ಸಕಲೇಶಪುರ: “ಮುಂದಿನ 100 ದಿನಗಳ ಒಳಗಾಗಿ ಎತ್ತಿನಹೊಳೆ ಮೊದಲ ಹಂತದ ಯೋಜನೆಯಲ್ಲಿ (Yethinahole project) ನೀರು ಪಂಪ್ ಮಾಡಿ ಹರಿಸಲಾಗುವುದು” ಎಂದು ಡಿಸಿಎಂ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಎತ್ತಿನಹೊಳೆ ಯೋಜನೆ ಸಂಬಂಧ ಹಾಸನ ಜಿಲ್ಲೆಯ ಸಕಲೇಶಪುರದ ಹೆಬ್ಬನಹಳ್ಳಿ ಪವರ್ ಸಬ್ ಸ್ಟೇಷನ್ ಮತ್ತು ದೊಡ್ಡನಾಗರ ಪಂಪ್ ಹೌಸ್‌ಗೆ ಮಂಗಳವಾರ ಭೇಟಿ ನೀಡಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಶಿವಕುಮಾರ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಯೋಜನೆ ಮುಂದೆ ಹೋಗೇ ಇಲ್ಲ!
“ಪಶ್ಚಿಮ ಘಟ್ಟದಲ್ಲಿ ಹರಿಯುವ ನೀರಲ್ಲಿ ಕೋಲಾರದವರೆಗೆ ಒಟ್ಟು 24 ಟಿಎಂಸಿ ಹರಿಸುವುದು ಎತ್ತಿನಹೊಳೆ ಯೋಜನೆಯ ಉದ್ದೇಶ. ಈ ಹಿಂದೆ ಜಲ ಸಂಪನ್ಮೂಲ ಸಚಿವನಾಗಿದ್ದಾಗಲೂ ನಾನು ಇಲ್ಲಿಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದೆ. ಕೆಲಸ ಆಗ ಎಲ್ಲಿತ್ತೋ ಈಗಲೂ ಅಲ್ಲೇ ಇದೆ. ಈ ಯೋಜನೆ ವೆಚ್ಚ ಸದ್ಯಕ್ಕೆ 24 ಸಾವಿರ ಕೋಟಿ ರೂಗೆ ಏರಿಕೆ ಆಗಿದ್ದು, ಈ ಯೋಜನೆ ಪ್ರಗತಿ ಬಗ್ಗೆ ನನಗೆ ಸಮಾಧಾನ ಇಲ್ಲ. ಹೀಗಾಗಿ ನಾನೇ ಖುದ್ದಾಗಿ ಬಂದು ಪರಿಶೀಲನೆ ಮಾಡಿದ್ದೇನೆʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ʻʻಎತ್ತಿನಹೊಳೆ ಯೋಜನೆಗೆ ಎದುರಾಗಿರುವ ಸಮಸ್ಯೆಗಳಿಗೆ ಒಂದೊಂದಾಗಿ ಪರಿಹಾರ ನೀಡಲಾಗಿದೆ. ವಿದ್ಯುತ್ ಇಲಾಖೆ ಸಮಸ್ಯೆ, ಅರಣ್ಯ ಇಲಾಖೆ ಸಮಸ್ಯೆ, ಭೂ ಮಾಲೀಕರ ಸಮಸ್ಯೆ ಸೇರಿದಂತೆ ಎಲ್ಲದ್ದಕ್ಕೂ ಪರಿಹಾರ ಸೂಚಿಸಲಾಗಿದೆ. ಅರಣ್ಯ ಪ್ರದೇಶ ಸಮಸ್ಯೆಗಳ ಪರಿಹಾರಕ್ಕೆ ಸಹಕಾರ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ಒಪ್ಪಿದ್ದಾರೆ. ಕಂದಾಯ ಭೂಮಿ ಸ್ವಾಧೀನ ಸಮಸ್ಯೆ ನಿವಾರಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇವರೆಲ್ಲರ ಆಶ್ವಾಸನೆ ಮೇರೆಗೆ 100 ದಿನಗಳಲ್ಲಿ ಮೊದಲ ಹಂತದ ಯೋಜನೆಯ ನೀರನ್ನು ಪಂಪ್ ಮಾಡಲು ಕಾಲ ಮಿತಿ ನಿಗದಿ ಮಾಡಿದ್ದೇವೆʼʼ ಎಂದು ಡಿ.ಕೆ. ಶಿವಕುಮಾರ್.
