Site icon Vistara News

Elephant Arjuna : ಅಧಿಕಾರಿಗಳ ಗುಂಡಿನಿಂದಲೇ ಅರ್ಜುನನ ಮರಣ?; ಇಲ್ಲಿದೆ ವಿಡಿಯೊ ಸಾಕ್ಷಿ

Arjuna death

ಹಾಸನ: ಎಂಟು ಬಾರಿ ಮೈಸೂರು ದಸರಾ ಅಂಬಾರಿ (Mysore Dasara Ambari) ಹೊತ್ತು ತನ್ನ ಅದ್ಧೂರಿ ಗಜ ನಡಿಗೆಯಿಂದ ಜನರನ್ನು ರಂಜಿಸಿದ್ದ ಅರ್ಜುನ ಎಂಬ ಆನೆಯ (Elephant Arjuna) ಸಾವಿಗೆ ಅಧಿಕಾರಿಗಳು ಮಾಡಿದ ಎಡವಟ್ಟೇ ಕಾರಣವಾಯಿತೇ ಎಂಬ ಗಂಭೀರ ಪ್ರಶ್ನೆ ಎದುರಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಪುಂಡಾನೆ ಸೆರೆಗೆ ನಡೆದ ಕಾರ್ಯಾಚರಣೆಯ (Elephant Operation) ವೇಳೆ ಅರ್ಜುನ ಪ್ರಾಣ ಕಳೆದುಕೊಂಡಿದ್ದಾನೆ. ಅಧಿಕಾರಿಗಳ ಪ್ರಕಾರ ಪುಂಡಾನೆ ದಾಳಿಗೆ ಸಿಲುಕಿ ಅರ್ಜುನ ಮೃತಪಟ್ಟಿದ್ದಾನೆ. ಆದರೆ, ಅರ್ಜುನನಂಥ ಬಲಶಾಲಿಯನ್ನು ಪುಂಡಾನೆ ಕೆಡವಲು ಕಾರಣವಾಗಿದ್ದು ಅಧಿಕಾರಿಗಳ ಎಡವಟ್ಟು ಎನ್ನುವುದು ಜನರು ಮತ್ತು ಆನೆಗಳ ಮಾವುತರ ಆರೋಪ.

ಕಾಡಾನೆಯನ್ನು ನಿಯಂತ್ರಿಸಲು ಅರಣ್ಯಾಧಿಕಾರಿಗಳು ನಡೆಸಿದ ಪ್ರಯೋಗಗಳೆಲ್ಲವೂ ಅರ್ಜುನನ ಮೇಲೆ ಆಗಿದೆ. ಕಾಡಾನೆಯ ಕಾಲಿಗೆ ಎಂದು ಹಾರಿಸಿದ ಗುಂಡು ಅರ್ಜುನನ ಕಾಲಿಗೆ ಬಿದ್ದಿದೆ. ಈ ಕಾರಣದಿಂದ ಬಲ ಕಳೆದುಕೊಂಡ ಅರ್ಜುನನ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದೆ ಎನ್ನುವುದು ಮಾವುತರು ನೀಡುವ ವಿವರಣೆ. ಅಂತಿಮವಾಗಿ ಕಾಡಾನೆ ತಿವಿತಕ್ಕೆ ಒಳಗಾಗಿ ಅರ್ಜುನ ಸತ್ತಿದ್ದು ನಿಜವಾದರೂ ಅದಕ್ಕೆ ಕಾರಣವಾಗಿದ್ದು ಅಧಿಕಾರಿಗಳ ಎಡವಟ್ಟು ಎನ್ನುವುದು ಈಗ ಕೇಳಿಬರುತ್ತಿರುವ ಮಾತು.

ಅಲ್ಲಿ ನಡೆದ ಘಟನೆಗಳ ಬಗ್ಗೆ ಕಾವಾಡಿಗರು ಆಡಿಕೊಂಡಿರುವ ಮಾತುಗಳ ಆಡಿಯೊ ಒಂದು ವೈರಲ್‌ ಆಗಿದ್ದು, ಅದರಲ್ಲಿ ಈ ಎಡವಟ್ಟುಗಳ ಚರ್ಚೆ ನಡೆದಿದೆ.

