ಹಾಸನ: ಹಾಸನ ಜಿಲ್ಲೆಯ (Hassan News) ಅರಸೀಕೆರೆ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮಸ್ಥರಿಗೆ ಗುರುವಾರ ಅಚ್ಚರಿಯೊಂದಿಗೆ ಆತಂಕವು ಹೆಚ್ಚಾಗಿತ್ತು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಗ್ರಾಮದ ಹೊರ ವಲಯದ ಹುತ್ತದ ಮುಂದೆ ಸ್ವಾಮೀಜಿ, ಸನ್ಯಾಸಿಗಳು ಬಳಸುವ ಪಾದುಕೆ ಹಾಗು ದಂಡಗಳು ಪತ್ತೆಯಾಗಿವೆ.
ಗ್ರಾಮದ ಕೆಲವರು ಹಸು ಮೇಯಿಸಲು ಎಂದಿನಂತೆ ಬಂದಾಗ ಇವುಗಳು ಕಂಡಿವೆ. 12 ಜತೆ ಪಾದುಕೆ ಹಾಗೂ 28 ದಂಡಗಳ ದಿಢೀರ್ ಪ್ರತ್ಯಕ್ಷದಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಒಂದು ವೇಳೆ ಯಾವುದಾದರೂ ಮಠದ ಸ್ವಾಮೀಜಿಗಳೇ ಬೇಡವೆಂದು ಬಿಟ್ಟು ಹೋಗಿದ್ದರೆ ಒಟ್ಟಾಗಿ ಬೀಸಾಕಿ ಹೋಗಬಹುದಿತ್ತು ಅಥವಾ ಚೆಲ್ಲಾಪಿಲ್ಲಿಯಾಗಿ ಮೂಲೆಯಲ್ಲಿ ಬಿಸಾಕಬೇಕಿತ್ತು.
ಆದರೆ ವಿಶಾಲ ಪ್ರದೇಶದಲ್ಲಿ ಸರತಿ ಸಾಲಿನಲ್ಲಿ ಜೋಡಿಸಿ ಪಾದುಕೆ ಹಾಗೂ ದಂಡವನ್ನು ಇಡಲಾಗಿದೆ. ಹೀಗಾಗಿ ಇದು ಕುತೂಹಲದೊಂದಿಗೆ ಭಯವನ್ನುಂಟು ಮಾಡಿದೆ. ಯಾರಾದಾರೂ ಸ್ವಾಮೀಜಿಗಳು ಒಟ್ಟಾಗಿ ಈ ಜಾಗದಲ್ಲಿ ಸೇರಿದ್ದರಾ? ಏನಾದರೂ ಪೂಜೆಗಾಗಿ ಈ ರೀತಿ ಮಾಡಲಾಗಿದೆಯೇ? ಸನ್ಯಾಸಿಗಳೇನಾದರೂ ತಂಡವಾಗಿ ಬಂದು ಬಿಟ್ಟು ಹೋದರಾ? ಎಂಬ ನೂರಾರು ಪ್ರಶ್ನೆಗಳು ಗ್ರಾಮಸ್ಥರಲ್ಲಿ ಕಾಡುತ್ತಿದೆ.
ಇದನ್ನೂ ಓದಿ: Viral Video : ಫ್ರೀ ಬಸ್‌ನಲ್ಲಿ ಕೋತಿ ಜಾಲಿ ರೈಡ್; ವಿಂಡೋ ಸೀಟ್‌ನಲ್ಲಿ 30 ಕಿ.ಮೀ ಟ್ರಾವೆಲ್
ಸನ್ಯಾಸಿಗಳು ಬಳಸುವ ವಸ್ತುಗಳು ರಾತ್ರೋ ರಾತ್ರಿ ಗ್ರಾಮದ ಸಮೀಪ ಪ್ರತ್ಯಕ್ಷವಾಗಿರುವುದು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಯಾರಾದರೂ ಸ್ವಾಮಿಗಳ ತಂಡ ಬಂದು ಬಿಟ್ಟು ಹೋಗಿದ್ದಾರೋ ಅಥವಾ ಏನಾದರೂ ಪೂಜೆಗಾಗಿ ಹೀಗೆ ಮಾಡಲಾಗಿದೆಯೊ? ಇದನ್ನು ಮುಟ್ಟಬೇಕೋ ಬೇಡ್ವೋ ಎಂಬ ಪ್ರಶ್ನೆಗಳು ಕಾಡುತ್ತಿವೆ.
ಹೀಗೆ ಹೊರವಲಯದಲ್ಲಿ ಸ್ವಾಮೀಜಿಗಳ ದಂಡ, ಪಾದುಕೆ ಪ್ರತ್ಯಕ್ಷದ ಸುದ್ದಿ ತಿಳಿಯುತ್ತಿದ್ದಂತೆ ಒಬ್ಬರ ಹಿಂದೆ ಒಬ್ಬರು ಬಂದು ದೂರದಿಂದಲೇ ನೋಡಿಕೊಂಡು ಹೋಗುತ್ತಿದ್ದಾರೆ. ಹುತ್ತದ ಮುಂದೆ ಹೀಗೆ ಹತ್ತಾರು ಪಾದುಕೆ, ದಂಡ ಇರುವುದು ಅನುಮಾನ ಮೂಡಿಸಿದೆ.
ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