ಹಾಸನ: ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಹಾಸನ ವಿಧಾನಸಭಾ ಕ್ಷೇತ್ರದ (Hasana Politics) ಜೆಡಿಎಸ್ ಟಿಕೆಟ್ ಗೊಂದಲ ಮತ್ತೂ ಮುಂದುವರಿದಿದೆ. ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಕಡೆಗಣಿಸಿ, ಹಾಸನದಲ್ಲಿ ಭಾನುವಾರ ಕ್ಷೇತ್ರದ ೩೦೦ ಪ್ರಮುಖ ನಾಯಕರ ಸಭೆ ಕರೆದಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ದೊಡ್ಡ ಹಿನ್ನಡೆಯಾಗಿದೆ. ಹಾಸನ ಟಿಕೆಟ್ ಗದ್ದಲಕ್ಕೆ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮಧ್ಯಪ್ರವೇಶ ಮಾಡಿದ್ದು, ಸಭೆಯನ್ನೇ ರದ್ದುಪಡಿಸಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಗೆ ತಮ್ಮ ವಿರುದ್ಧ ಭವಾನಿ ರೇವಣ್ಣ ಸ್ಪರ್ಧೆ ಮಾಡಲಿ ಎಂದು ಶಾಸಕ ಪ್ರೀತಂ ಗೌಡ ಮಾಡಿದ್ದ ಸವಾಲು ಈಗ ಜೆಡಿಎಸ್‌ನಲ್ಲಿ ಕಿಡಿಯನ್ನೇ ಹೊತ್ತಿಸಿದೆ. ಶತಾಯಗತಾಯ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕೆಂದು ಭವಾನಿ ರೇವಣ್ಣ ಪಣ ತೊಟ್ಟಿದ್ದಲ್ಲದೆ, ಕ್ಷೇತ್ರ ಪ್ರಚಾರವನ್ನೂ ಕೈಗೊಂಡಿದ್ದಾರೆ. ಆದರೆ, ಇದಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದು, ಎಚ್.ಪಿ. ಸ್ವರೂಪ್‌ಗೆ ಹಾಸನ ಟಿಕೆಟ್ ನೀಡುವ ಒಲವು ವ್ಯಕ್ತಪಡಿಸಿದ್ದರು. ಆದರೆ, ಇದಕ್ಕೆ ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಭವಾನಿಗೇ ಟಿಕೆಟ್ ಕೊಡಬೇಕೆಂದು ಪಟ್ಟುಹಿಡಿದಿದ್ದರು. ಆದರೆ, ಒಂದು ಹಂತದಲ್ಲಿ ದೇವೇಗೌಡರು ಮಧ್ಯ ಪ್ರವೇಶ ಮಾಡಿದ್ದರಿಂದ ಭವಾನಿ ಸುಮ್ಮನಾಗಿದ್ದರೂ ಪ್ರಚಾರದಲ್ಲಿ ನಿರತರಾಗಿದ್ದರು. ಅದೇ ವೇಳೆ ರೇವಣ್ಣ ಆಕ್ರೋಶಗೊಂಡಿದ್ದು, ಭವಾನಿಗೆ ಟಿಕೆಟ್ ಕೊಡದಿದ್ದರೆ ತಾವೇ ಹಾಸನದಲ್ಲಿ ಸ್ಪರ್ಧೆ ಮಾಡುವುದಾಗಿ ರಚ್ಚೆ ಹಿಡಿದಿದ್ದರು. ಅಲ್ಲದೆ, ತಮ್ಮ ಕುಟುಂಬದವರ ಜತೆಗೂಡಿ ೩ ದಿನಗಳ ಕಾಲ ಕ್ಷೇತ್ರ ಸಂಚಾರ ಆರಂಭಿಸಿ ಕಾರ್ಯಕರ್ತರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದರು. ಈ ವರದಿಯನ್ನು ದೇವೇಗೌಡ ಮುಂದೆ ಇಡಲು ಮುಂದಾಗಿದ್ದರು. ಎನ್ನಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಎಚ್.ಡಿ. ಕುಮಾರಸ್ವಾಮಿ ಅವರು ಭಾನುವಾರ (ಫೆ. ೨೬) ಹಾಸನ ಕ್ಷೇತ್ರದ 300 ಪ್ರಮುಖ ನಾಯಕರ ಸಭೆಯನ್ನು ಕರೆದಿದ್ದರು.