ಕಾವಾಡಿಗರು ಹೇಳುವ ಪ್ರಕಾರ ಕಾರ್ಯಾಚರಣೆಯ ವೇಳೆ ನಡೆದ ಘಟನಾವಳಿಗಳು ಇವು

ಅರ್ಜುನ ಮತ್ತು ಪ್ರಶಾಂತ್‌ ಎಂಬ ಸಾಕಾನೆಗಳನ್ನು ಕೂಡಿಕೊಂಡು ಕಾಡಾನೆಯನ್ನು ಪಳಗಿಸುವ ಕಾರ್ಯಾಚರಣೆ ಆರಂಭವಾಗಿತ್ತು. ಕಾವಾಡಿಗರು ಆನೆಯ ಮೇಲೆ ಕುಳಿತೇ ಸಾಗುತ್ತಿದ್ದರು. ಒಂದು ಹಂತದಲ್ಲಿ ಕಾಡಾನೆ ಮತ್ತು ನಾಡಾನೆಗಳ ಮುಖಾಮುಖಿ ನಡೆಯಿತು.

ಈ ಹಂತದಲ್ಲಿ ಅಬ್ಬರಿಸುತ್ತಿದ್ದ ಕಾಡಾನೆಯನ್ನು ನಿಯಂತ್ರಿಸಲು ಅರಿವಳಿಕೆ ಶಾಟ್‌ ನ್ನು ಶೂಟ್‌ ಮಾಡಲಾಯಿತು. ಆದರೆ, ಮೂರೂ ಆನೆಗಳು ಹತ್ತಿರ ಹತ್ತಿರ ಇದ್ದಿದ್ದರಿಂದ ಅದು ಕಾಡಾನೆ ಬದಲು ಪ್ರಶಾಂತ್‌ ಎಂಬ ಸಾಕಾನೆ ಮೇಲೆ ಬಿತ್ತು. ಒಮ್ಮಿಂದೊಮ್ಮೆಗೇ ಕಕ್ಕಾಬಿಕ್ಕಿಯಾದ ಅಧಿಕಾರಿಗಳು ಅದರ ಪರಿಣಾಮವನ್ನು ತಗ್ಗಿಸಲು ಇನ್ನೊಂದು ಶಾಟ್‌ ನೀಡಿದರು.

ಈ ನಡುವೆ, ಕಾಡಾನೆ ಅರ್ಜುನನ ಮೇಲೆ ಮುಗಿಬಿದ್ದಿತ್ತು. ಆ ಹೊತ್ತಿಗೆ ಪ್ರಶಾಂತ್‌ ಅರ್ಜುನನ ರಕ್ಷಣೆಗೆ ಬರುವ ಸ್ಥಿತಿಯಲ್ಲಿ ಇರಲಿಲ್ಲ. ಇದೇ ವೇಳೆ ಅರಣ್ಯಾಧಿಕಾರಿಗಳು ಕಾಡಾನೆ- ಸಾಕಾನೆ ಸಂಘರ್ಷದ ತಡೆಯಲು ಕೋವಿಯಿಂದ ಗುಂಡು ಹಾರಿಸಿದ್ದಾರೆ. ಅದು ಕಾಡಾನೆಗೆ ತಗಲುವ ಬದಲು ಅರ್ಜುನನ ಮೇಲೆ ಬಿದ್ದಿದೆ. ಒಮ್ಮಿಂದೊಮ್ಮೆಗೇ ಉಂಟಾದ ಆಘಾತದಿಂದ ಅರ್ಜುನ ಬಲ ಕಳೆದುಕೊಂಡು ಉರುಳಿದ್ದಾನೆ. ಆಗ ಮರಗಳು ಕೂಡಾ ಬಿದ್ದವು. ಕಾವಾಡಿಗರು ಕೂಡಾ ಆನೆಯ ಮೇಲಿಂದ ಇಳಿದು ಓಡಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಕಾಡಾನೆ ಅರ್ಜುನನಿಗೆ ಬಲವಾಗಿ ತಿವಿದಿದೆ- ಇದು ಕಾವಾಡಿಗರು ಸ್ಥಳೀಯರೊಬ್ಬರಿಗೆ ದೂರವಾಣಿ ಮೂಲಕ ನೀಡಿದ ಮಾಹಿತಿ.

ಹೀಗಾಗಿ ಅಧಿಕಾರಿಗಳ ಪ್ರಮಾದದಿಂದ ಅರ್ಜುನ ಪ್ರಾಣ ಕಳೆದುಕೊಂಡಿದ್ದಾನೆ ಎನ್ನುವುದು ಎಲ್ಲರ ಆರೋಪ. ಈ ಬಗ್ಗೆ ಸಮಗ್ರ ತನಿಖೆ ನಡೆಸಲೇಬೇಕು ಎಂಬ ಆಗ್ರಹ ಜೋರಾಗಿ ಕೇಳಿಬರುತ್ತಿದೆ.

