ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಹರಿಹರ ಕ್ಷೇತ್ರದ ಕಾಂಗ್ರೆಸ್‌ನ ಶಾಸಕ ರಾಮಪ್ಪ ವಿರುದ್ಧ ಪಕ್ಷದಲ್ಲಿ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮನೆಮುಂದೆ ಜಮಾಯಿಸಿದ್ದು, ನೂಕಾಟ-ತಳ್ಳಾಟಗಳು ನಡೆದಿವೆ. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಸಿದ್ದರಾಮಯ್ಯ ಅವರು ರಾಮಪ್ಪ ಬೆಂಬಲಿಗನೊಬ್ಬನ ಕೆನ್ನೆಗೆ ಬಾರಿಸಿದ್ದಾರೆ.
ಕಳೆದ ಬಾರಿ ರಾಮಪ್ಪ ಅವರು ಒಳ್ಳೆಯ ಲೀಡ್‌ನಿಂದ ಗೆಲುವು ಸಾಧಿಸಿದ್ದಾರೆ. ಅವರಿಗೆ ಈ ಬಾರಿಯೂ ಗೆಲ್ಲುವ ಸಾಮರ್ಥ್ಯ ಇದೆ. ಅವರ ವಿರುದ್ಧ ಬೇಕಂತಲೇ ಕೆಲವರು ಅಪ ಪ್ರಚಾರವನ್ನು ಮಾಡುತ್ತಾ ಬಂದಿದ್ದಾರೆ. ಈ ಬಗ್ಗೆ ವರಿಷ್ಠರು ಕಿವಿಗೊಡಬಾರದು. ಈ ಬಾರಿಯೂ ಅವರಿಗೇ ಟಿಕೆಟ್ ಕೊಡಬೇಕು. ಅವರು ಖಂಡಿತವಾಗಿಯೂ ಗೆಲುವು ಸಾಧಿಸುತ್ತಾರೆ ಎಂದು ಸಿದ್ದರಾಮಯ್ಯ ನಿವಾಸದ ಎದುರು ಪಟ್ಟುಹಿಡಿದು ಕುಳಿತಿದ್ದರು.
ಇದನ್ನೂ ಓದಿ: 45 ಲಕ್ಷ ಕೋಟಿ ರೂ. ವೆಚ್ಚಕ್ಕೆ ಅವಕಾಶ ಕಲ್ಪಿಸುವ ಧನ ವಿನಿಯೋಗ ವಿಧೇಯಕಕ್ಕೆ 9 ನಿಮಿಷದಲ್ಲಿ ಲೋಕಸಭೆ ಒಪ್ಪಿಗೆ!
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಟಿಕೆಟ್ ಬಗ್ಗೆ ಗಲಾಟೆ ಮಾಡುವುದು ಸರಿಯಲ್ಲ. ಅದನ್ನು ಆಮೇಲೆ ನೋಡೋಣ, ನಾವು ಸಹ ಸರ್ವೆ ಮಾಡಿಸುತ್ತಿದ್ದೇವೆ. ಮೊದಲಿಗೆ ಸರ್ವೆ ರಿಪೋರ್ಟ್ ಬರಲಿ. ಆಮೇಲೆ ಈ ಬಗ್ಗೆ ನಿರ್ಧರಿಸಿದರಾಯಿತು. ಅದಕ್ಕಾಗಿ ಯಾರೂ ಈಗಲೇ ಆತುರಪಟ್ಟುಕೊಳ್ಳಬೇಡಿ ಎಂದು ಸಮಜಾಯಿಷಿ ನೀಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ರಾಮಪ್ಪ ಬೆಂಬಲಿಗರು, “ಈಗಲೇ ನಿರ್ಧಾರವಾಗಬೇಕು. ನೀವು ಈಗಲೇ ರಾಮಪ್ಪ ಅವರಿಗೆ ಟಿಕೆಟ್ ಘೋಷಣೆ ಮಾಡಬೇಕು. ಅವರು ಖಂಡಿತವಾಗಿಯೂ ಗೆಲ್ಲುತ್ತಾರೆ. ಬೇರೆಯವರಿಗೆ ಟಿಕೆಟ್ ನೀಡಿದರೆ ಹೋರಾಟ ಮಾಡಬೇಕಾದೀತು ಎಂದು ಕೂಗಾಡಿದ್ದಾರೆ. ಅಲ್ಲದೆ, ಕೆಲವು ಸಮಯ ಅಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಜತೆಗೆ ಕೆಲವರಿಂದ ನೂಕಾಟವೂ ಉಂಟಾಯಿತು.
