂಭದ ಮೇಲೆ 75 ಕೆಜಿ ತೂಕವುಳ್ಳ ಧ್ವಜಾರೋಹಣ ನೆರವೇರಿಸಲಾಯಿತು.
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಸಾಬಣ್ಣ ತಳವಾರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ ಹಾಗೂ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಭಾಗಿಯಾದರು. ಧ್ವಜಾರೋಹಣ ವೇಳೆ ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಘೋಷಣೆಯು ಮೈ ಜುಮ್ ಎನ್ನಿಸುವಂತಿತ್ತು. ಈ ಸಂಭ್ರಮದ ಕ್ಷಣಕ್ಕೆ ಶಾಲಾ ವಿದ್ಯಾರ್ಥಿಗಳು ಸಾಕ್ಷಿಯಾದರು.
ಸೈಕಲ್ ಓಡಿಸಿ ಅಭಿಯಾನಕ್ಕೆ ಚಾಲನೆ
ಹರ್ ಘರ್ ತಿರಂಗಾ ಸೈಕಲ್ ಜಾಥಾಗೆ ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಚಾಲನೆ ನೀಡಿದರು. ಮಹಾನಗರ ಪಾಲಿಕೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾಕ್ಕೆ ಡಿ.ಸಿ. ವಿಜಯ ಮಹಾಂತೇಶ ಸೈಕಲ್ ಓಡಿಸುವ ಮೂಲಕ ಚಾಲನೆ ನೀಡಿದರು. ಅಲ್ಲದೇ, ಸೈಕಲ್ ಜಾಥಾ ಜಲನಗರ, ಬಸವೇಶ್ವರ ಸರ್ಕಲ್ ಸೇರಿದಂತೆ ನಗರಾದ್ಯಂತ ನಡೆಸಿ ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಿ ಎಂದು ಅಭಿಯಾನ ಮಾಡಿದರು.
ಇದನ್ನೂ ಓದಿ | ಸಂವಿಧಾನ ಬದಲಿಸುವವರೇ ಈಗ ʼಹರ್ ಘರ್ ತಿರಂಗʼ ಕಾರ್ಯಕ್ರಮ ಮಾಡುತ್ತಿದ್ದಾರೆ; ಮಧು ಬಂಗಾರಪ್ಪ ಕಿಡಿ