Site icon Vistara News

Manthana Jayanagar: ಮತಗಳ ಆಧಾರದಲ್ಲಿ ಹಿಂದುತ್ವವನ್ನು ಸಂಕುಚಿತವಾಗಿ ನೋಡುತ್ತಿರುವುದು ತಪ್ಪು: ಹರಿಪ್ರಕಾಶ್‌ ಕೋಣೆಮನೆ ಪ್ರತಿಪಾದನೆ

Hariprakash konemane says It is wrong to look at Hindutva in a narrow-minded manner on the basis of votes

Hariprakash konemane says It is wrong to look at Hindutva in a narrow-minded manner on the basis of votes

ಬೆಂಗಳೂರು: ಹಿಂದುತ್ವವನ್ನು ಜಗತ್ತಿನ ಇತರೆ ಮತಗಳ ಆಚರಣೆಯ ಹಿನ್ನೆಲೆಯಲ್ಲಿ ಬುದ್ಧಿಜೀವಿಗಳು ನೋಡುವುದರಿಂದಾಗಿ ಹಿಂದುತ್ವವು ಸಂಕುಚಿತವಾದದ್ದು ಎಂಬ ತಪ್ಪು ತಿಳಿವಳಿಕೆ ಮೂಡಿದೆ ಎಂದು ವಿಸ್ತಾರ ನ್ಯೂಸ್‌ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ತಿಳಿಸಿದ್ದಾರೆ.

ಜಯನಗರದಲ್ಲಿ ಮಂಥನ (Manthana Jayanagar) ವೇದಿಕೆ ವತಿಯಿಂದ ಆಯೋಜಿಸಿದ್ದ ʼಬಹುತ್ವ ಮತ್ತು ಹಿಂದುತ್ವʼ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ವೀರ ಸಾವರ್ಕರ್‌ ಅವರು, ಹೊರಗಿನ ಆಕ್ರಮಣಕಾರರಿಂದ ನಮ್ಮ ಸಂಸ್ಕೃತಿಯನ್ನು ರಕ್ಷಣೆ ಮಾಡಿಕೊಳ್ಳಲು ಹಿಂದುತ್ವ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದರು. ಅವರು ಹೊರಗಿನ ಆಕ್ರಮಣಗಳಿಂದ ರಕ್ಷಿಸಿಕೊಳ್ಳಲು, ಅಸ್ಪೃಶ್ಯತೆಯಂತಹ ನಮ್ಮೊಳಗಿನ ದೋಷಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿರುವುದಾಗಿ ತಿಳಿಸಿದರು.

ಎಲ್ಲರೂ ವೈಯಕ್ತಿಕವಾಗಿ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಬೇಕು, ಅದರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಯೋಗಿ ಅರವಿಂದರು ಹೇಳಿರುವುದಾಗಿ ತಿಳಿಸಿದ ಅವರು, ಹಿಂದು ಮತ್ತು ಹಿಂದುತ್ವದ ಕುರಿತು ನಮಗೆ ಯಾವುದೇ ಗೊಂದಲವಿಲ್ಲ. ಹಿಂದುವಾಗಿ ಹಿಂದುತ್ವವನ್ನು ಒಪ್ಪುವುದಿಲ್ಲ ಎನ್ನುವ ಜನರು ಆತ್ಮವಿಮರ್ಶೆ ಮಾಡಿಕೊಳ್ಳುವ ಸಮಯ ಬಂದಿದೆ. ಈ ಹಿನ್ನಲೆಯಲ್ಲಿ ಸ್ಪಷ್ಟತೆ ಪಡೆಯುವ ಅಗತ್ಯವಿದೆ ಎಂದು ಅನ್ನಿಸುತ್ತಿದೆ ಎಂದು ಹೇಳಿದರು.

