ಶಿರಸಿ: ರಾಜ್ಯದ ಪ್ರತಿ ತಾಲೂಕಿನಲ್ಲಿ ಕನಿಷ್ಠ ಮೂರ್ನಾಲ್ಕು ಸಹಕಾರ ಸಂಘಗಳಿವೆ. ನಿರೀಕ್ಷೆ ಮಟ್ಟದ ಸಾರ್ಥಕತೆಯನ್ನು ಸಾಧಿಸಲು ಇನ್ನೂ ಹಲವು ಸಂಘಗಳಿಗೆ ಅವಕಾಶವಿದೆ. ವಿಶೇಷವಾಗಿ ಸಹಕಾರ ಸಂಘಗಳು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಕೃಷಿಕರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಷರತ್ತುಗಳನ್ನು ಪೂರೈಸಲು ಸಾಧ್ಯವಿಲ್ಲ. ಆ ಬ್ಯಾಂಕ್‌ಗಳಿಗೆ ರೈತರ ಮೇಲೆ ವಿಶ್ವಾಸವಿಲ್ಲ. ಹೀಗಾಗಿ ರೈತರಿಗೆ ಸಿಗಬೇಕಾದ ನೆರವು, ಸಹಕಾರ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಹಕಾರ ವ್ಯವಸ್ಥೆಗೆ ಸದಾಕಾಲ ಮುಕ್ತ ಅವಕಾಶ ಹಾಗೂ ಉಜ್ವಲ ಭವಿಷ್ಯವಿದೆ ಎಂದು ವಿಸ್ತಾರ ನ್ಯೂಸ್ ಸಿಇಒ, ಪ್ರಧಾನ ಸಂಪಾದಕ ಮತ್ತು ಶಿರಸಿಯ ಪರಿವಾರ ಸಹಕಾರ ಸಂಘದ ನಿರ್ದೇಶಕ ಹರಿಪ್ರಕಾಶ್ ಕೋಣೆಮನೆ ಅಭಿಪ್ರಾಯಪಟ್ಟರು.
ನಗರದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಪರಿವಾರ ಸಹಕಾರಿ ಸಂಘ ನಿಯಮಿತದ ಉದ್ಘಾಟನೆ ಹಾಗೂ ಹಿರಿಯ ಸಹಕಾರಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಹಕಾರ ಸಂಘ ಉತ್ತರ ಕನ್ನಡ ಜಿಲ್ಲೆಗೆ ಹೊಸದಲ್ಲ. ಇಡೀ ದೇಶದಲ್ಲಿ 1904ರ ನಂತರ ಸಹಕಾರ ಚಳವಳಿ ಹಂತ ಹಂತವಾಗಿ ಬಹಳ ಬಲಿಷ್ಠವಾಗಿ ಬೆಳೆಯಿತು. 1904ರಲ್ಲಿ ಭಾರತದಲ್ಲಿ ಮೊಟ್ಟ ಮೊದಲ ಸಹಕಾರ ಸಂಘ ಪ್ರಾರಂಭವಾಯಿತು. ಮುಂದೆ ಮಹಾತ್ಮ ಗಾಂಧಿ ಅವರು ಸಹಕಾರಿ ತತ್ವದ ಮೂಲಕ ಮಾತ್ರ ಭಾರತದ ವಿಕಾಸ ಸಾಧ್ಯ ಎಂದು ಹೇಳಿದ್ದರು. ಅದು ಸಹಕಾರದಿಂದ ಸ್ವಾತಂತ್ರ್ಯ ಹಾಗೂ ಸಹಕಾರದಿಂದ ಆರ್ಥಿಕ ವಿಕಾಸ ಇರಬಹುದು. ಒಟ್ಟಾರೆ ನಮ್ಮ ಸಮಾಜ ಪರಸ್ಪರ ಸಹಕಾರದ ಮೂಲಕ ವಿಕಾಸ ಆಗಬೇಕು ಎಂಬುದು ಅವರ ಮಾತಿನ ಅರ್ಥ ಎಂದು ಹರಿಪ್ರಕಾಶ್ ತಿಳಿಸಿದರು.
