ಬೆಂಗಳೂರು: ಹಿಜಾಬ್, ವ್ಯಾಪಾರ ನಿಷೇಧ, ಆಜಾನ್-ಭಜನ್ ವಿವಾದಗಳ ನಡುವೆ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸ್ವಲ್ಪ ಮಟ್ಟಿಗೆ ಕಾರ್ಮೋಡ ಕವಿದಿರುವ ನಡುವೆಯೇ ಎರಡೂ ಸಮುದಾಯಗಳ ಮಧ್ಯೆ ಪ್ರೀತಿಯ ಕೊಡುಕೊಳ್ಳುವಿಕೆ, ಆತ್ಮೀಯತೆಯ ವಿದ್ಯಮಾನಗಳು ಆಶಾವಾದ ಹುಟ್ಟಿಸುತ್ತಿವೆ.
ಬೆಂಗಳೂರಿನ ಚಂದ್ರಾ ಲೇಔಟ್ ನಲ್ಲಿ ಇಂಥಹುದೊಂದು ಚಂದದ ಸೌಹಾರ್ದ ಕ್ಷಣ ಮಂಗಳವಾರ ದಾಖಲಾಯಿತು. ಇಲ್ಲಿ ನಡೆದ ಮಾರಮ್ಮನ ಜಾತ್ರಾ ಮಹೋತ್ಸವದಲ್ಲಿ, ಮಸೀದಿ ಮುಂದೆ ದೇವಿ ಉತ್ಸವ ಹೊತ್ತು ಬಂದ ವ್ಯಕ್ತಿಗೆ ಮುಸ್ಲಿಂ ಬಾಂಧವರು ತಂಪು ಪಾನೀಯ ಕೊಟ್ಟು ಸೌಹಾರ್ದತೆ ತೋರಿದ್ದಾರೆ.
ಪರಸ್ಪರ ಕೈ ಹಿಡಿದು ಉತ್ಸವವನ್ನು ಶಾಂತಿಯಿಂದ ಆಚರಿಸಿದಕ್ಕೆ ಸ್ಥಳೀಯರು ಮಾದರಿಯಾಗಿದ್ದಾರೆ. ಅಮ್ಮನವರ ಜಾತ್ರೆಯಲ್ಲಿ ತಾವು ಕೈ-ಜೊಡಿಸಿ ಉತ್ಸವದಲ್ಲಿ ಭಾಗಿಯಾಗಿ ಕುಣಿದು ನಲಿದು ಸಂಭ್ರಮಿಸಿದ್ದಾರೆ. ಇಂದು ನಡೆದ ಈ ಉತ್ಸವ ಆಚರಣೆಯು ಸಮಾಜಕ್ಕೆ ಮಾದರಿಯಾಗಿದೆ.
ಚಂದ್ರಾ ಲೇಔಟ್‌ನ ಪೊಲೀಸರು ಕೂಡಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸೌಹಾರ್ದ ಕ್ಷಣಕ್ಕೆ ಸಾಕ್ಷಿಯಾದರು.
ಇದನ್ನೂ ಓದಿ: ಪರೀಕ್ಷೆಗಿಂತ ಹಿಜಾಬ್ ಮುಖ್ಯವೆಂದ ವಿದ್ಯಾರ್ಥಿನಿಯರು: ದ್ವಿತೀಯ ಪಿಯು ಪರೀಕ್ಷೆಗೆ ಗೈರು