Site icon Vistara News

ಬೇಲೂರಿನ ಹಳೆ ಸೇತುವೆ ದುರಸ್ತಿಗೆ ಆಗ್ರಹ, ನಾಲ್ಕು ದಿನದ ಗಡುವು, ಪ್ರತಿಭಟನೆ ಎಚ್ಚರಿಕೆ

ಸೇತುವೆ ದುರಸ್ತಿಗೆ ಆಗ್ರಹ

ಹಾಸನ: ಬೇಲೂರು ಪಟ್ಟಣದ ಸಮೀಪ ಯಗಚಿ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಟಿಷರ ಕಾಲದ ಸೇತುವೆ ಶಿಥಿಲಗೊಂಡಿದ್ದು, ಇದರ ದುರಸ್ತಿ ಆಗ್ರಹಿಸಿ ಕರವೇ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಸೇತುವೆ ಮೇಲೆ ಗಿಡಗಂಟಿಗಳು ಬೆಳೆದು ಜೀರ್ಣಾವಸ್ಥೆ ತಲುಪಿದ್ದು, 4 ದಿನದೊಳಗೆ ದುರಸ್ತಿಗೊಳಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಎಚ್ಚರಿಕೆ ನೀಡಿದರು.

ಹಲವಾರು ದಶಕಗಳ ಕಾಲ ಸಂಪರ್ಕ ಕೊಂಡಿಯಾಗಿದ್ದ ಸೇತುವೆಯಲ್ಲಿ ಗಿಡಗಂಟಿಗಳು ಬೆಳೆದು ಸೇತುವೆ ಬಿರುಕು ಬಿಡುತ್ತಿದೆ. ಹಳೆಯ ತಂತ್ರಜ್ಞಾನದಿಂದ ನಿರ್ಮಾಣಗೊಂಡ ಸೇತುವೆ ಇದಾಗಿದ್ದು, ದುರಸ್ತಿಗೊಳಿಸಿದರೆ ಮುಂದಿನ ಪೀಳಿಗೆಯು ಶತಮಾನದ ಸೇತುವೆಯನ್ನು ವೀಕ್ಷಿಸಲು ಅವಕಾಶ ದೊರೆಯುತ್ತದೆ. ಆದರೆ ಈ ಬಗ್ಗೆ ಶಾಸಕರಿಗಾಗಲಿ ಅಥವಾ ತಾಲೂಕು ಆಡಳಿತಕ್ಕಾಗಲಿ ಪರಿಜ್ಞಾನವಿಲ್ಲದಿರುವುದು ಬೇಸರದ ವಿಷಯ ಎಂದು ಕರವೇ ತಾಲೂಕು ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರು, ಪುರಸಭೆ ಅಧ್ಯಕ್ಷರು ಪಿಡಬ್ಲ್ಯುಡಿ ಅಧಿಕಾರಿಗಳು ಹಾಗೂ ತಹಶೀಲ್ದಾರರು ಸೇತುವೆ ಮೇಲೆಯೇ ದಿನನಿತ್ಯ ಓಡಾಡುತ್ತಾರೆ. ಶಾಸಕರು ಪ್ರತಿ ಭಾಷಣದಲ್ಲೂ ತಾಲ್ಲೂಕಿನಲ್ಲಿ ಸಾವಿರಾರು ಕೋಟಿ ಹಣದಲ್ಲಿ ಅಭಿವೃದ್ಧಿ ಪಡಿಸಿರುವುದಾಗಿ ಹೇಳುತ್ತಾರೆ. ಆದರೆ ಹಳೆ ಸೇತುವೆ ದುರಸ್ತಿ ಮಾಡಿಸಲು ಇವರ ಕೈಯಲ್ಲಿ ಆಗುತ್ತಿಲ್ಲ, ನಿಮ್ಮ ಕೈಯಲ್ಲಿ ಈ ಸೇತುವೆ ದುರಸ್ತಿ ಪಡಿಸಲು ಸಾಧ್ಯವಾಗದಿದ್ದರೆ ರಕ್ಷಣಾ ವೇದಿಕೆಯವರು ಸುಪರ್ದಿಗೆ ಒಪ್ಪಿಸಿ, ನಾವು ಟೊಂಕಕಟ್ಟಿ ನಿಂತು ಇದರ ರಕ್ಷಣೆ ಮಾಡಲು ಸಿದ್ಧ ಎಂದು ಕಾರ್ಯಕರ್ತರು ಸವಾಲು ಹಾಕಿದರು.

ಇನ್ನು 4 ದಿನದೊಳಗೆ ಈ ಸೇತುವೆಯನ್ನು ದುರಸ್ತಿ ಪಡಿಸಬೇಕು. ಇಲ್ಲವಾದಲ್ಲಿ ಇದೇ ಸೇತುವೆ ಮೇಲೆ ಅಡುಗೆ ಮಾಡಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್, ಉಪಾಧ್ಯಕ್ಷ ಅನಿಲ್, ಚಂದ್ರೇಗೌಡ, ಯುವ ಘಟಕ ಅಧ್ಯಕ್ಷ ಮೋಹನ್, ಪ್ರಸನ್ನ, ಶ್ರೀಧರ್, ಸೋಮಣ್ಣ ಮತ್ತಿತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ಬೆಳಗಾವಿ ಶಾಲಾ ಕಟ್ಟಡ ದುರಸ್ತಿ ಮಾಡಿ ಎಂದವರ ಮೇಲೆಯೇ FIR ದಾಖಲು?

Exit mobile version