ಹಾಸನ: ಇಲ್ಲಿನ ಕೊರಿಯರ್ ಶಾಪ್‌ನಲ್ಲಿ ನಡೆದಿದ್ದ ಮಿಕ್ಸಿ ಸ್ಫೋಟ (Hassan Blast) ಪ್ರಕರಣ ಸಂಬಂಧ ನಾನಾ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿರುವ ಪೊಲೀಸರು, ಮಹಿಳೆ ಸೇರಿ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಕುವೆಂಪು ನಗರದ ಬಡಾವಣೆಯಲ್ಲಿ ಕೊರಿಯರ್ ಶಾಪ್‌ಗೆ ಪಾರ್ಸೆಲ್ ಬಂದಿದ್ದ ಮಿಕ್ಸಿಯನ್ನು ಶಾಪ್ ಮಾಲೀಕ ಓಪನ್ ಮಾಡಿದ್ದಾಗ ಸ್ಫೋಟ ಸಂಭವಿಸಿತ್ತು. ಆಗ ಶಾಪ್ ಮಾಲೀಕನಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ನಾನಾ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಮಹಿಳೆ ಸೇರಿ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಮಾಧ್ಯಮಗಳಿಗೆ ಹಾಸನ ಎಸ್‌ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದು, ಸೋಮವಾರ ಸಂಜೆ ನಡೆದ ಮಿಕ್ಸಿ ಬ್ಲಾಸ್ಟ್ ಸಂಬಂಧ ಘಟನಾ ಸ್ಥಳಕ್ಕೆ ಎಫ್‌ಎಸ್ಎಲ್ ತಂಡ ಭೇಟಿ ನೀಡಿದೆ. ತಡರಾತ್ರಿಯೇ ಮೈಸೂರು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ. ಈ ಸಂಬಂಧ ಸ್ಫೋಟಕ ವಸ್ತುಗಳ ಕಾಯಿದೆಯ ಸೆಕ್ಷನ್ 3 & 4 ರ ಅಡಿಯಲ್ಲಿ ಕೇಸ್ ದಾಖಲಾಗಿದೆ. ಈ ಸ್ಫೋಟದಲ್ಲಿ ಆಂತರಿಕ ಭದ್ರತೆಗೆ ಧಕ್ಕೆಯಾಗುವ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ | Boxing Nationals | ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್; ಚಿನ್ನ ಗೆದ್ದ ನಿಖತ್ ಜರೀನ್, ಲವ್ಲಿನಾ ಬೊರ್ಗೊಹೇನ್
ಕೊರಿಯರ್ ಅಕ್ಕ ಪಕ್ಕದ ಅಂಗಡಿಗಳು ಬಂದ್
ಮಿಕ್ಸಿ ಬ್ಲಾಸ್ಟ್ ಸಂಬಂಧ ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಹಾಗೂ ತಜ್ಞರ ತಂಡ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಬಾಂಬ್ ನಿಷ್ಕ್ರಿಯ ತಂಡ, ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಲಿದ್ದಾರೆ. ಇಡೀ ಪ್ರದೇಶಕ್ಕೆ ಬ್ಯಾರಿಕೇಡ್ ಹಾಕಿ ಯಾರೂ ಸುಳಿಯದಂತೆ ನಿರ್ಬಂಧ ಹೇರಲಾಗಿದೆ.
ಘಟನೆ ಏನು?
ನಗರದ ಕೆ.ಆರ್.ಪುರಂ ಬಡಾವಣೆಯ ಡಿಟಿಡಿಸಿ ಕೊರಿಯರ್ ಶಾಪ್‌ನಲ್ಲಿ ಸೋಮವಾರ ಸಂಜೆ 7-30ರ ಸುಮಾರಿಗೆ ಮಿಕ್ಸಿ ಬ್ಲಾಸ್ಟ್ ಆಗಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಶಾಪ್ ಮಾಲೀಕ ಶಶಿ ಎಂಬುವವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನಗಳ ಹಿಂದೆ ಕೊರಿಯರ್ ಶಾಪ್‌ಗೆ ಮಿಕ್ಸಿ ಪಾರ್ಸಲ್ ಬಂದಿತ್ತು. ಅದನ್ನು ನಗರದ ವ್ಯಕ್ತಿಯೊಬ್ಬರಿಗೆ ಕೊರಿಯರ್ ಶಾಪ್ ಮಾಲೀಕ ಹೋಮ್ ಡೆಲಿವರಿ ಮಾಡಿದ್ದರು. ಆದರೆ ಮಿಕ್ಸಿ ಸೂಕ್ತ ವಿಳಾಸದಿಂದ ಬಂದಿಲ್ಲ ಎಂದು ಕೊರಿಯರ್ ಶಾಪ್‌ಗೆ ವ್ಯಕ್ತಿ ವಾಪಸ್ ನೀಡಿದ್ದಾನೆ. ಆದರೆ, ಇಷ್ಟಕ್ಕೆ ಸುಮ್ಮನಿರದ ಕೊರಿಯರ್ ಶಾಪ್ ಮಾಲೀಕ ಆ ಪಾರ್ಸೆಲ್‌ನಲ್ಲಿ ಏನಿದೆ ಎಂದು ತೆರೆದು ನೋಡಿದ್ದಾನೆ. ಅದರಲ್ಲಿ ಮಿಕ್ಸಿ ಇರುವುದನ್ನು ಕಂಡು ಮಿಕ್ಸಿ ಆನ್ ಮಾಡಿ ನೋಡಿದ್ದಾನೆ. ಇದೇ ಸಮಯದಲ್ಲಿ ಮಿಕ್ಸಿ ಬ್ಲಾಸ್ಟ್ ಆಗಿದೆ.
ಮಿಕ್ಸಿ ಸ್ಫೋಟದ ತೀವ್ರತೆಗೆ ಕೊರಿಯರ್ ಕಚೇರಿಯ ಕಿಟಕಿ ಬಾಗಿಲು ಗಾಜು ಪುಡಿಪುಡಿಯಾಗಿದ್ದು, ಗೋಡೆಗಳಿಗೂ ಹಾನಿಯಾಗಿದೆ. ಶಂಕಾಸ್ಪದ ಸ್ಫೋಟದಲ್ಲಿ ಶಾಪ್ ಮಾಲೀಕ ಶಶಿ ಬಲಗೈ, ಹೊಟ್ಟೆ, ತಲೆಯ ಭಾಗಕ್ಕೂ ಗಂಭೀರ ಗಾಯಗಳಾಗಿವೆ. ಪ್ರಕರಣ ಸಂಬಂಧ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Hassan Blast | ವಿಧಿವಿಜ್ಞಾನ ತಂಡದಿಂದ ಮಿಕ್ಸಿ ಸ್ಫೋಟ ಸ್ಥಳ ಪರಿಶೀಲನೆ, ಗಾಯಾಳು ಚೇತರಿಕೆ