ದೇವೇಗೌಡರ ಎಂಟ್ರಿ
ಹಾಸನ ಕ್ಷೇತ್ರದ ಟಿಕೆಟ್ ಗೊಂದಲ ಹೆಚ್ಚಾದ ಹಿನ್ನೆಲೆಯಲ್ಲಿ ಎಚ್.ಡಿ. ದೇವೇಗೌಡ ಅವರೇ ಈಗ ಮಧ್ಯಪ್ರವೇಶ ಮಾಡಿದ್ದು, ಕುಟುಂಬದವರ ತಿಕ್ಕಾಟಕ್ಕೆ ಬ್ರೇಕ್ ಹಾಕಿದ್ದಾರೆ. ಭಾನುವಾರ ನಿಗದಿಯಾಗಿದ್ದ ಸಭೆಯನ್ನು ರದ್ದು ಮಾಡಿರುವ ಅವರು, ಒಂದು ವಾರದ ಬಳಿಕ ತಾವೇ ಹಾಸನಕ್ಕೆ ಬಂದು ಟಿಕೆಟ್ ಗೊಂದಲಕ್ಕೆ ತೆರೆ ಎಳೆಯುವುದಾಗಿ ತಿಳಿಸಿದ್ದಾರೆ. ಈ ಮೂಲಕ ಸಭೆ ನಡೆದರೆ ಹಾಸನ ಜಿಲ್ಲೆಯಲ್ಲಿ ರಾಜಕೀಯ ಗೊಂದಲ ಸೃಷ್ಟಿಯಾಗುವ ಸನ್ನಿವೇಶವನ್ನು ತಪ್ಪಿಸಿದ್ದಾರೆಂದು ಹೇಳಲಾಗಿದೆ.
ಇದನ್ನೂ ಓದಿ: Viral News : ಮದುವೆ ದಿನವೇ ಕೊನೆಯುಸಿರೆಳೆದ ವಧು, ಆಕೆಯ ತಂಗಿ ಜತೆ ನಡೆಯಿತು ವರನ ಮದುವೆ!
ಬೆಂಗಳೂರಲ್ಲಿ ಸಭೆ ಕರೆಯಲಾಗಿತ್ತು
ಭಾನುವಾರ ಸಂಜೆ 4.30ಕ್ಕೆ ಬೆಂಗಳೂರಿನ ಜೆಪಿ ಭವನದಲ್ಲಿ ಎಚ್.ಡಿ. ಕುಮಾರಸ್ವಾಮಿ ೩೦೦ ಪ್ರಮುಖರ ಸಭೆಯನ್ನು ಕರೆದಿದ್ದರು. ಈ ಬಗ್ಗೆ ಶನಿವಾರವೂ ಸ್ಪಷ್ಟಪಡಿಸಿದ್ದರು. ಒಂದು ವೇಳೆ ಈ ಸಭೆ ನಡೆದರೆ ಸ್ಚರೂಪ್ ಪರವಾಗಿ ಎಚ್‌ಡಿಕೆ ನಿಲ್ಲುತ್ತಾರೆ ಎಂದು ಮತ್ತೊಂದು ಗುಂಪಿನಲ್ಲಿ ಆತಂಕ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ದೇವೇಗೌಡರಿಗೆ ಕೆಲವು ವಿಷಯ ಮುಟ್ಟಿಸಿದ್ದರು ಎನ್ನಲಾಗಿದೆ. ಹೀಗಾಗಿ ದೇವೇಗೌಡರು ಸಭೆಯನ್ನೇ ರದ್ದು ಮಾಡಿದ್ದಾರೆ.