Site icon Vistara News

Hasana Politics : ರೇವಣ್ಣರನ್ನು ರಾವಣನಿಗೆ ಹೋಲಿಸಿದ ಬಂಡಾಯ ನಾಯಕ ಎ.ಟಿ.ರಾಮಸ್ವಾಮಿ, ಇನ್ನೂ ಏನೇನೋ ಹೇಳಿದ್ದಾರೆ!

Revanna-AT Ramaswamy

#image_title

ಹಾಸನ: ಜೆಡಿಎಸ್‌ನಿಂದ ಎರಡೂ ಕಾಲು ಹೊರಗಿಟ್ಟಿರುವ ಹಾಸನ ಜಿಲ್ಲೆಯ (Hasana Politics) ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಅವರು ಈಗ ಬಹಿರಂಗವಾಗಿಯೇ ದಳ ನಾಯಕರ ವಿರುದ್ಧ ಹರಿಹಾಯಲು ಶುರು ಮಾಡಿದ್ದಾರೆ. ಅದರಲ್ಲೂ ಅವರ ಮುಖ್ಯ ಟಾರ್ಗೆಟ್‌ ಮಾಜಿ ಸಚಿವ ಎಚ್.ಡಿ.ರೇವಣ್ಣ.

ಹೊಳನರಸೀಪುರ ತಾಲ್ಲೂಕಿನ ಜೋಗಿಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ನಡೆದ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ರೇವಣ್ಣ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಲ್ಲದೆ, ರಾವಣನಿಗೆ ಹೋಲಿಕೆ ಮಾಡಿದ್ದು ವಿಶೇಷವಾಗಿತ್ತು.

ಈ ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ ಅವರು ಕಾರ್ಯಕರ್ತರು ಅಭಿಮಾನಿಗಳು ತನಗೆ ಕುಟುಂಬಕ್ಕಿಂತಲೂ ಹೆಚ್ಚು ಎಂದರು. ʻʻಪಕ್ಷದ ಪ್ರಮುಖರು, ಪಕ್ಷದ ಕಾರ್ಯಕರ್ತರು, ನಮ್ಮ ಅಭಿಮಾನಿಗಳು ನೀವು ನನಗೆ ಎಲ್ಲರಿಗಿಂತಲೂ ಹೆಚ್ಚು. ನನಗೆ ನನ್ನ ಮಕ್ಕಳು ಹೆಚ್ಚಲ್ಲ, ನನ್ನ ಮಕ್ಕಳು, ನನ್ನ ಕುಟುಂಬ ಮನೆಗೆ ಮಾತ್ರ ಸೀಮಿತ. ನೀವೇ ದೊಡ್ಡವರು ಎಂಬ ಭಾವನೆಯಿಂದ ರಾಜಕೀಯಕ್ಕೆ ಬಂದವನುʼʼ ಎಂದು ಹೇಳಿದ ಅವರು, ಗಟ್ಟಿ ತಳಪಾಯ ಹಾಕಿಕೊಂಡು ಮುಂದಿನ ನಿರ್ಧಾರ ತಿಳಿಸುತ್ತೇನೆ. ಮತ್ತೆ ವಿಧಾನಸೌಧಕ್ಕೆ ಹೋಗಿಯೇ ಹೋಗುತ್ತೇನೆ ಎಂದರು.

ಬಜೆಟ್‌ ಅಧಿವೇಶನದಲ್ಲಿ ಮಾತನಾಡುವ ರೇವಣ್ಣ ಅವರು ʻʻನಮ್ಮ ರಾಮಸ್ವಾಮಿ ಅಣ್ಣ ಪ್ರಾಮಾಣಿಕರು ಅದರಲ್ಲೇನು ಎರಡು ಮಾತಿಲ್ಲʼʼ ಅಂದಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ರಾಮಸ್ವಾಮಿ, ʻʻಒಳಗೊಂದು ಹೊರಗೊಂಡು ಇದ್ದರೆ ನಾನೇನು ಮಾಡಲು ಆಗುತ್ತೆ. ನಮ್ಮ ಕಾರ್ಯಕರ್ತರ ಜೊತೆ ಚರ್ಚಸಿ ತೀರ್ಮಾನ ಮಾಡುತ್ತೇನೆ. ಯುದ್ಧ ಮಾಡಲು ತಯಾರಾಗೋಗಿದೆ, ಹೆಸರು ಮಾತ್ರ ಉಳಿದುಕೊಂಡಿದೆʼʼ ಎಂನ್ನುವ ಮೂಲಕ ಪಕ್ಷ ಬಿಡುವ ದೃಢ ತೀರ್ಮಾನ ಪ್ರಕಟಿಸಿದರು.

