ದಾವಣಗೆರೆ: ಪಂಚಮಸಾಲಿಗಳು ರೈತಾಪಿ ವರ್ಗವಾಗಿದ್ದು, ಅನ್ನ ಕೊಡುವ ವರ್ಗಕ್ಕೆ ಶಾಸನಾತ್ಮಕವಾಗಿ ನ್ಯಾಯ ಸಿಗಲಿದೆ. ಜೆ.ಪಿ.ಹೆಗಡೆ ಆಯೋಗದ ಮಧ್ಯಂತರ ವರದಿ ಬಂದ ವಾರದಲ್ಲೇ ಮೀಸಲಾತಿ ಘೋಷಣೆ ಮಾಡಿದ್ದೆವು. ತರಾತುರಿಯಲ್ಲಿ ಮೀಸಲಾತಿ ಮಾಡಿದರೆ ಸಮಾಜಕ್ಕೆ ಅನ್ಯಾಯವಾಗುತ್ತದೆ. ಹೀಗಾಗಿ ಅಯೋಗದ ಅಂತಿಮ ವರದಿ ಬಂದ ತಕ್ಷಣ ಸಮುದಾಯದ (Hara Jatra Mahotsav) ನಿರೀಕ್ಷೆಗೆ ನ್ಯಾಯ ಒದಗಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಜಿಲ್ಲೆಯ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ಆಯೋಜಿಸಿದ್ದ “ಹರಜಾತ್ರಾ ಮಹೋತ್ಸವ-2023 ಹಾಗೂ ರೈತರತ್ನ ಸಮಾವೇಶ ”ದಲ್ಲಿ ಮಾತನಾಡಿದರು.
ನಾವೆಲ್ಲ ಎಷ್ಟು ದಿನ ಇರುತ್ತೇವೋ ಗೊತ್ತಿಲ್ಲ. ನಾವು ಮಾಡಿದ ಕೆಲಸ ಮುಂದಿನ ಪೀಳಿಗೆಗೆ ಶಾಶ್ವತವಾಗಿ ಉಳಿಯುವಂತೆ ಮಾಡುತ್ತದೆ. ಕೆಲವರು ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ನಾನು ಅದರ ಬಗ್ಗೆ ತಲೆ ಕೆಡಿಸಿಕಳ್ಳುವುದಿಲ್ಲ. ಸಮಾಜಕ್ಕೆ ಅನ್ಯಾಯ ಮಾಡಲ್ಲ. ಯಾವುದೇ ಟೀಕೆಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಯಶಸ್ಸು ಕಾಣುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ | Basavaraj Bommai | ಕೇಜ್ರಿವಾಲ್ ಮಾದರಿಯಲ್ಲಿ ಕಾಂಗ್ರೆಸ್ ಜನರ ಮರುಳು ಮಾಡಲು ಮುಂದಾಗಿದೆ: ಸಿಎಂ ಬೊಮ್ಮಾಯಿ
ಪ್ರತಿಯೊಂದಕ್ಕೂ ಅಂತರ್ಗತ ಶಕ್ತಿ ಇರುತ್ತದೆ. ಆ ಶಕ್ತಿಯನ್ನು ಗೌರವಿಸಬೇಕು. ಯಾರು ಹೆಚ್ಚು, ಯಾರು ಕಮ್ಮಿ ಎನ್ನವುದಕ್ಕಿಂತ ನ್ಯಾಯ ಕೊಡಿಸುವುದು ಮುಖ್ಯ. ಸಮಾಜಕ್ಕೆ ಒಳ್ಳೆಯದಾಗಲು ಎಲ್ಲರೂ ಒಂದಾಗಿ ಹೋಗಬೇಕು. ಮಾತನಾಡುವುದು ಸುಲಭ, ಆದರೆ, ಜವಾಬ್ದಾರಿ ಸ್ಥಾನದಲ್ಲಿ ನಿಂತು ಮಾತನಾಡುವುದು ಕಷ್ಟ ಎಂದು ಪರೋಕ್ಷವಾಗಿ ಜಯಮೃತ್ಯುಂಜಯ ಸ್ವಾಮೀಜಿಗೆ ಸಲಹೆ ನೀಡಿದರು.
