Site icon Vistara News

Elephant Arjuna : ಎದ್ದೇಳು ರಾಜ, ನಾನು ಬಂದಿದ್ದೀನಿ ; ಅರ್ಜುನನ ಮುಂದೆ ಕಾವಾಡಿಗರ ಕಣ್ಣೀರು!

Arjuna death

ಹಾಸನ: ಎದ್ದೇಳು ರಾಜ ನಾನು ಬಂದಿದೀನಿ.. ಬಾ ಮನೆಗೆ ಹೋಗೋಣ : ಹೀಗೊಂದು ಕಣ್ಣೀರಿಡುತ್ತಿದ್ದಾರೆ ಕಾಡಾನೆ ಕಾರ್ಯಾಚರಣೆ ವೇಳೆ ಮರಣ ಹೊಂದಿದ ಆನೆ ಅರ್ಜುನನ ಮಾವುತ. ಮೈಸೂರು ದಸರಾದಲ್ಲಿ ತಾಯಿ ಚಾಮುಂಡೇಶ್ವರಿಯನ್ನು ತನ್ನ ಬೆನ್ನಮೇಲೆ ಹೊತ್ತು ಮೆರೆಸಿದ ವೀರ ಅರ್ಜುನ (Elephant Arjuna) ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಪುಂಡಾನೆ ಸೆರೆಗೆ ನಡೆದ ಕಾರ್ಯಾಚರಣೆಯ (Elephant Operation) ವೇಳೆ ಅಸು ನೀಗಿದ್ದ. ಪ್ರಾಣ ಕಳೆದುಕೊಂಡ ಜಾಗದಲ್ಲೇ ಅಂತ್ಯ ಸಂಸ್ಕಾರದ (final rites) ವಿಧಿ ವಿಧಾನಗಳು ನಡೆಯುತ್ತಿವೆ. ಈ ಹೊತ್ತಿನಲ್ಲಿ ಆನೆಯನ್ನು ತಬ್ಬಿಕೊಂಡು ಮಾವುತರು ಕಣ್ಣೀರು ಹಾಕುತ್ತಿರುವ ದೃಶ್ಯ ಎಲ್ಲರೂ ಮರುಗುವಂತೆ ಮಾಡಿದೆ.

ಕಣ್ಣೀರು ಹಾಕುತ್ತಿರುವ ಕಾವಾಡಿ

ಅರ್ಜುನನ್ನು ಪ್ರೀತಿಯಿಂದ ಪಳಗಿಸಿ, ಅವನ ಆಟಪಾಠಗಳಲ್ಲೇ ಮರೆತಿದ್ದ ಕಾವಾಡಿಗರಿಗೆ ತಮ್ಮ ಮಗುವನ್ನು ಕಳೆದುಕೊಂಡಷ್ಟೇ ದುಖ ಆಗುತ್ತಿದೆ. ಅದರಲ್ಲೂ ಅರ್ಜುನನ ಸಾವು ಅನ್ಯಾಯ ಎಂಬ ಮಾತುಗಳು ಕಾವಾಡಿಗರ ವಲಯದಲ್ಲಿದ್ದು ಕಣ್ಣೀರನ್ನು ಇನ್ನಷ್ಟು ಹೆಚ್ಚಿಸಿದೆ.

ಎದ್ದೇಳು ರಾಜ ನಾನು ಬಂದಿದೀನಿ.. ಬಾ ಮನೆಗೆ ಹೋಗೋಣ ಎನ್ನುತ್ತಾ ಅರ್ಜುನನ್ನು ಎಬ್ಬಿಸಲು ಪ್ರಯತ್ನ ಮಾಡಿದ ಕಾವಾಡಿ, ʻʻನಿನಗೆ ಮುದ್ದೆ ಮಾಡಿ ಕೊಡ್ತಿನಿ.. ಊಟ ಕೊಡ್ತಿನಿ.. ರಾಜ ನಾನು ಬಂದಿದಿನಿ ಎದ್ದೇಳುʼʼ ಎಂದೆಲ್ಲ ಕಣ್ಣೀರು ಹಾಕಿದ ಕಾವಾಡಿ ಕೊನೆಗೆ, ʻʻಅನ್ಯಾಯವಾಗಿ ನಿನ್ನ ಇಲ್ಲಿ ಕರ್ಕೊಬಂದು ಸಾಯಿಸಿ ಬಿಟ್ರಲ್ಲʼʼ ಎಂದು ಬಿಕ್ಕಿ ಬಿಕ್ಕಿ ಅತ್ತರು.

