Site icon Vistara News

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Elephant attack in Hassan and Chikmagalur

ಹಾಸನ/ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಕೆಲಸ‌ ಮಾಡುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ (Elephant Attack) ಮಾಡಿದೆ. ಕಾಡಾನೆ ದಾಳಿಯಿಂದ ಲಕ್ಷ್ಮಣ (46) ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ವಾಟೆಹಳ್ಳಿ ಗ್ರಾಮದಲ್ಲಿ (Wild Animal attack) ಘಟನೆ ನಡೆದಿದೆ.

ಐಬಿಸಿ ಎಸ್ಟೇಟ್‌ನಲ್ಲಿ ರೈಟರ್ ಕೆಲಸ ಮಾಡುತ್ತಿದ್ದ ಲಕ್ಷ್ಮಣ, ಕಾಫಿ ತೋಟದಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದರು. ಈ ಸಮಯದಲ್ಲಿ ಏಕಾಏಕಿ ಒಂಟಿ ಸಲಗವೊಂದು ದಾಳಿ ಮಾಡಿದೆ. ಲಕ್ಷ್ಮಣ ಅವರನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದೆ.

ಲಕ್ಷ್ಮಣ ಚಿರಾಟ ಕೇಳಿ ಅಲ್ಲಿದ್ದವರು ಕಾಡಾನೆಯನ್ನು ಓಡಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಲಕ್ಷ್ಮಣ ಅವರನ್ನು ಕೂಡಲೇ ಅರೇಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆಯನ್ನು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಬಾಳೆ ತೋಟಕ್ಕೆ ನುಗ್ಗಿ ಧ್ವಂಸ ಮಾಡಿದ ಆನೆ

ಚಿಕ್ಕಮಗಳೂರಿನಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ತೋಟಕ್ಕೆ ನುಗ್ಗಿದ ಕಾಡಾನೆ ಹಾನಿ ಮಾಡಿದೆ. ತೋಟ ಹಾಗೂ ಮನೆಯ ಮುಂಭಾಗದ ಬಾಳೆ ತೋಟ ಧ್ವಂಸ ಮಾಡಿದೆ. ಬಾಳೆ, ಎಲಕ್ಕಿ, ಕಾಫಿ ಬೆಳೆ ಹಾನಿ ಮಾಡಿದೆ. ದಿನ ನಿತ್ಯವೂ ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿ ಕಾಡಾನೆ ದಾಳಿ ಮಾಡುತ್ತಿದೆ.

ಇದನ್ನೂ ಓದಿ: Wild Animals Attack : ಕರೆಯದೆ ಬಂದ ಅತಿಥಿ; ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ ಕೋತಿ!ಮುಂದೇನಾಯ್ತು?

ಕೊಡಗಿನಲ್ಲಿ ಕಾಡಾನೆ ಪ್ರತ್ಯಕ್ಷ

ಕೊಡಗಿನ ಆನೆಕಾಡು ಬಳಿಯ ಮೆಟ್ನಳನ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕಾಡಾನೆಯೊಂದು ಪ್ರತ್ಯಕ್ಷಗೊಂಡಿತ್ತು. ಹೆದ್ದಾರಿಯಲ್ಲಿ ಸಾಗಿದ ಕಾಡಾನೆಯಿಂದ ಕೆಲಕಾಲ‌ ಆತಂಕ ಸೃಷ್ಟಿಯಾಗಿತ್ತು. ಆಹಾರ ಅರಸಿ ಕಾಡಿನಿಂದ ನಾಡಿಗೆ ಸಲಗವೊಂದು ಲಗ್ಗೆ ಇಟ್ಟಿತ್ತು. ಕಾಡಾನೆ ಓಡಾಟದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಹಾಸನನಲ್ಲೂ ಕಾಡಾನೆಗಳ ಉಪಟಳ

ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದೆ. ಆನೆಗಳ ದಾಳಿಗೆ ಅಪಾರ ಪ್ರಮಾಣದ ಬಾಳೆ, ಕಾಫಿ ಬೆಳೆ ನಾಶವಾಗಿವೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಂಗಡಹಳ್ಳ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಘಟನೆ ನಡೆದಿದೆ.

ಪರಮೇಶ್ ಎಂಬುವವರ ಮನೆಯ ಸಮೀಪವೇ ಬಂದಿದ್ದ ಕಾಡಾನೆಗಳು, ಬಾಳೆ ಮತ್ತು ಕಾಫಿ ತೋಟವನ್ನು ಸಂಪೂರ್ಣ ನಾಶಪಡಿಸಿವೆ. ಬೆಳೆ ಕಳೆದುಕೊಂಡು ಪರಮೇಶ್ ಕಂಗಾಲಾಗಿದ್ದಾರೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಗ್ರಾಮದ ಅನತಿ ದೂರದಲ್ಲೇ ಕಾಡಾನೆಗಳ ಹಿಂಡು ಬೀಡುಬಿಟ್ಟಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಸೂಕ್ರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಬಿಳಿಗಿರಿರಂಗನ ಬೆಟ್ಟಕ್ಕೆ ಕಾಡಾನೆ ಎಂಟ್ರಿ

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಡಾನೆಯೊಂದು ಪ್ರತ್ಯಕ್ಷಗೊಂಡಿತ್ತು. ಪದೆ ಪದೇ ಬಿಳಿಗಿರಿರಂಗನ ಬೆಟ್ಟಕ್ಕೆ ಕಾಡಾನೆ ಬರುತ್ತಿದ್ದು, ಜನರು ಆತಂಕದಲ್ಲೇ ದಿನದೂಡುವಂತಾಗಿದೆ. ಬಿಳಿಗಿರಿರಂಗನ ಬೆಟ್ಟದ ಹಾಡಿಯಲ್ಲಿ ಕಾಡಾನೆ ಸಂಚಾರ ಮಾಡುತ್ತಿದ್ದು, ಸ್ಥಳೀಯರು ಸೈರನ್ ಹಾಕಿ ಓಡಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆಯೂ ಕೂಡ ಪೋಡಿಯಲ್ಲಿ ಆನೆಯೊಂದು ಕಾಣಿಸಿಕೊಂಡಿತ್ತು. ಇದೀಗ ಎಲ್ಲೆಂದರಲ್ಲಿ ಕಾಡಾನೆ ಸಂಚಾರದಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version