ಹಾಸನ: ಅರ್ಜಿ ವಿಲೇವಾರಿ ವಿಳಂಬ ಹಾಗೂ ಕಚೇರಿಗೆ ಅಧಿಕಾರಿಗಳು ವಿಳಂಬವಾಗಿ ಬರುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಗರದ ತಾಲೂಕು ಕಚೇರಿಗೆ ಶಾಸಕ ಪ್ರೀತಂ ಗೌಡ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಅರ್ಜಿ ವಿಲೇವಾರಿ ವಿಳಂಬವಾಗುತ್ತಿರುವುದು ಏಕೆ ಎಂದು ತಹಸೀಲ್ದಾರ್ ನಟೇಶ್ ಅವರನ್ನು ಶಾಸಕರು ಪ್ರಶ್ನಿಸಿದರು. ಕಚೇರಿಯಲ್ಲಿ ತರಬೇತಿ ಪಡೆಯದ ಸಿಬ್ಬಂದಿಯೇ ಹೆಚ್ಚಾಗಿದ್ದಾರೆ. ಹೀಗಾಗಿ ಅರ್ಜಿ ವಿಲೇವಾರಿ ವಿಳಂಬವಾಗುತ್ತಿದೆ ಎಂದು ತಹಸೀಲ್ದಾರ್ ಹೇಳಿದಾಗ ಗರಂ ಆದ ಶಾಸಕ ಪ್ರೀತಂ, ತರಬೇತಿ ಇಲ್ಲದವರಿದ್ದರೆ ಅವರನ್ನು ತೆಗೆದುಹಾಕಿ, ಉತ್ತಮ ತರಬೇತಿಯುಳ್ಳ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಿ. ನಮಗೆ ಸಾರ್ವಜನಿಕರ ಕೆಲಸ ಕಾರ್ಯವಾಗುವುದು ಮುಖ್ಯ ಎಂದು ಹೇಳಿದರು.
ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಬೇಕು. ದೂರದ ಊರುಗಳಿಂದ ಜನರು ವಿವಿಧ ಕೆಲಸ ಕಾರ್ಯ ನಿಮಿತ್ತ ಕಚೇರಿಗೆ ಆಗಮಿಸುತ್ತಾರೆ. ಅರ್ಜಿ ವಿಲೇವಾರಿಯಾಗದಿದ್ದರೆ ಜನರು ನಿತ್ಯ ಕಚೇರಿಗೆ ಅಲೆದಾಡಲು ಸಾಧ್ಯವಾಗುತ್ತಾ ಎಂದು ಪ್ರಶ್ನಿಸಿದ ಅವರು, ವೇಗವಾಗಿ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್‌ಗೆ ತಾಕೀತು ಮಾಡಿದರು.
ಇದೇ ವೇಳೆ ಕಚೇರಿಗೆ ವಿಳಂಬವಾಗಿ ಬರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಇನ್ನು ಮುಂದೆ ಹೀಗೆ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ | ನನ್ನ ಕೊಲೆಯಾದರೆ ಅದಕ್ಕೆ ಶಾಸಕ ಪ್ರೀತಂಗೌಡ ಕಾರಣ: ಅಗಿಲೆ ಯೋಗೇಶ್ ಹೇಳಿಕೆ