ಸ್ವಾತಂತ್ರ್ಯಾ ನಂತರ ಭಾರತದ ಆರ್ಥಿಕ ವ್ಯವಸ್ಥೆಗೆ ಶೇ.40ರಷ್ಟು ಬೆಂಬಲವಾಗಿ ನಿಂತಿರುವುದು ಸಹಕಾರ ಕ್ಷೇತ್ರ. ಸಹಕಾರಿ ಸಂಘಗಳ ಮೂಲಕವೇ ನಮ್ಮ ಆರ್ಥಿಕ ವ್ಯವಹಾರಗಳು ನಡೆಯುತ್ತವೆ. ಹೀಗೆ ವಿಕಾಸವಾದ ಸಹಕಾರ ಕ್ಷೇತ್ರದಲ್ಲಿ ಮೊಟ್ಟ ಮೊದಲು ಕೃಷಿ ಪತ್ತಿನ ಸಹಕಾರ ಸಂಘವನ್ನು ಎಸ್.ಎಸ್. ಪಾಟೀಲ್ ಅವರು ರಾಜ್ಯದ ಗದಗ ಜಿಲ್ಲೆಯ ರಾಮನಾಳದಲ್ಲಿ ಪ್ರಾರಂಭ ಮಾಡಿದರು. ಅಲ್ಲಿಂದ ವಿಕಾಸವಾಗಿ ಎಲ್ಲ ಜಿಲ್ಲೆಗಳಲ್ಲಿ ಸಹಕಾರ ವ್ಯವಸ್ಥೆ ಬಹಳ ಬಲವಾಗಿ ವ್ಯಾಪಿಸಿದೆ. ಆದರೆ ಉತ್ತರ ಕನ್ನಡ ಜಿಲ್ಲೆ ಸಹಕಾರ ವ್ಯವಸ್ಥೆಯಲ್ಲಿ ಬಹಳ ಮುಂಚೂಣಿಯಲ್ಲಿದೆ. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವ ಟಿಎಸ್‌ಎಸ್ ಸಹಕಾರ ಸಂಘ ಹಾಗೂ ಅದರ ಸಂಸ್ಥಾಪಕರನ್ನು ನಾವು ಸ್ಮರಿಸಬೇಕು. ಈ ಸಂಘ ಪ್ರಸ್ತುತ ಜಿಲ್ಲೆಯ ಜನಜೀವನದ ಆಧಾರ ಸ್ತಂಭವಾಗಿ ತಲೆಯೆತ್ತಿ ನಿಂತಿದೆ ಎಂದರು.
ಸಾವಿರಾರು ಸಂಘಗಳ ನಡುವೆ ಕೆಲವು ಸಂಘಗಳು ದೇಶ ಹಾಗೂ ಜಾಗತಿಕ ಮಟ್ಟದಲ್ಲಿ ತಮ್ಮದೇ ಆದ ಅಸ್ತಿತ್ವವನ್ನು ಕಂಡುಕೊಂಡಿವೆ. ಅಂಥವುಗಳಲ್ಲಿ ಗುಜರಾತ್‌ನ ಅಮುಲ್ ಸಂಸ್ಥೆ ಕೂಡ ಒಂದು. ಸಂಸ್ಥೆ ಪ್ರಾರಂಭವಾದ ಇತಿಹಾಸ ಬಹಳ ರೋಚಕವಾಗಿದೆ. ಬ್ರಿಟಿಷ್ ಸರ್ಕಾರ ರೈತರು ಉತ್ಪಾದಿಸಿದ ಹಾಲನ್ನು ಖಾಸಗಿ ಕಂಪನಿಗಳಿಗೆ ನೀಡಬೇಕು ಎಂದು ಆದೇಶಿಸಿದಾಗ ಅದನ್ನು ವಿರೋಧಿಸಿ ಪ್ರಾರಂಭವಾದ ಸಂಸ್ಥೆಯೇ ಅಮುಲ್. ಅದನ್ನು ಪ್ರಾರಂಭಿಸಿದವರು ಸರ್ದಾರ್ ವಲ್ಲಭಬಾಯಿ ಪಟೇಲ್. ಇವತ್ತು ಅಮುಲ್ ಸಂಸ್ಥೆ 63 ಸಾವಿರ ರೈತ ಕುಟುಂಬಗಳಿಗೆ ಆಧಾರ ಸ್ತಂಭವಾಗಿದೆ. ವರ್ಷಕ್ಕೆ 80 ಸಾವಿರ ಕೋಟಿ ರೂಪಾಯಿ ಮೊತ್ತದಷ್ಟು ವ್ಯವಹಾರ ನಡೆಸುತ್ತಿದೆ ಎಂದವರು ವಿವರಿಸಿದರು.
