ಹಾಸನ : ಗಾಯಗೊಂಡು ನರಳಾಡುತ್ತಿದ್ದ ಕಾಡಾನೆಯನ್ನು ಸೆರೆಹಿಡಿದು ಚಿಕಿತ್ಸೆ ನೀಡಲು ಮುಂದಾದ ಅರಣ್ಯ ಸಿಬ್ಬಂದಿ ಮೇಲೆ ಮೇಲೆ ದಾಳಿ (Elephant attack) ಮಾಡಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರು ಸಮೀಪ ನಿಂತಿದ್ದ ಕಾಡಾನೆಗೆ ಅನಸ್ತೇಷಿಯಾ ಕೊಡಲು ಹತ್ತಿರ ಹೋದ ಅರಣ್ಯ ಸಿಬ್ಬಂದಿಯನ್ನು ಅಟ್ಟಾಡಿಸಿ ಕೊಂದಿದೆ.
ಭೀಮ ಹೆಸರಿನ ಕಾಡಾನೆಯು ಈವರೆಗೆ ಯಾರ ಮೇಲೂ ದಾಳಿ ಮಾಡದೆ ಸೌಮ್ಯ ಸ್ವಭಾವ ಹೊಂದಿತ್ತು. ಆದರೆ ಗಾಯಗೊಂಡಿದ್ದ ಕಾಡಾನೆ ಭೀಮನಿಗೆ ಅರಿವಳಿಕೆ ಔಷಧ ನೀಡಲು ಹತ್ತಿರ ಹೋದ ಅರಣ್ಯ ಸಿಬ್ಬಂದಿ ವೆಂಕಟೇಶ್ ಅವರನ್ನು ಅಟ್ಟಾಡಿಸಿಕೊಂಡು ಹೋಗಿ, ಸೊಂಡಿಲಿನಿಂದ ಎತ್ತಿ ಎಸೆದಿದೆ. ಅರವಳಿಕೆ ಮದ್ದು ನೀಡಲು ವನ್ಯ ಜೀವಿ ವೈದ್ಯ ವಸೀಂ ಜತೆ ವೆಂಕಟೇಶ್ ತೆರಳಿದ್ದರು. ಈ ಹಿಂದೆ ಹತ್ತಾರು ಆನೆ ಸೆರೆಹಿಡಿಯುವಾಗ ಅರವಳಿಕೆ ಮದ್ದು ನೀಡಿದ್ದರು.
ಕಾಡಾನೆ ದಾಳಿ ವಿಡಿಯೊ ಇಲ್ಲಿದೆ ನೋಡಿ
ಜೀರೋ ಟ್ರಾಫಿಕ್ ಮೂಲಕ ಆಸ್ಪತ್ರೆಗೆ ದಾಖಲು
ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ವೆಂಕಟೇಶ್ ಅವರನ್ನು ಕೂಡಲೇ ಅಲ್ಲಿದ್ದ ಸಿಬ್ಬಂದಿ ಜೀರೋ ಟ್ರಾಫಿಕ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹಾಸನ ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೆಂಕಟೇಶ್ ಮೃತಪಟ್ಟಿದ್ದಾರೆ.
ಇಲಾಖೆಯ ನಿರ್ಲಕ್ಷ್ಯವೇ ನಮ್ಮ ತಂದೆ ಸಾವಿಗೆ ಕಾರಣ
ಕಾಡಾನೆ ಕಾರ್ಯಾಚರಣೆ ವೇಳೆ ಸಿಬ್ಬಂದಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವೆಂಕಟೇಶ್ ಪುತ್ರ ಮೋಹನ್ ಡಿಎಫ್‌ಓಗೆ ತರಾಟೆ ತೆಗೆದುಕೊಂಡಿದ್ದಾರೆ. ವೆಂಕಟೇಶ್ ಅವರ ಮೃತದೇಹ ನೋಡಲು ಆಸ್ಪತ್ರೆ ಶವಾಗಾರಕ್ಕೆ ಬಂದಾಗ ಕಿಡಿಕಾರಿದ್ದಾರೆ. ಇಲಾಖೆಯಲ್ಲಿ ಶಿಸ್ತು ಕ್ರಮ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ. ಯಾವುದೇ ಮುಂಜಾಗ್ರತಾ ಕ್ರಮವಹಿಸಿಲ್ಲ. 67 ವರ್ಷದ ನಮ್ಮ ತಂದೆಯನ್ನು ಕಾರ್ಯಾಚರಣೆಯಲ್ಲಿ ಬಳಸಿದ್ದೀರಿ. ನಮ್ಮ ತಂದೆಯನ್ನು ಬಿಟ್ಟು ಬೇರೆ ಯಾರೊಬ್ಬರಿಗೂ ಇಲ್ಲಿಯವರೆಗೆ ತರಬೇತಿ ನೀಡಿಲ್ಲ. ನಿಮ್ಮ ಇಲಾಖೆಯ ನಿರ್ಲಕ್ಷ್ಯವೇ ನಮ್ಮ ತಂದೆ ಸಾವಿಗೆ ಕಾರಣ. ಇದು ಅರಣ್ಯ ಇಲಾಖೆಗೆ ನಾಚಿಕೆಗೇಡು, ಇನ್ನು ಮುಂದಾದರೂ ಸರಿಯಾಗಿ ಕ್ರಮ ವಹಿಸಿ ಎಂದು ಮೋಹನ್ ಆಕ್ರೋಶ ಹೊರಹಾಕಿದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