ಹಿಂದುತ್ವ ಭಾರತೀಯತೆ ರಾಷ್ಟ್ರೀಯತೆ ಸನಾತನ ಧರ್ಮ ಈ ಎಲ್ಲಾ ಶಬ್ದಗಳನ್ನು ನಾವು ಭಾರತೀಯರು ಸಮಾನವಾಗಿ ನೋಡಿಕೊಂಡು ಬಂದಿದ್ದೇವೆ. ವೈಯಕ್ತಿಕ ನೆಲೆಯಲ್ಲಿ ವ್ಯಕ್ತಿ ಹಿಂದು ಸಮಾಜದ ದೃಷ್ಟಿಕೋನದಲ್ಲಿ ನೋಡುವುದಾದರೆ ಇಲ್ಲಿನ ಸಂಸ್ಕೃತಿಯನ್ನು ಪಾಲಿಸುವವರು ಹಿಂದುತ್ವವಾದಿಗಳು. ನಮ್ಮ ಕಲೆ ಸಂಸ್ಕೃತಿ ಆಚಾರ ವಿಚಾರಗಳು ಹೀಗೆ ಬಹುತೇಕ ನಮ್ಮತನವನ್ನು ಕಾಪಾಡಿಕೊಳ್ಳಲು ಹಿಂದುತ್ವ ಎನ್ನುವ ಪದ ಮುನ್ನಲೆಗೆ ಬಂದಿದೆ. ಯಾವುದೇ ಧರ್ಮ ಸಂಸ್ಕೃತಿಯ ಮೇಲೆ ಆಕ್ರಮಣ ಮಾಡಲು ಇದನ್ನು ಎಂದಿಗೂ ಬಳಸಲಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ | ವಿಸ್ತಾರ ಅಂಕಣ: ಭಾರತದ ಬಹುತ್ವ ಕಾಪಾಡಲು ಹಿಂದು ರಾಷ್ಟ್ರವಲ್ಲದೆ ಮತ್ಯಾವ ಹಾದಿ?!

ಸ್ವಾಮಿ ವಿವೇಕಾನಂದರು, ವೈಶ್ವಿಕ ದೃಷ್ಟಿಕೋನದಲ್ಲಿ ಹಿಂದುತ್ವವನ್ನು ಪ್ರತಿಪಾದಿಸಿದರು. ಇಡೀ ವಿಶ್ವವು ಪರಧರ್ಮ ಸಹಿಷ್ಣುತೆಯನ್ನು ಪ್ರತಿಪಾದಿಸಿದರೆ ಹಿಂದುತ್ವವು ಪರಧರ್ಮ ಸ್ವೀಕಾರಾರ್ಹತೆಯನ್ನು ಪ್ರತಿಪಾದಿಸುತ್ತದೆ. ಸಾವರ್ಕರ್‌, ಯೋಗಿ ಅರವಿಂದರು, ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಹಿಂದುತ್ವವೂ ಒಂದೆಯೇ. ಆದರೆ ಅವರವರು ಆಗಿನ ಸಂದರ್ಭ ಹಾಗೂ ವಿಭಿನ್ನ ಮಾರ್ಗಗಳಲ್ಲಿ ತಿಳಿಸಿಕೊಟ್ಟರು. ಯಾವುದೇ ಮಾರ್ಗದಲ್ಲಿ ಹಿಂದುತ್ವವನ್ನು ಪ್ರತಿಪಾದಿಸಿದರೂ, ಅವರವರಿಗೆ ಅಗತ್ಯವಾದ ಆಗಿನ ಸಮಯಕ್ಕೆ ಅನುಗುಣವಾದ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪಾಶ್ಚಾತ್ಯ ದೇಶಗಳಲ್ಲಿ ಅಲ್ಲಿನ ಚರ್ಚ್‌ಗಳೊಂದಿಗೆ ವಿವಿಧ ರೀತಿಯ ಸಂಘರ್ಷಕ್ಕೆ ರಿಲಿಜನ್ ಎನ್ನುವ ಅಫೀಮು ಕಾರಣ ಎಂದರು. ಆದರೆ ರಿಲಿಜನ್ ಎನ್ನುವುದನ್ನು ನಮ್ಮ ದೇಶದ ಬುದ್ಧಿಜೀವಿಗಳು ಧರ್ಮ ಎಂಬುದಕ್ಕೆ ಪರ್ಯಾಯವಾಗಿ ತಪ್ಪು ಅನುವಾದವನ್ನು ಮಾಡಿದರು. ಇದರ ಕಾರಣದಿಂದಾಗಿ, ರಿಲಿಜನ್ನಿಗೆ ಆರೋಪಿಸಿದ್ದ ಎಲ್ಲ ದೋಷಗಳೂ ಹಿಂದು ಧರ್ಮಕ್ಕೆ ಅನ್ವಯವಾದವು. ಇದೇ ಕಾರಣಕ್ಕೆ ಹಿಂದುತ್ವ ಎಂದರೆ ಸಂಕುಚಿತ ಎಂದು ತಪ್ಪಾಗಿ ಹೇಳುತ್ತಾರೆ ಎಂದು ಪ್ರತಿಪಾದಿಸಿದರು.