Arjuna death Final rites

ಮೈಸೂರಿನಲ್ಲಿ ಅಂತ್ಯ ಸಂಸ್ಕಾರಕ್ಕೆ ಒತ್ತಾಯ

ಕಾರ್ಯಾರಣೆಯ ವೇಳೆ ಕಾಡಾನೆಯ ದಾಳಿಗೆ ಒಳಗಾದ ಅರ್ಜುನ ಅಲ್ಲೇ ಪ್ರಾಣ ಕಳೆದುಕೊಂಡಿದ್ದ. ಆತನ ಪಾರ್ಥಿವ ಶರೀರದ ಅಂತ್ಯಕ್ರಿಯೆಯ ವಿಧಿ ವಿಧಾನಗಳನ್ನು ಮೃತಪಟ್ಟ ಜಾಗದಲ್ಲೇ ನಡೆಸಲಾಗುತ್ತಿದೆ. ಮೈಸೂರು ಅರಮನೆಯ ಪುರೋಹಿತರಾದ ಪ್ರಹ್ಲಾದ್‌ ಅವರು ವಿಧಿ ವಿಧಾನಗಳ ನೇತೃತ್ವ ವಹಿಸಿದ್ದಾರೆ. ಹಾಸನ ಡಿಸಿ ಸತ್ಯಭಾಮ ಹಾಗೂ ಎಸ್ಪಿ ಮೊಹಮ್ಮದ್ ಸುಜೀತಾ ಅವರು ಆಗಮಿಸಿದ್ದಾರೆ. ಈ ನಡುವೆ, ಅಂತ್ಯ ಸಂಸ್ಕಾರವನ್ನು ಬೇರೆ ಜಾಗದಲ್ಲಿ ಅದರಲ್ಲೂ ಮೈಸೂರಿನಲ್ಲಿ ನಡೆಸಬೇಕು ಎಂದು ಕೆಲವು ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ. ಅಂತ್ಯ ಸಂಸ್ಕಾರವನ್ನು ಬೇರೆ ಕಡೆ ನಡೆಸಿ ಅಲ್ಲೊಂದು ಸ್ಮಾರಕವನ್ನು ಕಟ್ಟಬೇಕು, ಅದು ಎಲ್ಲರಿಗೂ ಕಾಣುವಂತಿರಬೇಕು ಎನ್ನುವುದು ಹೋರಾಟಗಾರರ ಒತ್ತಾಯ.

ಆದರೆ, ಅರ್ಜುನನಿಗೆ ಈಗಾಗಲೇ ಸಾಕಷ್ಟು ನೋವಾಗಿದೆ. ಇಲ್ಲಿಂದ ಸ್ಥಳಾಂತರ ಮಾಡಿ ತೊಂದರೆ ಕೊಡುವುದು ಬೇಡ, ಇಲ್ಲೇ ಅಂತ್ಯಸಂಸ್ಕಾರ ಮಾಡಲು ಅವಕಾಶ ಕೊಡಿ ಎಂದು ಮೈಸೂರು ಅರಮನೆಯ ಪುರೋಹಿತರು ಮನವಿ ಮಾಡಿಕೊಂಡಿದ್ದಾರೆ.

Arjuna death Final rites

ಅರ್ಜುನನ ನೋಡಲು ಜನ ಸಾಗರ

ಮೃತ ಅರ್ಜುನ ನೋಡಲು ಮತ್ತು ಅವನ ಅಂತ್ಯ ಸಂಸ್ಕಾರದ ವೇಳೆ ಅಂತಿಮ ನಮನ ಸಲ್ಲಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಪೊಲೀಸರು ಜನರನ್ನು ನಿಯಂತ್ರಿಸಲು ಮುಂದಾಗುತ್ತಿದ್ದಂತೆ ಜನರ ಪ್ರತಿಭಟನೆ ಹೆಚ್ಚಿತು. ಹೀಗಾಗಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ.

ಅರ್ಜುನನ ಮೃತದೇಹದ ಮುಂದೆಯೂ ಕೆಲವರು ಅಧಿಕಾರಿಗಳಿಗೆ ಧಿಕ್ಕಾರ ಕೂಗುತ್ತಿದ್ದಾರೆ. ಅವನ ಸಾವಿಗೆ ಕಾರಣರಾದ ಅಧಿಕಾರಿಗಳನ್ನು ಶಿಕ್ಷಿಸಿ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಜತೆಗೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ಆಗ್ರಹಿಸುತ್ತಿದ್ದಾರೆ.