ಸಿದ್ದರಾಮಯ್ಯರಿಂದ ಕಪಾಳಮೋಕ್ಷ
ಸಿದ್ದರಾಮಯ್ಯ ಅವರು ಹೊರಡುತ್ತಿದ್ದಂತೆ ಅವರನ್ನು ರಾಮಪ್ಪ ಬೆಂಬಲಿಗರು ಸುತ್ತುವರಿದಿದ್ದಾರೆ. ಈ ವೇಳೆ ನಡೆದ ತಳ್ಳಾಟದಿಂದ ಅಸಮಾಧಾನಗೊಂಡ ಸಿದ್ದರಾಮಯ್ಯ ತಮ್ಮ ಮೇಲೆ ಬಿದ್ದ ಬೆಂಬಲಿಗನೊಬ್ಬನ ಕಪಾಳಕ್ಕೆ ಹೊಡೆದಿದ್ದಾರೆ.
ಟಿಕೆಟ್ ನೀಡಲು ಸ್ವಾಮೀಜಿಗಳ ವಿರೋಧ?
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬಾರದು ಎಂದು ಕಾಗಿನೆಲೆ ಕನಕ ಗುರುಪೀಠದ ರಂಜನಾನಂದ ಸ್ವಾಮೀಜಿ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಯವರು ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರ ಬರೆದಿದ್ದರು ಎಂಬ ಸುದ್ದಿ ಹರಡಿತ್ತು. ಈ ಬಗ್ಗೆ ಸ್ವತಃ ಶಾಸಕ ಎಸ್. ರಾಮಪ್ಪ ಪ್ರತಿಕ್ರಿಯೆ ನೀಡಿದ್ದು, ಈ ವಿಷಯವು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದರು.
ಇದನ್ನೂ ಓದಿ: Amit Shah visit : ಅಮಿತ್ ಶಾ ಬೆನ್ನು ತಟ್ಟಿ ಮಾತಾಡಿಸಿದ್ದರಿಂದ ಆನೆ ಬಲ ಬಂದಿದೆ ಎಂದ ಬಿ.ವೈ ವಿಜಯೇಂದ್ರ
ಹರಿಹರದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ್ದ ಶಾಸಕ ರಾಮಪ್ಪ, ಹರಿಹರ ಕ್ಷೇತ್ರವು ಮಠ, ಪೀಠಗಳ ತವರೂರಾಗಿದ್ದು, ಇಲ್ಲಿ ಎಲ್ಲ ಸಮುದಾಯಗಳ ಮಠಾಧೀಶರು, ಧರ್ಮಗುರುಗಳ ಜತೆಗೆ ನಾನು ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಯಾವುದೇ ಸ್ವಾಮೀಜಿಯವರೂ ಸಹ ನಮ್ಮ ಹೈಕಮಾಂಡ್‌ಗೆ ಪತ್ರ ಬರೆದಿಲ್ಲ. ಇದು ಕಿಡಿಗೇಡಿಗಳ ಕೃತ್ಯವಷ್ಟೇ ಎಂದು ಹೇಳಿಕೆ ನೀಡಿದ್ದರು. ಈ ಬಾರಿಯೂ ತಮಗೆ ಪಕ್ಷದ ಬಿ ಫಾರಂ ಸಿಗಲಿದೆ ಎಂಬ ವಿಶ್ವಾಸವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದರು.