Site icon Vistara News

Elephant attack: ತವರು ಮನೆಗೆ ಬಂದ ಮಹಿಳೆ ಕಾಡಾನೆ ತುಳಿತಕ್ಕೆ ಬಲಿ

elephant attack

ಹಾಸನ: ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ (Elephant attack) ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ (woman death) ಹಾಸನದ ಹಿಮ್ಸ್‌ನಲ್ಲಿ ಸಾವಿಗೀಡಾಗಿದ್ದಾರೆ.

ಹಾಸನ‌ ಜಿಲ್ಲೆಯ ಸಕಲೇಶಪುರ ತಾಲೂಕಿನ ವಡೂರು ಗ್ರಾಮದ ಬಳಿ ಘಟನೆ ನಡೆದಿದೆ. ಪೂರ್ಣಿಮಾ (40) ಮೃತಪಟ್ಟ ಮಹಿಳೆ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮೃತ ಮಹಿಳೆ ಬೇಲೂರು ತಾಲೂಕಿ‌ನ ನಾರ್ವೆ ಗ್ರಾಮದವರಾಗಿದ್ದು, ಇಲ್ಲಿ ಅವರ ತಾಯಿ ಮನೆಯಿತ್ತು. ಕಳೆದ ಎರಡು ದಿನದ ಹಿಂದೆಯಷ್ಟೇ ತಾಯಿಯನ್ನು ನೋಡಿಕೊಂಡು ಹೋಗಲು ಬಂದಿದ್ದ ಪೂರ್ಣಿಮಾ, ಕಾಡಾನೆ ತುಳಿತದಿಂದ ಮೃತಪಟ್ಟಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ತಾಯಿಮನೆಯಿಂದ ಹೊರಟಿದ್ದ ಪೂರ್ಣಿಮಾ ಅವರ ಮೇಲೆ ದಾಳಿ ಮಾಡಿದ ಕಾಡಾನೆ, ಮುಖ ಹಾಗೂ ದೇಹದ ಭಾಗದಲ್ಲಿ ತುಳಿದ ಗಾಯಗೊಳಿಸಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ಸ್ಥಳಿಯರು ಆಸ್ಪತ್ರೆಗೆ ಸೇರಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್‌ಗೆ ಶಿಫ್ಟ್ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿಲ್ಲ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಕಲೇಶಪುರದ ಗ್ರಾಮೀಣ ಭಾಗದಲ್ಲಿ ಇತ್ತೀಚೆಗೆ ಕಾಡಾನೆ ಹಾವಳಿ ಹೆಚ್ಚಾಗಿದೆ. ಕಾಫಿ ಹಾಗೂ ಬಾಳೆ ತೋಟಗಳನ್ನು ಆನೆ ಹಿಂಡುಗಳು ಧ್ವಂಸ ಮಾಡುತ್ತಿವೆ. ಮಾತ್ರವಲ್ಲ ಒಂಟಿಯಾಗಿ ತಿರುಗಾಡಲೂ ಭಯವಾಗುತ್ತಿದೆ. ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Elephant Attack: ಒಂಟಿ ಸಲಗ ದಾಳಿಗೆ ಬೈಕ್‌ ಪುಡಿ ಪುಡಿ, ಕೂದಲೆಳೆ ಅಂತದಲ್ಲಿ ಸವಾರ ಪಾರು

Exit mobile version