Site icon Vistara News

Hasarangi Huli Ajjayya: ಫೆ. 15,16ಕ್ಕೆ ಹಸರಂಗಿ ಹುಲಿ ಅಜ್ಜಯ್ಯ, ಬಾಲ ತ್ರಿಪುರಸುಂದರಿ ಮಂದಿರ ಉದ್ಘಾಟನೆ

Hasarangi Huli Ajjayya temple

ದೊಡ್ಡಬಳ್ಳಾಪುರ: ತಾಲೂಕಿನ ಲಕ್ಕಸಂದ್ರದ ಪುಣ್ಯಧಾಮದಲ್ಲಿ ಹಸರಂಗಿ ಅಜ್ಜಯ್ಯ (Hasarangi Huli Ajjayya) ಧಾರ್ಮಿಕ ಸಂಸ್ಥಾನ ಮತ್ತು ಶ್ರೀ ಹಸರಂಗಿ ಹುಲಿ ಅಜ್ಜಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ’ಹಸರಂಗಿ ಹುಲಿ ಅಜ್ಜಯ್ಯ’ ಹಾಗೂ ’ಬಾಲ ತ್ರಿಪುರ ಸುಂದರಿ ಅಮ್ಮ’ನ (Bala tripura sundari Amma) ಅಮೃತಶಿಲೆ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಫೆ. 15 ಮತ್ತು 16ರಂದು ನಡೆಯಲಿರುವುದಾಗಿ ಪುಣ್ಯಧಾಮದ ಪೀಠಾಧ್ಯಕ್ಷ ಗುರುದೇವ ಗುರೂಜಿ (Gurudeva Guruji) ತಿಳಿಸಿದ್ದಾರೆ.

ಮಾಧ್ಯಮಗಳಿಗೆ ವಿವರ ನೀಡಿದ ಅವರು, ಉತ್ತರ ಕರ್ನಾಟಕದಲ್ಲಿ ಅಜ್ಜಯ್ಯ ಅವರನ್ನು ಆರಾಧಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ದಕ್ಷಿಣ ಕರ್ನಾಟಕದಲ್ಲೂ ಹೆಚ್ಚುತ್ತಿದೆ. ಇಲ್ಲಿನ ಭಕ್ತರ ಅವಶ್ಯಕತೆ ಮನಗಂಡು ಮಂದಿರ ಸ್ಥಾಪನೆ ಮಾಡಲಾಗಿದೆ. ಸತತ ಹದಿನಾರು ವರ್ಷಗಳಿಂದ ಸಿದ್ಧತೆಗಳು ನಡೆದು ಈಗ ಲಕ್ಕಸಂದ್ರದ ಗುರುರಾಘವೇಂದ್ರ ಮಠದ ಸಮೀಪದಲ್ಲಿಯೇ ಇಬ್ಬರ ಮಂದಿರ ನಿರ್ಮಾಣ ಮಾಡಲಾಗಿದೆ.

ಫೆಬ್ರವರಿ 15,16ರಂದು ನಡೆಯಲಿರುವ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿರಕ್ತಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಮಹಾಸ್ವಾಮಿ, ಉರಿ ಗದ್ದಿಗೇಶ್ವರ ಮಠದ ಚಂದ್ರಶೇಖರ ಶಿವಚಾರ್ಯ ಸ್ವಾಮೀಜಿ ಸೇರಿದಂತೆ ಹದಿನೈದು ಮಠದ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ವೇದಿಕೆಯ ಸಮಾರಂಭವನ್ನು ಶಾಸಕ ಧೀರಜ್ ಮುನಿರಾಜು ಉದ್ಘಾಟಿಸಲಿದ್ದಾರೆ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ.ಎನ್.ನಾಗರಾಜ್, ಬಮೂಲ್ ನಿರ್ದೇಶಕ ಬಿ.ಸಿ.ಆನಂದಕುಮಾರ್ ಮುಂತಾದ ಗಣ್ಯರು ಆಗಮಿಸಲಿದ್ದಾರೆಂದು ಟ್ರಸ್ಟಿ ವಿನಯ್ ತಿಳಿಸಿದರು.

ಇದನ್ನೂ ಓದಿ: UAE Hindu Temple: ಯುಎಇ ಹಿಂದು ದೇಗುಲದ ಮೂರ್ತಿಗಳು ಹೇಗಿವೆ? ಇಲ್ಲಿವೆ ಫೋಟೊಗಳು