ಕಾಡಾನೆ ಮದದಲ್ಲಿರುವಾಗಲೇ ಸೆರೆಗೆ ಹೋಗಿದ್ದೇ ತಪ್ಪು!

ಈ ನಡುವೆ, ಕಾಡಾನೆ ಮದದಲ್ಲಿತ್ತು. ಮದದಲ್ಲಿರುವ ಆನೆಗಳನ್ನು ನಿಯಂತ್ರಿಸುವುದು ತುಂಬ ಕಷ್ಟ. ಅಂಥ ಹೊತ್ತಲ್ಲಿ ಅರಿವಳಿಕೆ ವಿಧಾನದಿಂದ ಅವುಗಳನ್ನು ನಿಯಂತ್ರಿಸಿ ಬಳಿಕ ಕಾರ್ಯಾಚರಣೆ ನಡೆಸಬೇಕಾಗಿತ್ತು ಎಂಬ ಮಾತು ಕೇಳಿಬರುತ್ತಿದೆ. ಮದದಲ್ಲಿರುವ ಕಾಡಾನೆ ಹುಚ್ಚನಂತೆ ಆಡುತ್ತದೆ ಎಂಬ ಮಾಹಿತಿ ಕೊತ್ತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ತಪ್ಪು ನಿರ್ಧಾರ ಮಾಡಿದ್ದಾರೆ ಎಂಬ ಬಗ್ಗೆ ತಜ್ಞರು ಟೀಕೆ ಮಾಡಿದ್ದಾರೆ.

ಅಧಿಕಾರಿಗಳು ಹೇಳುವ ಪ್ರಕಾರ ಅಲ್ಲಿ ನಡೆದಿದ್ದೇನು?

1.ಸೋಮವಾರ ಬೆಳಗ್ಗೆಯೇ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾಡಾನೆಗಳು ಇದ್ದ ಸ್ಥಳಕ್ಕೆ ಹೋದಾಗ 12 ಆನೆಗಳಿದ್ದವು. ಆನೆಗಳ ಗುಂಪನ್ನು ಗಂಡಾನೆಯೊಂದು ಲೀಡ್​ ಮಾಡ್ತಿತ್ತು.

2.ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಲಾಗಿದ್ದರೂ ಅದು ಪೂರ್ಣ ಪ್ರಜ್ಞೆ ತಪ್ಪಿರಲಿಲ್ಲ. ಮತ್ತಿನಲ್ಲಿದ್ದಾಗ ಸಾಕಾನೆಗಳ ಮೇಲೆ ದಾಳಿಗೆ ಮುಂದಾಗಿದೆ.

3. ಕಾಡಾನೆಗಳು ದಾಳಿಗೆ ಮುಂದಾದ ವೇಳೆ ಇತರ ಆನೆಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಓಡಿಹೋಗಿದ್ದಾರೆ. ಆದರೆ, ಅರ್ಜುನ ಮಾತ್ರ ಅದರ ಜತೆ ಕಾಳಗ ನಡೆಸಿತು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ದಸರಾ ಹೀರೊ ‘ಅರ್ಜುನ’ ದಾರುಣ ಸಾವು, ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ

ಮಧ್ಯಾಹ್ನ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಕಾಡಾನೆ ಕಾರ್ಯಾಚರಣೆ ವೇಳೆ ವೀರ ಮರಣವನ್ನಪ್ಪಿದ ಅಂಬಾರಿ ವೀರ ಅರ್ಜುನನ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಸಮೀಪದ ನೆಡುತೋಪಿನಲ್ಲಿ ಸಕಲ ಸರ್ಕಾರಿ ಗೌರವ ಹಾಗು ರಾಜ ಮರ್ಯಾದೆಯೊಂದಿಗೆ ನಡೆಯಲಿದೆ.

ಅರ್ಜುನ ದಸರಾ ಅಂಬಾರಿ ಹೊತ್ತ ಆನೆಯಾದ ಕಾರಣ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಮೈಸೂರು ಅರಮನೆಯ ರಾಜ ವಂಶಸ್ಥರಿಂದಲೂ ಅರ್ಜುನನಿಗೆ ಅಂತಿಮ ಗೌರವ ಸಲ್ಲಲಿದೆ. ಅರಮನೆಯ ಪೊರೋಹಿತರಿಂದ ಅಂತಿಮ ವಿಧಿ ವಿಧಾನ ನಡೆಯಲಿದೆ.

Exit mobile version