ಕಾಡಿನಲ್ಲಿ ಅಂತ್ಯ ಸಂಸ್ಕಾರ ಬೇಡ, ಸ್ಮಾರಕ ನಿರ್ಮಿಸಿ: ಶಾಸಕ ಮಂಜು ಒತ್ತಾಯ

ಈ ನಡುವೆ, ಕಾಡಿನ ನಡುವೆ‌ ಅರ್ಜುನನ ಅಂತ್ಯ ಸಂಸ್ಕಾರ ನಡೆಸಬಾರದು, ರಸ್ತೆ ಸಂಪರ್ಕ ಹಾಗು ಮೂಲಭೂತ ಸೌಲಭ್ಯಗಳು ಇರುವ ಜಾಗದಲ್ಲಿ ಅಂತ್ಯಕ್ರಿಯೆ ಮಾಡಬೇಕು. ಅರ್ಜುನನ ಹೆಸರಿನಲ್ಲಿ ಸ್ಮಾರಕ ಮಾಡಬೇಕು ಎಂದು ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಒತ್ತಾಯ ಮಾಡಿದ್ದಾರೆ.

ʻʻಅರ್ಜುನ ರಾಜ್ಯದ ಜನರ ಪ್ರೀತಿಪಾತ್ರ ಆನೆ. ದಸರಾದಲ್ಲಿ ನಾಡದೇವರೆ ಚಾಮುಂಡೇಶ್ಚರಿ ಹೊತ್ತ ಅರ್ಜುನನ ನೆನಪು ಉಳಿಯಬೇಕು. ಅರ್ಜುನನ ನೆನಪು ಉಳಿಯಲು ಸ್ಮಾರಕ ನಿರ್ಮಾಣ ಆಗಬೇಕುʼʼ ಎಂದು ಅವರು ಹೇಳಿದ್ದಾರೆ. ಅರಣ್ಯ ಸಚಿವರು ಕರೆದಿರುವ ಸಭೆಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ ಮಾಡುವುದಾಗಿ ಅವರು ಹೇಳಿದರು.

Arjuna death Final rites

ಉನ್ನತ ಮಟ್ಟದ ತನಿಖೆಗೆ ವಾಟಾಳ್‌ ನಾಗರಾಜ್‌ ಆಗ್ರಹ

ʻʻಸುಮಾರು 22 ವರ್ಷಗಳ ಕಾಲ ಮೈಸೂರು ದಸರಾದಲ್ಲಿ ಭಾಗವಹಿಸಿದ್ದ ಅರ್ಜುನ ಸಾವನ್ನಪ್ಪಿರುವುದು ಅತ್ಯಂತ ಗಂಭೀರವಾದ ಸಂಗತಿ. ಅರ್ಜುನನ ಸಾವಿಗೆ ಕಾರಣ ಯಾರು ಎಂಬುದನ್ನು ತಿಳಿಯಬೇಕು. ಹಾಗಾಗಿ ಅರಣ್ಯ ಇಲಾಖೆಯವರು ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕುʼʼ ಎಂದು ಕ‌ನ್ನಡ ಚಳವಳಿ ಮುಖಂಡ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ʻʻಅರ್ಜುನನ ಸಾವಿನಿಂದ ಕೋಟಿ ಕೋಟಿ ಜನರ ಮನಸ್ಸಿಗೆ ನೋವಾಗಿದೆ‌. ಅರ್ಜುನ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಕಾಡಾನೆಗಳ ದಾಳಿಯಿಂದ ಅರ್ಜುನ ಸಾವನ್ನಪ್ಪಿರುವುದರಿಂದ ನಿಜಕ್ಕೂ ನೋವಾಗಿದೆ. ಅರ್ಜುನನ ಸಾವಿನ ಬಗ್ಗೆ ತನಿಖೆ ಆಗದಿದ್ದರೆ ಕನ್ನಡ ಚಳುವಳಿ ವಾಟಾಳ್ ಪಕ್ಷ ತೀವ್ರ ಹೋರಾಟ ನಡೆಸಲಿದೆʼʼ ಎಂದು ಕನ್ನಡ ಚಳವಳಿ ಮುಖಂಡ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

Exit mobile version