ಅದೇ ರೀತಿ ಲಿಜ್ಜತ್ ಪಾಪಡ್ ಎಂಬ ಸಂಸ್ಥೆಯನ್ನು ನೆನಪಿಸಿಕೊಳ್ಳಬೇಕು. ಈ ಸಂಸ್ಥೆಯೂ ಗುಜರಾತ್‌ನಲ್ಲಿ ಪ್ರಾರಂಭವಾಯಿತು, ಅದನ್ನು ಒಬ್ಬ ಮಹಿಳೆ ಪ್ರಾರಂಭಿಸಿದರು. ಈ ಸಂಸ್ಥೆ 40 ಸಾವಿರ ಮಹಿಳೆಯರಿಗೆ ಕೆಲಸ ನೀಡಿದೆ. ವರ್ಷಕ್ಕೆ 63 ಸಾವಿರ ಕೋಟಿ ರೂ. ವ್ಯವಹಾರ ನಡೆಸುತ್ತಿದೆ. ಹಾಗೆಯೇ ರಸಗೊಬ್ಬರ ಉತ್ಪಾದಿಸುವ ಇಫ್ಕೋ ಸಂಸ್ಥೆ ಜಾಗತಿಕವಾಗಿ ಮನ್ನಣೆ ಪಡೆದಿದೆ. ಹಾಗೆಯೇ ನಮ್ಮ ರಾಜ್ಯದಲ್ಲಿ ಕೆಎಂಎಫ್ ಕೂಡ ಅಂತಹ ಸಾಧನೆ ಮಾಡಿದೆ. ದೈನಂದಿನ ಜೀವನ ನಡೆಸಲು ಒಂದು ಹಸು ಸಾಕಿದರೆ ಸಾಕು ಎಂಬ ವಿಶ್ವಾಸವನ್ನು ಕೆಎಂಎಫ್ ಮೂಡಿಸಿದೆ ಎಂದವರು ಹೇಳಿದರು.
ಸಹಕಾರ ಕ್ಷೇತ್ರ ರಾಜ್ಯಪಟ್ಟಿಯಲ್ಲಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರದಲ್ಲಿ ಸಹಕಾರ ಸಚಿವಾಲಯವನ್ನು ಆರಂಭಿಸಲಾಯಿತು. ಈಗಿನ ಗೃಹ ಸಚಿವ ಅಮಿತ್ ಶಾ ಅವರು ಸಹಕಾರ ಸಚಿವರೂ ಆಗಿದ್ದು, ಪ್ರತಿ ಗ್ರಾಮಕ್ಕೆ ಸಹಕಾರ ಸಂಘ ಇರಬೇಕು ಎಂಬುದು ಅವರ ಆಶಯ. ವರ್ಷ ಪೂರ್ತಿ ಆದಾಯ ಬರುವ ಬೆಳೆ ಬೆಳೆಯುವ ರೈತರು ದೇಶಲ್ಲಿ ಶೇ.20 ಇದ್ದಾರೆ. ಹೀಗಾಗಿ ಉಳಿದ ರೈತರಿಗೆ ಉಪ ಉದ್ಯೋಗ ನೀಡಲು ಸಹಕಾರ ಕ್ಷೇತ್ರ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಸಹಕಾರ ಕ್ಷೇತ್ರವನ್ನು ಬಲಪಡಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹರಿಪ್ರಕಾಶ್ ಕೋಣೆಮನೆ ವಿವರಿಸಿದರು.
ನಮ್ಮಲ್ಲಿ ದೇಣಿಗೆ, ನೆರವಿನಂತಹ ಪದಗಳಿಗೆ ವಿಶೇಷ ಅರ್ಥವಿದೆ. ಶ್ರೀನಿವಾಸ್ ಹೆಬ್ಬಾರ್ ಅವರು ಉದ್ಯಮದಲ್ಲಿ ಹೆಸರು ಮಾಡಿದ್ದಾರೆ. ಅನೇಕರಿಗೆ ವ್ಯಕ್ತಿಗತ ನೆಲೆಯಲ್ಲಿ ಅವರು ನೆರವು ನೀಡಿದ್ದಾರೆ. ಸಹಕಾರ ಪಡೆದವರಿಗೆ ಒಂದು ಅಕೌಂಟಬಿಲಿಟಿ ಇರಬೇಕು ಎಂಬ ನಿಟ್ಟಿನಲ್ಲಿ ಸಾಂಸ್ಥಿಕ ಸ್ವರೂಪ ನೀಡಲು ಸಹಕಾರ ಸಂಘ ಸ್ಥಾಪಿಸಲು ನಿರ್ಧಾರ ಮಾಡಿದ್ದೇವೆ ಎಂದರು.