ಹಿಂದುತ್ವ ಎನ್ನುವುದು ಸಂವಿಧಾನಕ್ಕೂ ವಿರುದ್ಧವಾದದ್ದಲ್ಲ ಎನ್ನುವುದನ್ನು ತಿಳಿಯಬೇಕು. ಹಿಂದುತ್ವದಲ್ಲಿ ತಿಳಿಸಿರುವ ವಿಚಾರಗಳೇ ಸಂವಿಧಾನದಲ್ಲೂ ಕಾಣಸಿಗುತ್ತವೆ. ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಉನ್ನತ ಆದರ್ಶದೆಡೆಗೆ ಚಲಿಸಬೇಕು ಎಂದು ಸಂವಿಧಾನವೂ, ಹಿಂದುತ್ವವೂ ತಿಳಿಸುತ್ತದೆ. ಇದೆಲ್ಲದರ ಹಿನ್ನೆಲೆಯಲ್ಲಿ ಹಿಂದುತ್ವವನ್ನು ನೋಡಬೇಕು. ಹಿಂದುತ್ವವಿದ್ದರೆ ಮಾತ್ರವೇ ಬಹುತ್ವ ಉಳಿಯಲು ಸಾಧ್ಯ, ವಿಶ್ವದ ಅನ್ಯ ಮತಗಳು ದೇಶದಲ್ಲಿ ಆವರಿಸಿಕೊಂಡರೆ ಬಹುತ್ವವು ಸಾಧ್ಯವಿರುವುದಿಲ್ಲ ಎನ್ನುವುದನ್ನೂ ತಿಳಿಯಬೇಕು ಎಂದು ಕೋಣೆಮನೆ ತಿಳಿಸಿದರು.

ನಮ್ಮತನವನ್ನು ಪ್ರತಿಪಾದಿಸಲು ಮತ್ತು ಕಾಪಾಡಿಕೊಳ್ಳಲು ಮಾತ್ರ ಹಿಂದುತ್ವ ಎನ್ನುವ ಪದ ಬಳಕೆಯಾಗಿದೆ. ಯಾವುದೇ ಪ್ರದೇಶಕ್ಕೆ ವ್ಯಕ್ತಿಗೂ ಈ ಪದ ಸೀಮಿತವಾಗಿಲ್ಲ. ಈ ದೇಶದ ಸಂಸ್ಕೃತಿ ಪರಂಪರೆ ಯನ್ನು ಗೌರವಿಸಲು ಹಿಂದುತ್ವ ಎನ್ನುವ ವಿಚಾರ ಬಳಕೆಗೆ ಬಂದಿದೆ. ಬಹು ವಿಚಾರಗಳನ್ನು ವಿಷಯಗಳನ್ನು ಒಟ್ಟುಗೂಡಿಸಿ ರಚನಾತ್ಮಕ ಚಿಂತನೆಯನ್ನು ಶತಮಾನಗಳ ಕಾಲ ಪದವನ್ನು ಬಳಸಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ರಚನೆಯಾಗುವ ಮುನ್ನವೂ ಹಿಂದುತ್ವ ಎನ್ನುವ ಭಾವ ಬಳಕೆಯಲ್ಲಿತ್ತು. ಆದರೆ ಇಲ್ಲಿನ ಮೂಲ ಸಂಸ್ಕೃತಿಯ ಜನರನ್ನು ಒಟ್ಟುಗೂಡಿಸಲು ಮತ್ತು ಆಕ್ರಮಣಗಳಿಂದ ರಕ್ಷಿಸಲು ಆರ್ ಎಸ್ ಎಸ್ ಸ್ಥಾಪನೆಯ ಮೂಲಕ ಮುನ್ನುಡಿ ಇಡಲಾಯಿತು. ನಂತರದ ವರ್ಷಗಳಲ್ಲಿ ಬಹುತ್ವ ಎನ್ನುವ ಪದ ಮುನ್ನಲೆಗೆ ಬಂದಿತು. ಆದರೆ ಭಾರತೀಯರಿಗೆ ಬಹುತ್ವ ಎನ್ನುವ ವಿಚಾರ ಹೊಸದಾಗಿರಲಿಲ್ಲ. ಕೆಲವರು ಈ ಶಬ್ದವನ್ನು ತಮ್ಮ ತಮ್ಮ ಸ್ವಾರ್ಥಕ್ಕೆ ಮೂಗಿನ ನೇರಕ್ಕೆ ಬಳಸಿದರು. ಹಿಂದುಗಳಿಗಂತೂ ಬಹುತ್ವವನ್ನು ಪಾಲಿಸಬೇಕು ಎನ್ನುವುದು ಹೊಸ ಅತಿ ದೊಡ್ಡ ವಿಚಾರ ಎಂದಿಗೂ ಆಗಿಲ್ಲ ಎಂದು ಹೇಳಿದರು.

