ಹೊಸನಗರ: ಕಳೆದ ಒಂದು ವಾರದಿಂದ ಶರಾವತಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ಶರಾವತಿ ನದಿಯಲ್ಲಿ ಹಿನ್ನೀರಿನ ಪ್ರಮಾಣ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳಿನಿಂದ ಸ್ಥಗಿತವಾಗಿದ್ದ ಹಸಿರುಮಕ್ಕಿ ಲಾಂಚ್ (Hasirumakki launch) ಸೇವೆ ಸೋಮವಾರದಿಂದ (ಜುಲೈ 10) ಪುನಾರಂಭಗೊಳ್ಳಲಿದೆ. ಹೀಗಾಗಿ ಈ ಭಾಗದಲ್ಲಿ ಸಂಚರಿಸುವ ಸ್ಥಳೀಯರು, ಪ್ರವಾಸಿಗರಿಗೆ ಅನುಕೂಲವಾಗಲಿದೆ.
ಶರಾವತಿ ನದಿಪಾತ್ರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬರುತ್ತಿದೆ. ಇದರ ಪರಿಣಾಮವಾಗಿ ಹಸಿರುಮಕ್ಕಿ ಲಾಂಚ್ ಸೇವೆ ಸೋಮವಾರದಿಂದ ಮತ್ತೆ ಆರಂಭಗೊಳ್ಳಲಿದೆ. ಸದ್ಯ ಬೈಕ್ ಮತ್ತು ಲಘು ವಾಹನಗಳನ್ನು ಮಾತ್ರ ಲಾಂಚ್ ಮೂಲಕ ಸಾಗಾಟ ಮಾಡಲಾಗುತ್ತದೆ. ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಾದ ಮೇಲೆ ಬಸ್‌ಗಳನ್ನು ದಾಟಿಸಲಾಗುವುದು ಎಂದು ಕಡವು ನಿರೀಕ್ಷಕ ಧನೇಂದ್ರಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: Pen Drive Issue: ಕಸ ಗುಡಿಸೋಣ ನಡೀರಿ: HDK ಪೆನ್‌ಡ್ರೈವ್ ಪ್ರಶ್ನೆಗೆ ಶಿವಕುಮಾರ್ ಉತ್ತರ
ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಗರಿಷ್ಠ ಮಟ್ಟ 1819 ಅಡಿ ಆಗಿದ್ದು, ಭಾನುವಾರ 1752.00 ಅಡಿ ತಲುಪಿದೆ. 23252 ಕ್ಯೂಸೆಕ್ ಒಳಹರಿವು ಇದ್ದರೆ, 798 ಕ್ಯೂಸೆಕ್ ಹೊರಹರಿವು ಆಗಿದೆ. ಕಳೆದ ವರ್ಷ ಈ ಸಮಯದಲ್ಲಿ ನೀರಿನ ಮಟ್ಟ 1769 ಅಡಿ ಇತ್ತು.
ಸಿಗಂದೂರು ಲಾಂಚ್‌ನಲ್ಲಿ ಮೊನ್ನೆಯಷ್ಟೇ ಆರಂಭವಾಗಿದ್ದ ವಾಹನ ಸಾಗಾಟ
ಶರಾವತಿ ಹಿನ್ನೀರಿನಲ್ಲಿ ನೀರಿನ ಮಟ್ಟ ಏರಿಕೆ ಕಂಡಿದ್ದರಿಂದ ಶುಕ್ರವಾರ (ಜುಲೈ 7) ಸಿಗಂದೂರು (Sigandur) ಲಾಂಚ್‌ನಲ್ಲಿ ವಾಹನ ಸಾಗಾಟಕ್ಕೆ ಅನುಮತಿ ನೀಡಲಾಗಿತ್ತು. ಕಳೆದ 20 ದಿನಗಳಿಂದ ವಾಹನ ಸಾಗಾಟಕ್ಕೆ (Vehicle Transportation) ನಿಷೇಧವನ್ನು ಹೇರಲಾಗಿತ್ತು. ಶುಕ್ರವಾರದಿಂದ ಈ ವಾಪಸ್ ಆದೇಶವನ್ನು ಹಿಂಪಡೆಯಲಾಗಿತ್ತು. ಇದರಿಂದ ಸ್ಥಳೀಯರು ಹಾಗೂ ಪ್ರವಾಸಿಗರು ನಿರಾಳವಾಗುವಂತೆ ಆಗಿತ್ತು. ಎಂದಿನಂತೆ ಪ್ರವಾಸಿಗರು ಈ ಮಾರ್ಗದ ಮೂಲಕ ಸಂಚರಿಸುತ್ತಿದ್ದಾರೆ.