ರೈತರ ಪಕ್ಷ ಕ್ಷೀಣಿಸುತ್ತಿದೆ ಅಂತ ಮೊದಲೇ ಹೇಳಿದ್ದೆ

ʻʻರೈತರ ಪಕ್ಷ ಅಂತ ಕಟ್ಟಿದರು, ಇದು ಕ್ಷೀಣಿಸುತ್ತಿದೆ ಎಂದು ಅಸೆಂಬ್ಲಿಯಲ್ಲಿ ಮೂರು ವರ್ಷದ ಹಿಂದೆ ಹೇಳಿದ್ದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲಗೊಳ್ಳುತ್ತಿವೆ. ಅದಕ್ಕಿಂತಲೂ ಮೊದಲು ಇದ್ದಂತಹ ಪ್ರಾದೇಶಿಕ ಪಕ್ಷ ಯಾಕೆ ಕ್ಷೀಣಿಸುತ್ತಿದೆ ಎನ್ನುವುದರ ಅವಲೋಕನ ನಡೆಯುತ್ತಿಲ್ಲ. ಒಳಗೊಂದು ಹೊರಗೊಂದು ಇರಬಾರದು ಎನ್ನುವುದು ನನ್ನ ನಿಲುವು. ರೈತರ ಹೆಸರು ಹೇಳುತ್ತಾರೆ, ರೈತರಿಗೆ ಜಮೀನು ಮಂಜೂರು ಮಾಡಲು ಹೋದರೆ ಮಾಡಿಕೊಡಿಬೇಡಿ ಅಂತ ಅಧಿಕಾರಿಗಳಿಗೆ ಹೇಳ್ತಾರೆ. ಇದು ರೈತರ ಪಕ್ಷನಾ, ರೈತರ ಪರವಾಗಿದೆಯಾ, ರೈತರ ಹಿತ ಕಾಪಾಡ್ತಾರಾ? ಮಂಜೂರಾತಿ ಮಾಡಿಕೊಡಬೇಡಿ, ಫೈಲ್ ಇಡಬೇಡಿ ಅಂತಾ ಹೇಳವ್ರು ರೈತರ ಪರನಾ? ರೈತರು ತಿನ್ನುವ ಅನ್ನಕ್ಕೆ ಕಲ್ಲು ಹಾಕುವ ಜನ ಇದ್ದಾರೆ. ಅದನ್ನು ಎದುರಿಸುವ ಶಕ್ತಿ ನನಗಿದೆʼʼ ಎಂದರು ರಾಮಸ್ವಾಮಿ.

ʻʻನನ್ನನ್ನು ರಾಜಕೀಯವಾಗಿ ಮುಗಿಸಬೇಕು ಅನ್ಕೊಂಡಿದ್ದಾರೆ ಅದು ಸಾಧ್ಯವಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಲು ಅವರಿಂದ ಸಾಧ್ಯವೇ ಇಲ್ಲ. ಮತ್ತೆ ಶಾಸನ ಸಭೆಗೆ ಹೋಗೇ ಹೋಗ್ತಿನಿ, ನಿಮ್ಮ ತಲೆ ತೆಗೆಯಲು ಬಿಡಲ್ಲ, ನನ್ನ ತಲೆ ತೆಗೆಯಲು ಒಪ್ಪಿಕೊಳ್ಳುತ್ತೇನೆ. ಈ ಭೂಮಿ, ಜನರ ರಕ್ಷಣೆಗೆ ನನ್ನ ತಲೆ ಬೇಕಾದರೂ ತೆಗೆಯಲಿʼʼ ಎಂದು ರಾಮಸ್ವಾಮಿ ಆಕ್ರೋಶದಿಂದ ಹೇಳಿದರು.

ರಾವಣನಿಗೆ ಹೋಲಿಸಿದ ರಾಮಸ್ವಾಮಿ

ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ರಾವಣನಿಗೆ ಹೋಲಿಕೆ ಮಾಡಿ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು ಶಾಸಕ ಎ.ಟಿ.ರಾಮಸ್ವಾಮಿ.

ʻʻರಾವಣನಿಗೆ ಸಕಲ ಐಶ್ವರ್ಯ ಇತ್ತು, ಈಶ್ವರನಿಂದ ಪಡೆದಂತಹ ಶಕ್ತಿಶಾಲಿ ಅಸ್ತ್ರಗಳಿದ್ದು. ಆದರೆ ಅವನು ನಾಶವಾದ, ಲಂಕೆನೂ ಕೂಡ ಬೂದಿ ಆಗಲಿಲ್ವಾ? ಯಾವುದಕ್ಕೂ ಆದಿ ಅಂತ ಇರುತ್ತದೆ. ಅದಕ್ಕೆ ಅಂತ್ಯ ಅಂತ ಇರುತ್ತದೆ. ಹುಟ್ಟಿದ ಮೇಲೆ ಸಾಯುವುದು ನಿಶ್ಚಿತ. ನನ್ನಂತಹವನಿಗೆ ಹೀಗೆ ಮಾಡಿದ್ದಾರೆ ನಿಮ್ಮನ್ನು ಬಿಡುತ್ತಾರಾʼʼ ಎಂದು ಪ್ರಶ್ನಿಸಿದರು ರಾಮಸ್ವಾಮಿ.

