Site icon Vistara News

Hariprakash Konemane: ಭಟ್ಕಳದ ಹಿಂದು ಕಾರ್ಯಕರ್ತನ ಗಡಿಪಾರಿಗೆ ಆದೇಶ; ಸರ್ಕಾರದ ವಿರುದ್ಧ ಹರಿಪ್ರಕಾಶ್‌ ಕೋಣೆಮನೆ ಆಕ್ರೋಶ

ಕಾರವಾರ: ಭಟ್ಕಳದ ಹಿಂದು ಕಾರ್ಯಕರ್ತ ಶ್ರೀನಿವಾಸ ನಾಯ್ಕ ಗಡಿಪಾರು ಆದೇಶಕ್ಕೆ ಹಿಂದು ಕಾರ್ಯಕರ್ತರು ಹಾಗೂ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು, ರಾಜ್ಯ ಸರ್ಕಾರದ ಹಿಂದು ವಿರೋಧಿ ನೀತಿಯ ಮುಂದುವರಿದ ಭಾಗವಾಗಿ ಭಟ್ಕಳದ ಹಿಂದು ಕಾರ್ಯಕರ್ತ, ಹಿಂದು ಸಂಘಟನೆಯಲ್ಲಿ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀನಿವಾಸ ನಾಯ್ಕ ಅವರ ಮೇಲೆ ಗಡಿಪಾರು ಕೇಸು ದಾಖಲಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಓಲೈಕೆ ರಾಜಕಾರಣದ ಮುಂದುವರಿದ ಭಾಗವಾಗಿ ಭಟ್ಕಳದ ಹಿಂದೂ ಕಾರ್ಯಕರ್ತನ ಗಡಿಪಾರು ಯತ್ನ ಮಾಡಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಚಿವರು ಹಲವು ಸಂದರ್ಭಗಳಲ್ಲಿ‌ ಬಹಿರಂಗ ಸಭೆಗಳಲ್ಲಿ ಒಂದು ಸಮುದಾಯವನ್ನು ಓಲೈಕೆ ಮಾಡುವ ರೀತಿಯ ಮಾತುಗಳನ್ನು ಆಡುತ್ತಾ ಬಂದಿರುವುದು ಹೊಸ ವಿಷಯವೇನಲ್ಲ. ಅಂತಹ ಓಲೈಕೆ ಮಾತುಗಳ ಗುರಿ ಹಿಂದುತ್ವ ಮತ್ತು ಹಿಂದು ಸಂಘಟನೆಗಳ ಕಾರ್ಯಕರ್ತರು ಎನ್ನುವುದೂ ಕಾಂಗ್ರೆಸ್ ಸರ್ಕಾರದ ಇಲ್ಲಿಯವರೆಗಿನ ನಡೆಗಳು ಸಾರಿ ಹೇಳುತ್ತಿವೆ ಎಂದು ಟೀಕಿಸಿದ್ದಾರೆ.

ಹಿಂದು ಸಮಾಜಕ್ಕೆ ಅನ್ಯಾಯವಾದಾಗ ಹಿಂದುಗಳ ಪರ ಧ್ವನಿ ಎತ್ತುತ್ತಿದ್ದ ಶ್ರೀನಿವಾಸ ನಾಯ್ಕ ಅವರ ವಿರುದ್ಧ ಗಡಿಪಾರು ಕೇಸು ದಾಖಲಿಸುವ ಮೂಲಕ ಜಿಲ್ಲೆಯಲ್ಲಿ ಹಿಂದುಪರ ಕಾರ್ಯಕರ್ತರ ಧ್ವನಿ ಅಡಗಿಸಲು ಅಧಿಕಾರಿ ವರ್ಗ ಹೊರಟಿದೆ. ಒಬ್ಬ ಪ್ರಾಮಾಣಿಕ ಹಿಂದು ಕಾರ್ಯಕರ್ತನ ಮನೋಸ್ಥೈರ್ಯವನ್ನು ಕುಗ್ಗಿಸಲು ಹೊರಟಿರುವ ಅಧಿಕಾರ ವರ್ಗಕ್ಕೆ ಕುಮ್ಮಕ್ಕು ನೀಡಿದವರು ಯಾರು? ಯಾವುದೇ ಸ್ವಾರ್ಥವಿಲ್ಲದೆ ಹಿಂದು ಸಮಾಜಕ್ಕೆ ಅನ್ಯಾಯವಾದಾಗ ಮುಂಚೂಣಿಯಲ್ಲಿ ನಿಂತು ಹೋರಾಡುವ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸುವುದರ ಹಿಂದೆ ಇರುವ ಉದ್ದೇಶವೇನು? ಸರ್ಕಾರವೇ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಮಸ್ತ ಹಿಂದು ಸಮಾಜವು ಶ್ರೀನಿವಾಸ ನಾಯ್ಕ ಅವರ ಬೆಂಬಲಕ್ಕಿದೆ. ಹಿಂದು ಹೋರಾಟಗಾರರನ್ನು ಹತ್ತಿಕ್ಕುವ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Lok Sabha Election 2024: ಅಮಿತ್‌ ಶಾ ʼಬೂತ್‌ʼ ಮಂತ್ರ; ಕರ್ನಾಟಕ ಗೆಲ್ಲೋಕೆ ಮಾಡಿದ್ರು ಚಾಣಕ್ಯ ತಂತ್ರ!