ಮಳೆಯಿಲ್ಲದ ಕಾರಣ ಲಾಂಚ್‌ನಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ, ಕಲೆಕ್ಷನ್ ಮಾದರಿಯನ್ನು ಅನುಸರಿಸಲಾಗಿತ್ತು. ಕಲೆಕ್ಷನ್ ಮಾದರಿ ಎಂದರೆ ಕೇವಲ ಪ್ರಯಾಣಿಕರನ್ನು ಮಾತ್ರ ಹೊತ್ತೊಯ್ಯಲಾಗುತ್ತಿತ್ತು. ಬಳಿಕ ಪ್ರಯಾಣಿಕರಿಗೆ ಇನ್ನೊಂದು ಬದಿಯಲ್ಲಿ ಬಸ್ ವ್ಯವಸ್ಥೆ ಮಾಡಲಾಗುತ್ತಿತ್ತು.
ಒಂದು ವೇಳೆ ಈ ಭಾಗದಿಂದ ಇನ್ನೊಂದು ಕಡೆಗೆ ಸಂಚರಿಸಬೇಕಾದರೆ ಸುತ್ತಿಬಳಸಿ ಹೋಗಬೇಕಾಗಿತ್ತು. ಈಗ ಶರಾವತಿ ಹಿನ್ನೀರಿನಲ್ಲಿ ನೀರಿನ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಇದರಿಂದ ಲಾಂಚ್‌ನ ಪ್ಲಾಟ್‌ಫಾರಂವರೆಗೆ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಲಾಂಚ್‌ನಲ್ಲಿ ವಾಹನಗಳ ಸಾಗಾಟಕ್ಕೆ ಪುನಃ ಅನುಮತಿ ನೀಡಲಾಗಿದೆ.
ಇದನ್ನೂ ಓದಿ: Jain muni Murder : ಜೈನಮುನಿ ಕಾಮಕುಮಾರ ನಂದಿ ಮಹಾರಾಜ್ ಪಂಚಭೂತಗಳಲ್ಲಿ ಲೀನ
ಸ್ಥಳೀಯರು, ಪ್ರವಾಸಿಗರಿಗೆ ತೊಂದರೆಯಾಗುತ್ತಿತ್ತು
ಈ ರೀತಿಯಾಗಿ ವಾಹನ ಸಂಚಾರಕ್ಕೆ ನಿಷೇಧ ಹೇರುವುದರಿಂದ ಸ್ಥಳೀಯರಿಗೆ ತೀವ್ರ ತೊಡಕಾಗಿತ್ತು. ಅನಾರೋಗ್ಯದ ಸಂದರ್ಭದಲ್ಲಿ ತೊಂದರೆಯನ್ನು ಅನುಭವಿಸಬೇಕಿತ್ತು. ಅಲ್ಲದೆ, ಪ್ರವಾಸಿಗರು ಸಹ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಆಗುತ್ತಿರಲಿಲ್ಲ. ಈಗ ಪ್ರವಾಸಿಗರು ಸಹ ಸಿಂಗದೂರು ಕ್ಷೇತ್ರದ ದರ್ಶನ ಪಡೆದು ಮುಂದೆ ಕೊಲ್ಲೂರು ಸೇರಿದಂತೆ ಇನ್ನಿತರ ಕಡೆಗಳಿಗೆ ಭೇಟಿ ನೀಡಬಹುದಾಗಿದೆ.