ಯೋಜನಾ ವೆಚ್ಚ 10000 ಕೋಟಿ ಹೆಚ್ಚಲು ಬಿಜೆಪಿ ಕಾರಣ
ಕಳೆದ ಮೂರೂವರೆ ವರ್ಷ ಅವಧಿಯಲ್ಲಿ ಈ ಯೋಜನೆ ಹೆಚ್ಚು ಪ್ರಗತಿ ಕಂಡಿಲ್ಲ. ಈ ಯೋಜನೆಗೆ ಇದ್ದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಕಾರಣ. ಹಿಂದಿನ ಬಿಜೆಪಿ ಸರಕಾರ ಯಾವುದೇ ಪ್ರಯತ್ನ ಮಾಡಿಲ್ಲ. ಸರ್ಕಾರದ ಆಡಳಿತ ಯಂತ್ರ ಹೇಗೆ ಬಳಸಿಕೊಳ್ಳಬೇಕು ಎಂದು ಅರಿತು ಪರಿಹಾರ ನೀಡಲು ಅದಕ್ಕೆ ಆಗಲಿಲ್ಲ. ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸದ ಪರಿಣಾಮ 14 ಸಾವಿರ ಕೋಟಿ ರೂ ಇದ್ದ ಯೋಜನೆ ಈಗ 24 ಸಾವಿರ ಕೋಟಿಗೆ ಬಂದು ನಿಂತಿದೆ. ಇದರಿಂದ ಸರಕಾರಕ್ಕೆ ಅಂದರೇ ಜನರಿಗೆ ನಷ್ಟ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಈ ವಿಚಾರವಾಗಿ ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಮೊದಲು ಯೋಜನೆ, ನಂತರವಷ್ಟೇ ನೀರಿನ ಲೆಕ್ಕ ಎಂದ ಡಿಕೆಶಿ
ಐಐಟಿಯವರು ಈ ಯೋಜನೆಯಿಂದ ನೀರು ಎತ್ತಲು ಅಸಾಧ್ಯ ಎಂದು ಹೇಳಿರುವ ಬಗ್ಗೆ ಕೇಳಿದಾಗ, “ಮೊದಲು ಈ ಯೋಜನೆ ಆರಂಭಿಸೋಣ. ಆಮೇಲೆ ಎಷ್ಟು ನೀರು ತರಬಹುದು ಎಂದು ಲೆಕ್ಕ ಹಾಕೊಣ. ಮೊದಲು ಅಡುಗೆ ಸಿದ್ಧ ಆಗಬೇಕು, ಆನಂತರ ಎಷ್ಟು ಜನ ತಿನ್ನಬೇಕು ಎಂದು ಲೆಕ್ಕ ಹಾಕಬಹುದು. ಕೊರತೆ ಬಿದ್ದರೆ ಮತ್ತೆ ತಯಾರಿಸಬಹುದು” ಎಂದು ತಿಳಿಸಿದರು.
ಯೋಜನೆ ಪೂರ್ಣಗೊಳ್ಳುವುದು ಯಾವಾಗ ಎಂಬ ಪ್ರಶ್ನೆಗೆ, “ಸದ್ಯಕ್ಕೆ ನಾವು 100 ಕಿ.ಮೀ ಆದ್ಯತೆ ಇಟ್ಟುಕೊಂಡಿದ್ದೇವೆ. ಎಲ್ಲಿ ಅರಣ್ಯ ಪ್ರದೇಶ, ವಿದ್ಯುತ್, ಗುತ್ತಿಗೆದಾರರ ಸಮಸ್ಯೆ ಇದೆ ಎಂದು ಸ್ಥಳೀಯ ಶಾಸಕರ ಜೊತೆ ಚರ್ಚೆ ಮಾಡಿದ್ದೇನೆ. ಮುಂದಿನ ಹಂತದಲ್ಲಿ ತುಮಕೂರು ಹಾಗೂ ದೊಡ್ಡಬಳ್ಳಾಪುರದಲ್ಲಿರುವ ಬ್ಯಾಲೆನ್ಸ್ ರಿಸರ್ವಯರ್ ಜಾಗ ನೋಡಿ ಮುಂದಿನ ವಿಚಾರ ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.