ಉತ್ತರ ಕರ್ನಾಟಕದ ಸಂತ, ಫಕೀರ ಹಸರಂಗಿ ಅಜ್ಜಯ್ಯ

ಹಸರಂಗಿ ಅಜ್ಜಯ್ಯ ಅವರು ಉತ್ತರ ಕರ್ನಾಟಕದ ಸಂತ, ಪಕೀರರಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ತನ್ನ ಪವಾಡ ಗಳಿಂದಾಗಿ ಆ ಭಾಗದ ಭಕ್ತರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಅವರ ಪ್ರೇರಣೆ ಯಂತೆ ದೊಡ್ಡಬಳ್ಳಾಪುರದ ನಿಸರ್ಗ ರಮಣೀಯ ಪ್ರಶಾಂತ ಸ್ಥಳವಾದ, ಜೊತೆಗೆ ಗುರುರಾಯರ ಮಠವಿರುವ ಲಕ್ಕಸಂದ್ರದ ಪುಣ್ಯ ದಾಮದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಅಮೃತ ಶಿಲೆಯಲ್ಲಿ ಮೂಡಿಬಂದಿರುವ ಹುಲಿ ಅಜ್ಜಯ್ಯನ ವಿಗ್ರಹ ಹಾಗೂ ತ್ರಿಪುರ ಸುಂದರಿ ಹೆಸರಿನ ಬಾಲ ತ್ರಿಪುರಾಂಬಿಕೆ ಅಮ್ಮನವರ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಶ್ರೀ ಕ್ಷೇತ್ರ ಪುಣ್ಯದಾಮದ ಲೋಕಾರ್ಪಣೆ ನಡೆಯಲಿದೆ ಎಂದು ಗುರುದೇವ ಗುರೂಜಿ ತಿಳಿಸಿದರು.

ಈ ಧಾರ್ಮಿಕ ಕಾರ್ಯಕ್ರಮಕ್ಕೆ ನಾಡಿನ ಸುಮಾರು 15ಕ್ಕೂ ಹೆಚ್ಚು ಶಕ್ತಿ ಕೇಂದ್ರಗಳ, ಹೆಸರಾಂತ ಮಠಗಳ ಪೀಠ ಅಧ್ಯಕ್ಷರು ಹಾಗೂ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಫೆ. 15ರ ಗುರುವಾರ ಪ್ರಾರ್ಥನೆ, ಮಹಾಗಣಪತಿ, ಪೂಜಾ ಕಳಸ ಸ್ಥಾಪನೆ, ವಾಸ್ತು ಹೋಮ, ಮಹಾ ಮಂಗಳಾರತಿ ನಡೆಯಲಿದೆ. ಫೆ. 16ರ ಶುಕ್ರವಾರದಂದು ಗೋ ಪೂಜೆ, ಪ್ರಾಣ ಪ್ರತಿಷ್ಠಾಪನೆ, ಗೋ ಪ್ರವೇಶ, ಮಹಾ ಗಣಪತಿ ನವಗ್ರಹ ಹೋಮ, ಮೃತ್ಯುಂಜಯ ಹೋಮ, ಪ್ರದಾನ ದೇವತೆಗಳ ಹೋಮ, ಲಲಿತ ಹೋಮ, ಸಹಸ್ರ ಹೋಮ, ಹಾಗೂ ಕುಂಬಾಭಿಷೇಕ ನಡೆಯಲಿದೆ ಎಂದ ಶ್ರೀಗಳು ತಿಳಿಸಿದರು.

ಶ್ರೀ ಕ್ಷೇತ್ರ ಪುಣ್ಯದಾಮವು ಹುಲಿ ಅಜ್ಜಯ್ಯನ ಶ್ರದ್ದಾ ಭಕ್ತಿ ಹಾಗೂ ಶಕ್ತಿ ಕೇಂದ್ರವಾಗಿದ್ದು, ಹುಲಿ ಅಜ್ಜಯ್ಯನವರು ಸರ್ವ ಧರ್ಮ ಸಮಾನ ಪ್ರತಿಪಾದಕರಾಗಿದ್ದವರು. ಹಾಗಾಗಿ ಉತ್ತರ ಕರ್ನಾಟಕದಾದ್ಯಂತ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲಾ ಧರ್ಮಗಳಲ್ಲೂ ಅಜ್ಜಯ್ಯನವರ ಶಿಷ್ಯರಿದ್ದಾರೆ. ಮೇಲಾಗಿ ಶ್ರೀ ಕ್ಷೇತ್ರ ಜಾತ್ಯತೀತ ಕೇಂದ್ರವಾಗಿದ್ದು, ಇಲ್ಲಿ ಯಾವುದೇ ಭೇದ ಭಾವವಿಲ್ಲದೆ ಭಾವೈಕ್ಯ ಸಾರುವ ಧಾರ್ಮಿಕ ಕೇಂದ್ರವಾಗಿದೆ. ಹಾಗಾಗಿ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಜಾತ್ಯತೀತವಾಗಿ, ಧರ್ಮಾತೀತವಾಗಿ ಸರ್ವರೂ ಆಗಮಿಸಲಿದ್ದಾರೆ ಎಂದು ಗುರುದೇವ್ ಗುರೂಜಿ ಹೇಳಿದರು.

Exit mobile version