ಏನಿದು ಪ್ರಕರಣ?

ಕರ್ನಾಟಕ ಪೊಲೀಸ್‌ ಕಾಯ್ದೆ 1963, ಕಲಂ 55(ಎ) (ಬಿ) ಅಡಿಯಲ್ಲಿ ಗಡಿಪಾರು ಮಾಡುವ ಕುರಿತು ಭಟ್ಕಳದ ಹಿಂದು ಕಾರ್ಯಕರ್ತ ಶ್ರೀನಿವಾಸ್‌ ನಾಯ್ಕಗೆ ಜಿಲ್ಲಾ ದಂಡಾಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

ಭಟ್ಕಳದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ, ಸಾರ್ವಜನಿಕ ಆಸ್ತಿ ಹಾನಿ, ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ, ಪೋಕ್ಸೊ ಪ್ರಕರಣದ ನೊಂದ ಬಾಲಕನ ಹೆಸರನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿರುವುದು ಹಾಗೂ ತೆಂಗಿನಗುಂಡಿ ಬಂದರಿನಲ್ಲಿ ಪರವಾನಗಿ ಪಡೆಯದೆ ಧ್ವಜಕಟ್ಟೆ ನಿರ್ಮಾಣ ಮಾಡಿದ ಸಂಬಂಧ ಹಿಂದು ಕಾರ್ಯಕರ್ತ ಶ್ರೀನಿವಾಸ ನಾಯ್ಕ ವಿರುದ್ಧ ಭಟ್ಕಳ ಠಾಣೆಯಲ್ಲಿ 5 ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಹೀಗಾಗಿ ಶ್ರೀನಿವಾಸ್‌ ನಾಯ್ಕ ಅವರನ್ನು ಗಡಿಪಾರು ಮಾಡುವ ಕುರಿತು ಜಿಲ್ಲಾ ವರಿಷ್ಠಾಧಿಕಾರಿ ಪ್ರಸ್ತಾವನೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ದಂಡಾಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಭಟ್ಕಳ ತಹಸೀಲ್ದಾರ್‌ ಕೂಡ ಎಸ್‌ಪಿಗೆ ಪತ್ರ ಬರೆದು 2 ದಿನಗಳೊಳಗೆ ವರದಿ ನೀಡಲು ತಿಳಿಸಿದ್ದಾರೆ.

ಇತ್ತೀಚೆಗೆ ಭಟ್ಕಳದ ತೆಂಗಿನಗುಂಡಿಯಲ್ಲಿ ಭಗವಾಧ್ವಜ ಅಳವಡಿಕೆಯಲ್ಲಿ ಶ್ರೀನಿವಾಸ್ ನಾಯ್ಕ ಮುಂಚೂಣಿಯಲ್ಲಿದ್ದರು. ಇವರ ವಿರುದ್ಧ ದಾಖಲಾಗಿದ್ದ 5 ಕ್ರಿಮಿನಲ್ ಪ್ರಕರಣಗಳ ಪೈಕಿ 3ರಲ್ಲಿ ಖುಲಾಸೆಗೊಂಡಿದ್ದು, ಎರಡು ಪ್ರಕರಣ ತನಿಖೆ ಹಂತದಲ್ಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಶಿಫಾರಸಿನ ಮೇಲೆ ಜಿಲ್ಲಾ ದಂಡಾಧಿಕಾರಿ ಗಂಗೂಬಾಯಿ ಮಾನಕರ್ ಗಡಿಪಾರು ಕ್ರಮ ಕೈಗೊಂಡಿದ್ದಾರೆ.

Exit mobile version