ʻನೀವೆಲ್ಲಾ ಸ್ವಾಭಿಮಾನಿಗಳಾಗಿ, ಆತ್ಮಗೌರವದಿಂದ ನಿಂತುಕೊಳ್ಳಿ. ಕೈಕಟ್ಟಿ ನಿಲ್ಲಬೇಡಿ, ಜೊತೆಯಲ್ಲಿ ಕುಳಿತುಕೊಳ್ಳುವ ಸ್ಥಾನ ಮಾನ ಎಲ್ಲಿ ಇರುತ್ತೆ ಅಲ್ಲಿಗೆ ಹೋಗಿ. ಕೈಕಟ್ಟಿ ನಿಂತುಕೊಳ್ಳುವ ಕಡೆಗೆ ಹೋಗಬೇಡಿ. ಅವರಿಗೆ ಒಳ್ಳೆಯವರು ಬೇಕಾಗಿಲ್ಲ. ಕೆಲವು ಜನ ಸ್ವಾರ್ಥಕ್ಕೆ ಏನು ಬೇಕಾದರೂ ಮಾಡಲು ತಯಾರಾಗಿದ್ದಾರೆ. ಸತ್ಯವನ್ನೇ ಸಾಯಿಸುತ್ತಾರೆʼʼ ಎಂದು ಹೇಳಿದರು ರಾಮಸ್ವಾಮಿ.

ದೇವೇಗೌಡರನ್ನೇ ಮನೆಯಿಂದ, ಜಿಲ್ಲೆಯಿಂದ ಹೊರಹಾಕಿದರು!

ʻʻಸನ್ಮಾನ್ಯ ದೇವೇಗೌಡರು ಪ್ರಧಾನಮಂತ್ರಿ ಆಗಿದ್ದವರು, ಈ ರಾಷ್ಟ್ರದಲ್ಲಿ ದೊಡ್ಡ ಹುದ್ದೆಯಲ್ಲಿದ್ದವರು. ಅಂತಹವರನ್ನೇ ಮನೆಯಿಂದ, ಜಿಲ್ಲೆಯಿಂದ ಹೊರಗೆ ಹಾಕಿದಂತಹ ಜನ ನನ್ನನ್ನು ಬಿಡ್ತಾರಾ? ಅವರು ಎಂಪಿ ಚುನಾವಣೆಗೆ ನಿಂತುಕೊಳ್ಳಲ್ಲ ಅಂದಿದ್ದರೆ ಎರಡನೇ ಮಾತು, ಬೇರೆಯವರು ನಿಂತುಕೊಳ್ಳಬಹುದು. ಅವರನ್ನು ಹೊರಗೆ ಹಾಕಿ, ತುಮಕೂರಿಗೆ ಕಳುಹಿಸಿ ಸೋಲಿಸಿದ್ದು ರಾಜಕೀಯ ಇತಿಹಾಸದಲ್ಲಿ ಯಾರು ಕೂಡ ಮರೆಯಬೇಡಿ, ಮರೆಯುವಂತಹದ್ದಲ್ಲʼʼ ಎಂದು ದೇವೇಗೌಡರ ಸೋಲಿನ ಹಿಂದಿನ ಕಥೆ ಬಿಚ್ಚಿಟ್ಟರು ರಾಮಸ್ವಾಮಿ.

ʻʻದೇವೇಗೌಡರನ್ನು ಉತ್ಸವಮೂರ್ತಿ ಮಾಡಿಕೊಂಡಿದ್ದಾರೆ ಇವರೆಲ್ಲ. ಅಂತಹ ಮುತ್ಸದ್ದಿ ರಾಜಕಾರಣಿಯನ್ನು ಮೂಲೆಗುಂಪು ಮಾಡಿದ್ದಾರೆ, ಅವರ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲʼʼ ಎಂದ ಎ.ಟಿ. ರಾಮಸ್ವಾಮಿ, ಪ್ರಜ್ವಲ್ ರೇವಣ್ಣ ಆಸ್ತಿ ಘೋಷಣೆ ಸರಿಯಾಗಿ ಮಾಡಿಲ್ಲ ಎಂದು ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು. ಶಿಕ್ಷೆ ಆಗುವ ಸಂದರ್ಭ ಬಂದಿತ್ತು. ಆ ಕೇಸ್‌ನ್ನು ರಾಜಿ ಮಾಡಿಕೊಳ್ಳಲು, ಸ್ವಾರ್ಥಕ್ಕಾಗಿ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದುʼʼ ಎಂದರು ರಾಮಸ್ವಾಮಿ.

ಇದನ್ನೂ ಓದಿ : Assembly Session: ಅಂಗವಿಕಲ ಮಗು ಹುಟ್ಟಲಿ ಅಂತ ಕೆಲವರು ಕಾಯ್ತಾ ಇರ್ತಾರೆ: ಜೆಡಿಎಸ್‌ ಕುರಿತು ಸದನದಲ್ಲಿ ಸಿ.ಟಿ. ರವಿ ಮಾತು

Exit mobile version