ಹಾಸನ: ಹಾಸನ ರಾಜಕೀಯದಲ್ಲಿ (Hassan Politics) ಉಂಟಾಗುತ್ತಿರುವ ಸಂಚಲನದ ಭಾಗವಾಗಿ ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಇದೀಗ ಪಕ್ಷದ ವರಿಷ್ಠ ಎಚ್.ಡಿ. ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಲು ಸಜ್ಜಾಗಿದ್ದಾರೆ.
ಜೆಡಿಎಸ್‌ನಿಂದ ಜಯಿಸಿದ್ದರೂ ಕಳೆದೆರಡು ವರ್ಷದಿಂದ ಜೆಡಿಎಸ್‌ನಿಂದ ಶಿವಲಿಂಗೇಗೌಡ ಅಂತರ ಕಾಯ್ದುಕೊಂಡಿದ್ದಾರೆ. ಈ ಅಂತರ ಮತ್ತಷ್ಟು ಹೆಚ್ಚಾಗಿ ವಿಕೋಪಕ್ಕೆ ತಿರುಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸಖ್ಯ ಬೆಳೆಸಿದ್ದಾರೆ, ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎಂಬ ಮಾತಿನ ನಡುವೆಯೇ ಇತ್ತೀಚೆಗೆ ಅರಸೀಕೆರೆಗೆ ಬಾಣಾವರ ಅಶೊಕ್ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದರು.
ಅಲ್ಲಿಗೆ ಶಿವಲಿಂಗೇಗೌಡ ಜೆಡಿಎಸ್ ಬಿಡುವುದು ಅಧಿಕೃತವಾಗಿತ್ತು. ಇದೀಗ ಕಾಂಗ್ರೆಸ್ ಸೇರ್ಪಡೆಯನ್ನು ಭರ್ಜರಿಯಾಗಿ ಮಾಡಲು ಶಿವಲಿಂಗೇಗೌಡ ಮುಂದಾಗಿದ್ದು, ಮಾರ್ಚ್ 5 ರಂದು ಬೃಹತ್ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಅಂದು ಅರಸೀಕೆರೆಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನೆ ಮಾಡಲು ಸಿದ್ದರಾಮಯ್ಯ ಅರಸೀಕೆರೆಗೆ ಆಗಮಿಸಲಿದ್ದಾರೆ.
ತಮ್ಮ ಅಪಾರ ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶನ ನಡೆಸಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಸಂದೇಶ ರವಾನಿಸುವ ಆಲೋಚನೆಯಲ್ಲಿದ್ದಾರೆ.