ಹಾಸನ: ಮದ್ಯದ ಚಟ ಬಿಡಿಸಲು (Deaddiction) ಮದ್ಯವರ್ಜನ ಕೇಂದ್ರವೊಂದಕ್ಕೆ (Alcoholic Rehabilitation Centre) ಸೇರಿಸಲಾದ ಯುವಕನೊಬ್ಬ ಶವವಾಗಿ ಮರಳಿ (Death Case) ಬಂದಿದ್ದಾನೆ. ಕೇಂದ್ರದಲ್ಲಿ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಅದರಿಂದ ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ್ದ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ನಮ್ಮ ಮಗನನ್ನು ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಹಾಸನ ತಾಲ್ಲೂಕಿನ ದೊಡ್ಡಮೇದೂರು ಗ್ರಾಮದ ಪದ್ಮೇಗೌಡ (38) ಮೃತ ವ್ಯಕ್ತಿ. ಪದ್ಮೇಗೌಡನನ್ನು ಹಾಸನದ ವಿಜಯನಗರದಲ್ಲಿರುವ ಪುನರ್ ಜೀವನ ವಸತಿ ಮದ್ಯದ ಚಟ ಬಿಡಿಸುವ ಕೇಂದ್ರಕ್ಕೆ ಸೇರಿಸಲಾಗಿತ್ತು.
ಇತ್ತೀಚೆಗಷ್ಟೇ ಮದುವೆಯಾಗಿದ್ದ ಪದ್ಮೇಗೌಡ ಬಳಿಕವೂ ಕುಡಿತದ ಚಟ ಬಿಟ್ಟಿರಲಿಲ್ಲ. ಹೀಗಾಗಿ ಹೇಗಾದರೂ ಮಾಡಿ ಮಗನನ್ನು ಹೊಸ ಮನುಷ್ಯನನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಪೋಷಕರು ಆತನ ಕುಡಿತದ ಚಟ ಬಿಡಿಸಲು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು.
ನಾಲ್ಕು ದಿನದ ಹಿಂದಷ್ಟೇ ತೋಪೇಗೌಡ ಅವರ ತಮ್ಮ ಮಗನನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು. ಈ ನಡುವೆ ಕೇಂದ್ರದಲ್ಲಿ ತೀವ್ರ ಸುಸ್ತಿನಿಂದ ಬಳಲುತ್ತಿರುವುದರಿಂದಾಗಿ ಆತನನ್ನು ಪುನರ್ವಸತಿ ಕೇಂದ್ರದ ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಪದ್ಮೇಗೌಡ ನಿಧನರಾಗಿದ್ದಾರೆ.
ಶುಕ್ರವಾರ ಬೆಳಗ್ಗೆ ಊರಿನಲ್ಲಿ ಪದ್ಮೇಗೌಡರ ಅಂತ್ಯಸಂಸ್ಕಾರಕ್ಕೆ ಮುನ್ನ ಸ್ನಾನ ಮಾಡಿಸುವ ವೇಳೆ ಮೃತದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಹೀಗಾಗಿ ಪದ್ಮೇಗೌಡನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆಂದು ಮೃತನ ಪೋಷಕರು ಆರೋಪ ಮಾಡುತ್ತಿದ್ದಾರೆ.
ಈ ನಡುವೆ, ಪುನರ್ವಸತಿ ಕೇಂದ್ರದಲ್ಲಿ ನಡೆಯುವ ಚಟುವಟಿಕೆಗಳ ಕೆಲವು ಫೂಟೇಜ್‌ಗಳು ಲಭ್ಯವಾಗಿದ್ದು, ಇವುಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ಹಲ್ಲೆ ನಡೆದಿರುವುದು ನಿಜವೇ ಎಂದು ಪರೀಕ್ಷಿಸಲಿದ್ದಾರೆ.
ಸದ್ಯ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇಂದ್ರದ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.
ಇದನ್ನೂ ಓದಿ: Most wanted : ಬೆಂಗಳೂರಲ್ಲಿ ಇಂಟರ್‌ನ್ಯಾಷನಲ್ ಕ್ರಿಮಿನಲ್ಸ್ ಅರೆಸ್ಟ್; ಅವರ ಹಿಂದಿದ್ದಾರೆ ಭಯಾನಕ ಪಾತಕಿಗಳು!
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಆತ್ಮಹತ್ಯೆ
ರಾಯಚೂರು: ದೇವದುರ್ಗದ ವಸತಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಿ.ಆರ್.ಗುಂಡಾ ಗ್ರಾಮದ ವಿದ್ಯಾರ್ಥಿನಿ ಪವಿತ್ರ(15) ಆತ್ಮಹತ್ಯೆ ಮಾಡಿಕೊಂಡವಳು.
ಆಕೆಗೂ ಓದುವುದು ಇಷ್ಟವಿರಲಿಲ್ಲ ಎನ್ನಲಾಗಿದೆ. ಶಾಲೆಗೆಂದು ಹೋದವಳು ಶಾಲೆ ತಪ್ಪಿಸಿ ಮನೆಗೆ ಬರುತ್ತಿದ್ದಳು. ಇದರಿಂದ ಬೇಸರಗೊಂಡ ಮನೆಯವರು ಆಕೆಗೆ ಬುದ್ಧಿ ಹೇಳಿದ್ದರು. ಜತೆಗೆ ಗುರುವಾರ ಆಕೆಯನ್ನು ವಸತಿ ಶಾಲೆಗೆ ಬಿಟ್ಟು ಹೋಗಿದ್ದರು. ಈ ನಡುವೆ ಆಕೆ ತರಗತಿ ಸಮಯದಲ್ಲೇ ಕೋಣೆಗೆ ಬಂದು ಫ್ಯಾನ್‌ಗೆ ವೇಲ್ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆಗೆ ಬೇರೆ ಏನಾದರೂ ಕಾರಣವಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಪೊಲೀಸರು ಆಕೆಯ ಪೂರ್ವಾಪರಗಳನ್ನು ವಿಚಾರಿಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.