ಈ ಹಿಂದೆ ಈ ಸಮಸ್ಯೆಗಳಿಗೆ ಪರಿಹಾರ ಇಲ್ಲ ಎಂದು ಹೇಳಲಾಗುತ್ತಿತ್ತು, ಹೀಗಾಗಿ ಈ ಯೋಜನೆ ಯಶಸ್ವಿಯಾಗುವ ವಿಶ್ವಾಸ ಇದೆಯೇ ಎಂಬ ಪ್ರಶ್ನೆಗೆ, “ನಾವು ಭರವಸೆ ಮೇಲೆ ಬದುಕುತ್ತಿದ್ದೇವೆ. 24 ಟಿಎಂಸಿ ನೀರಿನ ಪೈಕಿ ಸುಮಾರು 70-80% ನೀರು ಬರುವ ನಿರೀಕ್ಷೆ ಇದೆ. ಇದಲ್ಲದೆ ನಾವು ಇನ್ನಷ್ಟು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಏನಾದರೂ ಎಡವಟ್ಟಾದರೆ ಎಂದು ಪರ್ಯಾಯ ಯೋಜನೆಗಳನ್ನು ರೂಪಿಸುತ್ತಿದ್ದು, ಈಗ ಆ ಬಗ್ಗೆ ಚರ್ಚೆ ಮಾಡುವುದಿಲ್ಲ” ಎಂದು ತಿಳಿಸಿದರು.
ಗುತ್ತಿಗೆದಾರರು ಅವೈಜ್ಞಾನಿಕವಾಗಿ ಕಾಮಗಾರಿ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಎಲ್ಲೆಲ್ಲಿ ಬದಲಾವಣೆ ಮಾಡಬೇಕು, ಎಲ್ಲೆಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು, ಆ ಬಗ್ಗೆ ಹೊಸ ಎಂಜಿನಿಯರ್ ಜತೆ ಚರ್ಚೆ ನಡೆಸುತ್ತೇನೆ” ಎಂದು ತಿಳಿಸಿದರು.
ಬಿಬಿಎಂಪಿಯಲ್ಲಿ ಕೆಲಸ ಮಾಡಿದವರಿಗೆ ದುಡ್ಡು ಸಿಗಲಿದೆ
ಬಿಬಿಎಂಪಿಯಲ್ಲಿ 25 ಲಕ್ಷದವರೆಗೆ ಸಣ್ಣ ಗುತ್ತಿಗೆದಾರರ ಬಿಲ್ ಪಾವತಿ ಆಗಿರುವ ಬಗ್ಗೆ ಕೇಳಿದಾಗ, “ಕೆಲಸ ಮಾಡಿರುವ ಎಲ್ಲರಿಗೂ ಹಣ ನೀಡುತ್ತೇವೆ. ಕೆಲಸ ಮಾಡಿರುವವರಿಗೆ ಸಮಯ ವ್ಯರ್ಥ ಮಾಡದೆ ಹಣ ನೀಡಿ ಎಂದು ನಿರ್ದೇಶನ ನೀಡಿದ್ದೇನೆ” ಎಂದು ತಿಳಿಸಿದರು. ಕೆಲಸ ಮಾಡಿದವರಿಗೆ ಯಾವುದೇ ತೊಂದರೆ ಇಲ್ಲ. ಅವರು ಚಿಂತಿಸುವ ಅಗತ್ಯ ಇಲ್ಲ ಎಂದು ಭರವಸೆ ನೀಡಿದರು.