ಸಹಕಾರ ಸಂಘಕ್ಕೆ ಹಲವು ಮಾರ್ಗಸೂಚಿ ರಚಿಸಿದ್ದು, ಠೇವಣಿ ಇಟ್ಟವರ ಹಣಕ್ಕೆ ಭದ್ರತೆ ಕೊಡುವ ಜತೆಗೆ ಅದಕ್ಕೆ ಪ್ರತಿಯಾಗಿ ಬಡ್ಡಿ ನೀಡುವುದು, ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುವುದು, ಅನಾರೋಗ್ಯಕ್ಕೀಡಾದವರಿಗೆ ಧನಸಹಾಯ ಮಾಡುವುದು ನಮ್ಮ ಉದ್ದೇಶವಾಗಿದೆ. ಅದಕ್ಕಿಂತ ಮುಖ್ಯವಾಗಿ ಸಣ್ಣ ಉಳಿತಾಯದ ಬಗ್ಗೆ ಜನರಿಗೆ ಅಜ್ಞಾನವಿದೆ. ಉಳಿತಾಯ ನಮಗಾಗಿ ಹಾಗೂ ನಮ್ಮ ಸಮಾಜಕ್ಕೆ ಉಪಯೋಗಕ್ಕೆ ಬರುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಹೆಲ್ತ್ ಇನ್ಶೂರೆನ್ಸ್ ಆಗಿದೆ. ನಾವು ಪಡೆದ ಇನ್ಶೂರೆನ್ಸ್‌ನಿಂದ ಇತರರಿಗೂ ಅನುಕೂಲವಾಗುತ್ತದೆ. ವಿಮೆ ಕ್ಷೇತ್ರವೂ ಇಂದು ಸಹಕಾರ ಕ್ಷೇತ್ರದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಶಿರಸಿ ಕೆನರಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ, ಕಾರವಾರ ಸಹಕಾರಿ ಸಂಘಗಳ ಉಪನಿಬಂಧಕ ಮಂಜುನಾಥ ಆರ್, ಸಂಘದ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್, ಬೆಂಗಳೂರಿನ ಮೆಗಾಲೈಟ್ ಇಂಡಸ್ಟ್ರೀಸ್ ಹಾಗೂ ವಿಸ್ತಾರ ಮೀಡಿಯ ಪ್ರೈವೇಟ್ ಲಿಮಿಟೆಡ್ ಚೇರ್ಮನ್, ಸಂಘದ ಉಪಾಧ್ಯಕ್ಷ ಎಚ್.ವಿ.ಧರ್ಮೇಶ್, ಸಂಘದ ಮುಖ್ಯ ಕಾರ್ಯನಿರ್ವಾಹಕ ಪ್ರಶಾಂತ್ ಕೆ.ಎಸ್ ಉಪಸ್ಥಿತರಿದ್ದರು.
ಹಿರಿಯ ಸಹಕಾರಿಗಳಿಗೆ ಸನ್ಮಾನ
ಪರಿವಾರ ಸಹಕಾರಿ ಷೇರು ಸರ್ಟಿಫಿಕೇಟ್ ಹಾಗೂ ʻಪರಿವಾರ ವಿಶೇಷ ಠೇವಣಿ ಸರ್ಟಿಫಿಕೇಟ್ʼ ಅನ್ನು ಕಾರ್ಮಿಕ ಸಚಿವ ಹಾಗೂ ಶಿರಸಿ ಕೆನರಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅರಬೈಲ್ ಶಿವರಾಮ್ ಹೆಬ್ಬಾರ್ ಬಿಡುಗಡೆ ಮಾಡಿದರು. ನಂತರ ಹಿರಿಯ ಸಹಕಾರಿಗಳಾದ ಶಿರಸಿ ಟಿಎಪಿಸಿಎಂಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ, ಸಿದ್ದಾಪುರ ಟಿಎಪಿಸಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಯಲ್ಲಾಪುರ ಟಿಎಪಿಸಿಎಂಸಿಸಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಅವರನ್ನು ಸನ್ಮಾಸಲಾಯಿತು.