Site icon Vistara News

Dengue Fever: ಹಾಸನದಲ್ಲಿ ಡೆಂಗ್ಯೂಗೆ ಎಂಬಿಬಿಎಸ್‌ ವಿದ್ಯಾರ್ಥಿ ಬಲಿ; ಧಾರವಾಡದಲ್ಲಿ 5 ತಿಂಗಳ ಮಗು ಸಾವು

Dengue Fever

ಹಾಸನ: ಹಾಸನದಲ್ಲಿ‌ ಡೆಂಗ್ಯೂಗೆ (Dengue Fever) ಮತ್ತೊಬ್ಬ ಯುವಕ ಬಲಿಯಾಗಿದ್ದಾನೆ. ಎಂಬಿಬಿಎಸ್ ವಿದ್ಯಾರ್ಥಿ ಕುಶಾಲ್ (22) ಡೆಂಗ್ಯು ಜ್ವರದಿಂದ ಮೃತಪಟ್ಟವರು. ಹಾಸನದ ಹೊಳೆನರಸೀಪುರ ‌ತಾಲೂಕಿನ ಹಳ್ಳೀ ಮೈಸೂರು ಸಮೀಪದ ಗೋಹಳ್ಳಿ ಗ್ರಾಮದ ಕುಶಾಲ್‌, ಒಂದು ವಾರದಿಂದ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಗುರುವಾರ ರಾತ್ರಿ ಕುಶಾಲ್‌ ಮೃತಪಟ್ಟಿದ್ದಾರೆ. ಪ್ರತಿಭಾನ್ವಿತ ಹಾಗೂ ಬಡ ವಿದ್ಯಾರ್ಥಿಯಾಗಿದ್ದ ಕುಶಾಲ್, ಹಾಸನದ ಹಿಮ್ಸ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ. ಕುಶಾಲ್ ಸಾವನ್ನಪ್ಪಿದ ಆಸ್ಪತ್ರೆಯಲ್ಲೇ ತಾಯಿ ರೇಖಾ ಅವರು ಡೆಂಗ್ಯೂಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಯಿ ರೇಖಾ ಮತ್ತು ತಂದೆ ಮಂಜುನಾಥ್ ಮಗನ ಎಂಬಿಬಿಎಸ್ ಕನಸು ಹೊತ್ತಿದ್ದರು. ರೇಖಾ ಟೈಲರ್ ವೃತ್ತಿ ಮಾಡುತ್ತಿದ್ದರೆ, ಮಂಜುನಾಥ್‌ ಅವರು ಶಿಕ್ಷಕ ವೃತ್ತಿಯಲ್ಲಿದ್ದರು. ಆದರೆ ಇದೀಗ ಡೆಂಗ್ಯೂಗೆ ಮಗ ಕುಶಾಲ್‌ ಬಲಿಯಾಗಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Road Accident : ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಛಿದ್ರಗೊಂಡ ದಂಪತಿ; ಎಎಸ್‌ಐಗೆ ಬಡಿದ ಅಪರಿಚಿತ ವಾಹನ

ಧಾರವಾಡದಲ್ಲೂ ಡೆಂಗ್ಯೂಗೆ ಮಗು ಬಲಿ

ಧಾರವಾಡದಲ್ಲಿ ಡೆಂಗ್ಯೂ ಜ್ವರಕ್ಕೆ ಮತ್ತೊಂದು ಮಗು ಬಲಿಯಾಗಿದೆ. ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 5 ತಿಂಗಳ ಆರಾಧ್ಯ ಲಮಾಣಿ ಡೆಂಗ್ಯೂಯಿಂದ ಮೃತಪಟ್ಟಿದೆ. ಧಾರವಾಡ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿರುವ ಗೋಪಾಲ್ ಲಮಾಣಿ ಮಗು ಆರಾಧ್ಯ ಮೃತ ದುರ್ದೈವಿ. ಕಳೆದ ಜುಲೈ 15ರಂದು ಜ್ವರದಿಂದ ಬಳಲುತಿದ್ದ ಆರಾಧ್ಯಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಬರದೇ ಮಗು ಮೃತಪಟ್ಟಿದೆ.

ಡೆಂಗ್ಯೂ ಭೀತಿ; ಶಾಲೆ ಸುತ್ತಲ ಕೊಳಚೆ ನೀರು

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹೊತ್ತಿನಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಆದರೆ ಕೊಪ್ಪಳದ ಬೆಟಗೇರಿ ಗ್ರಾಮದಲ್ಲಿ ಶಾಲೆಯ ಸುತ್ತಲೂ ಕೊಳಚೆ ನೀರು ತುಂಬಿದ್ದು, ಮಕ್ಕಳಿಗೆ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತಿದೆ. ಶಾಲೆ ಸುತ್ತಲು ಸ್ವಚ್ಛತೆ ಕಾಪಾಡಲು ಆಗ್ರಹಿಸಿ, ಮಕ್ಕಳ ಪಾಲಕರು ಬೆಟೆಗೇರಿ ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿದರು. ಬೆಟಗೇರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುತ್ತಲು ಕೊಳಚೆ ನೀರು ಇದೆ. ಈಗಾಗಲೇ ಕೊಳಚೆಯಿಂದಾಗಿ ನಾಲ್ಕು ಜನರಿಗೆ ಡೆಂಗ್ಯೂ ಕಾಣಿಸಿಕೊಂಡಿದೆ ಎಂದು ಕಿಡಿಕಾರಿದರು.

ಸಾವಿನ ಸಂಖ್ಯೆ 8ಕ್ಕೆ ಏರಿಕೆ

ರಾಜ್ಯಾದ್ಯಂತ ಡೆಂಗ್ಯೂಗೆ 8 ಮಂದಿ ಮೃತಪಟ್ಟಿದ್ದಾರೆ. ಜನವರಿಯಿಂದ ಈವರೆಗೆ (ಜು.18) 85,270 ಮಂದಿ ರಕ್ತ ಮಾದರಿಯನ್ನು ಪರೀಕ್ಷಿಸಿದ್ದು, ಇದರಲ್ಲಿ 11,451 ಮಂದಿಗೆ ಡೆಂಗ್ಯೂ ದೃಢಪಟ್ಟಿದೆ. ಇದರಲ್ಲಿ 620 ಸಕ್ರಿಯ ಪ್ರಕರಣಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version