ಕಾವೇರಿ ಪ್ರತಿಭಟನೆ ರಾಜಕೀಯ ಪ್ರೇರಿತ ಹೋರಾಟ
ಕಾವೇರಿ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿರುವ ಬಗ್ಗೆ ಕೇಳಿದಾಗ, “ರಾಜಕೀಯ ಉದ್ದೇಶಕ್ಕಾಗಿ ನಡೆಯುತ್ತಿರುವ ಪ್ರತಿಭಟನೆ ನಿಲ್ಲಿಸಲು ಸಾಧ್ಯವೇ? ಅವರಿಗೆ ತಮ್ಮ ಅಸ್ತಿತ್ವ ತೋರಿಸಿಕೊಳ್ಳಬೇಕು. ನೀರು ಎಷ್ಟಿದೆ ಎಂಬ ವಾಸ್ತವಾಂಶ ಹೇಳಿದ್ದೇನೆ. ತಮಿಳುನಾಡಿಗೆ ತೊಂದರೆ ಆಗಿದೆ ಎಂದು ಅವರು ಕೋರ್ಟ್ ಮೊರೆ ಹೋಗಿದ್ದು, ನಮಗೂ ತೊಂದರೆ ಆಗಿದೆ. ನಾವು ನಮ್ಮ ರೈತರಿಗೆ ನೀರಿನ ಅಭಾವದ ಬಗ್ಗೆ ಹೇಳಿದ್ದೇವೆ. ಸಹಜ ಮಳೆ ಸಮಯದಲ್ಲಿ ನಾವು 70 ಟಿಎಂಸಿ ನೀರು ಬಿಡಬೇಕು. ಮಳೆ ಕೊರತೆ ಇದ್ದಾಗ 32 ಟಿಎಂಸಿ ನೀರು ಬಿಡಬೇಕು. ಈಗಾಗಲೇ ನಾವು 24 ಟಿಎಂಸಿ ನೀರು ಬಿಟ್ಟಿದ್ದು, ಇನ್ನೂ 8.5 ಟಿಎಂಸಿ ನೀರು ಬಿಡಬೇಕು. ನಮಗೆ ನೀರಿನ ಕೊರತೆ ಇದೆ. ಹೀಗಾಗಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನೀರು ಬಿಡುವ ಅಧಿಕಾರ ಬಿಜೆಪಿ ಕೈಯಲ್ಲಿ ಇದೆ. ನಾವು ಸರ್ವಪಕ್ಷ ಸಭೆ ಕರೆದಿದ್ದು, ಮುಂದೆ ಏನು ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು” ಎಂದು ತಿಳಿಸಿದರು.
ಇದನ್ನೂ ಓದಿ: HD Kumaraswamy : ಒಮ್ಮೆ ಚಂದ್ರಯಾನ ಮುಗೀಲಿ; ಆಮೇಲೆ ನೈಸ್‌ನ ಎಲ್ಲ ದಾಖಲೆ ಬಿಚ್ಚಿಡ್ತೀನಿ: ಎಚ್.ಡಿ. ಕುಮಾರಸ್ವಾಮಿ
ಬೆದರಿಕೆ ಹಾಕಿದ್ದರೆ ದೂರು ಕೊಡಲಿ: ಕುಮಾರಸ್ವಾಮಿಗೆ ಸವಾಲು
ಅಧಿಕಾರ ದುರ್ಬಳಕೆ ಮಾಡಿಕೊಂಡು ನಮ್ಮ ಶಾಸಕರಿಗೆ ಬೆದರಿಕೆ ಹಾಕಿ ತಮ್ಮ ಪಕ್ಷಕ್ಕೆ ಕರೆಯುತ್ತಿದ್ದಾರೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಸಂಬಂಧಿಸಿದಂತೆ ಕೇಳಿದಾಗ, “ಯಾರಿಗೆ ಬೆದರಿಕೆ ಹಾಕಲಾಗಿದೆಯೋ ಅವರಿಂದ ಪೊಲೀಸರಿಗೆ ದೂರು ಕೊಡಿಸಲಿ. ಅದಕ್ಕೆ ಅವಕಾಶ ಇದೆಯಲ್ಲ” ಎಂದು ತಿಳಿಸಿದರು.
ಕಾಡಾನೆ ದಾಳಿಗೆ ಮೃತಪಟ್ಟವರ ಬಗ್ಗೆ ಕೇಳಿದಾಗ, “ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಎಸ್ಪಿ ಜೊತೆ ಮಾತನಾಡುತ್ತೇನೆ. ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರೂ, ಕಾಡಾನೆಗಳು ನಡೆದಿದ್ದೇ ದಾರಿ. ಅವುಗಳನ್ನು ನಿಯಂತ್ರಣ ಮಾಡುವುದು ಕಷ್ಟ. ಈ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ” ಎಂದು ತಿಳಿಸಿದರು.