ಪಂಚಮಸಾಲಿ ಸಮಾಜದ ಇಬ್ಬರು ಗುರುಗಳು ಮೀಸಲಾತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಗುಜರಾತ್ , ಹರಿಯಾಣ, ಮಹಾರಾಷ್ಟ್ರ ಹೀಗೆ ಬೇರೆ ಬೇರೆ ಕಡೆ ಮೀಸಲಾತಿ ನಿರ್ಣಯ ಆಗಿ ಬಿದ್ದು ಹೋಗಿದೆ. ಹೀಗಾಗಿ ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಮೊದಲ ಹೆಜ್ಜೆ ಎಚ್ಚರಿಕೆಯಿಂದ ಇಟ್ಟಿದ್ದೇವೆ, 2ನೇ ಹೆಜ್ಜೆ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದರು.
ರೈತ ವಿದ್ಯಾ ನಿಧಿ ಯೋಜನೆಯಿಂದ 11 ಲಕ್ಷಕ್ಕೂ ಹೆಚ್ಚು ರೈತರ ಮಕ್ಕಳಿಗೆ ಅನುಕೂಲವಾಗಿದೆ. ನಮ್ಮ ಸರ್ಕಾರ ಹತ್ತು ಹಲವು ಯೋಜನೆಗಳ ಮೂಲಕ ರೈತ ಪರ ಕೆಲಸ ಮಾಡುತ್ತಿದೆ. ಬೇರೆ ಸರ್ಕಾರಗಳು ರೈತರಿಗೆ ಸಹಾಯ ಮಾಡಿದರೆ ತಮಗೆ ಲಾಭ ಇಲ್ಲ ಎಂದು ಸುಮ್ಮನಿದ್ದವು ಎಂದು ಹೇಳಿದರು.
ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಸರ್ಕಾರ ಒಬಿಸಿ 2ಡಿ ಮೀಸಲಾತಿ ಘೋಷಣೆ ಮಾಡಿದಾಗ ಸ್ವಾಗತವೂ ಮಾಡಲಿಲ್ಲ, ವಿರೋಧವೂ ಮಾಡಲಿಲ್ಲ. ಆದರೆ, 2ಎ ಅಡಿ ಸಿಗುವ ಸೌಲಭ್ಯಗಳು 2ಡಿ ಮೀಸಲಾತಿಯಲ್ಲೂ ಸಿಗುತ್ತವೋ ಇಲ್ಲವೋ ಎಂಬುವುದನ್ನು ಸರ್ಕಾರ ಸ್ಪಷ್ಟಪಡಿಸಬೇಕಿದೆ. ಬೊಮ್ಮಾಯಿ ಅವರು ನಮ್ಮ ಸಮಾಜಕ್ಕೆ ನ್ಯಾಯ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಯಾರಿಗೂ ನೋವು ಮಾಡದೆ ಪ್ರೀತಿಯಿಂದ ಮೀಸಲಾತಿ ಪಡೆಯೋಣ ಎಂದು ಪರೋಕ್ಷವಾಗಿ ಜಯಮೃತ್ಯುಂಜಯ ಸ್ವಾಮೀಜಿಗೆ ಸಂದೇಶ ನೀಡಿದ ಅವರು, ನಮ್ಮ ದಾರಿಗೆ ಮುಳ್ಳು ಹಾಕಿದರೆ ಅವರ ದಾರಿಗೆ ಹೂವು ಹಾಕುತ್ತೇವೆ. ಬೊಮ್ಮಾಯಿ ಅವರು ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಓದಗಿಸುತ್ತಾರೆ ಎಂಬ ಭರವಸೆ ನಮಗಿದೆ ಎಂದು ತಿಳಿಸಿದರು.
ಇದನ್ನೂ ಓದಿ | Karnataka Election : ಬಂಟ್ವಾಳದಲ್ಲಿ ಫೀಲ್ಡಿಗಿಳಿದ ಮೋದಿ-ಅಮಿತ್ ಶಾ ರೋಡ್ ಶೋ ರಥ!