ಇದನ್ನೂ ಓದಿ | Sunday Read: ಹೊಸ ಪುಸ್ತಕ: ಯೋಗತಾರಾವಳಿ- ಒಂದು ಅವಲೋಕನ

ಹಿಂದುತ್ವಕ್ಕೆ ಯಾವುದೇ ಆದಿ ಮತ್ತು ಅಂತ್ಯವಿಲ್ಲ. ನಮ್ಮ ದೇಶದ ಪರಮೋಚ್ಚ ಕಾನೂನು ಮತ್ತು ಸಂವಿಧಾನಿಕ ಸಂಸ್ಥೆಯಾದ ಸುಪ್ರೀಂ ಕೋರ್ಟ್ ಕೂಡ ಸಾಕಷ್ಟು ಬಾರಿ ಇದೊಂದು ಜೀವನ ಪದ್ಧತಿ ಎಂದು ವ್ಯಾಖ್ಯಾನಿಸಿದೆ. ಭಾರತವನ್ನು ಭಾರತವಾಗಿ ಉಳಿಸಲು ಬೆಳೆಸಲು ಹಿಂದು ಸಂಸ್ಕೃತಿ ಒಂದೇ ಮಾರ್ಗವಾಗಿದೆ. ಹಿಂದುತ್ವವನ್ನು ಕೇವಲ ವ್ಯಕ್ತಿಗತ ಅಥವಾ ಧರ್ಮದ ನೆಲೆಗಟ್ಟಿನಲ್ಲಿ ನೋಡುವ ಅಗತ್ಯವಿಲ್ಲ. ಸಾವರ್ಕರ್ ಸೇರಿದಂತೆ ಹಲವರು ಇಲ್ಲಿನ ಜನ ಸಂಸ್ಕೃತಿಯ ಜನರನ್ನು ಒಟ್ಟುಗೂಡಿಸಲು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮುಂದಾದಾಗ ಕೆಲವರು ಅವರನ್ನು ಕೋಮುವಾದಿ ಎಂದು ಸ್ವಾರ್ಥ ದುರಾಲೋಚನೆಯಿಂದ ಜರಿದರು ಎಂದು ವಿಷಾದ ವ್ಯಕ್ತಪಡಿಸಿದರು.

ವಿಚಾರ ಸಂಕಿರಣದ ಪ್ರಮುಖ ಕೇಂದ್ರಬಿಂದುವಾದ ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಮತ್ತು ಸಿಇಒ ಹರಿಪ್ರಕಾಶ್ ಕೋಣೆಮನೆಯ ಅವರನ್ನು ಸನ್ಮಾನಿಸಿ ಮಂಥನ ಸಂಸ್ಥೆ ಗೌರವಿಸಿತು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ರಾಜೇಶ್ ಪದ್ಮಾರ್ ಸೇರಿದಂತೆ ಹಲವು ಗಣ್ಯಮಾನ್ಯರು, ನೂರಾರು ಸಂಖ್ಯೆಯಲ್ಲಿ ಸಭಿಕರು ಹಾಜರಿದ್ದರು.

Exit mobile version