ಹಾಸನ: ವರ್ಷಕ್ಕೆ ಒಂದು ಬಾರಿ ಮಾತ್ರ 15 ದಿನಗಳ ಕಾಲ ದರ್ಶನ ನೀಡುವ ಹಾಸನದ ಹಾಸನಾಂಬೆಯನ್ನು (Hasanamaba temple) ನೋಡಲು ಜನರ ನೂಕುನುಗ್ಗಲು ವಿಪರೀತವಾಗಿದೆ. ಸ್ವತಃ ಜಿಲ್ಲಾಧಿಕಾರಿ, ಎಸ್‌ಪಿ, ಡಿಸಿಪಿಗಳು ಬಂದು ನಿಂತರೂ ಜನರ ಒತ್ತಡವನ್ನು ನಿಯಂತ್ರಿಸಲು, ಅವ್ಯವಸ್ಥೆಯನ್ನು ಸರಿಸಡಿಸಲು (Heavy rush at temple) ಸಾಧ್ಯವಾಗದೆ ದಿಕ್ಕು ತೋಚದೆ ಕುಳಿತಿದ್ದಾರೆ. ದೇವಿಯ ದರ್ಶನಕ್ಕೆ ಒಂದು ಸಾವಿರ ರೂ. ಪಾಸ್ ಹಿಡಿದು ನಿಂತ ಸಾವಿರಾರು ಭಕ್ತರು ಅದೆಷ್ಟೋ ಗಂಟೆಗಳ ಕಾಲ ಕ್ಯೂನಲ್ಲಿ ನಿಂತರೂ ಮುಂದೆ ಸಾಗಲು ಸಾಧ್ಯವಾಗುತ್ತಿಲ್ಲ. ಅತಿಗಣ್ಯ ವ್ಯಕ್ತಿಗಳ ದಾಂಗುಡಿಯೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಅಯ್ಯೋ ಅಯ್ಯೋ ಅನ್ಯಾಯ ಎಂದು ಧಿಕ್ಕಾರ
ಹಾಸನಾಂಬೆಯ ದರ್ಶನಕ್ಕಾಗಿ ಕ್ಯೂ ಯಾವ ಮಟ್ಟಕ್ಕೆ ಇದೆ ಎಂದರೆ ಬೆಳಗ್ಗೆ ಬಂದು ನಿಂತ ಭಕ್ತರಿಗೆ ಮಧ್ಯಾಹ್ನವಾದರೂ ದರ್ಶನ ಭಾಗ್ಯ ಸಿಗುತ್ತಿಲ್ಲ. ಇದರಿಂದ ಆಕ್ರೋಶಿತರಾದ ಜನರು ಕಾದು ಕಾದು ಸುಸ್ತಾಗಿ ಜಿಲ್ಲಾಡಳಿತಕ್ಕೆ ಧಿಕ್ಕಾರ ಕೂಗಿದ್ದಾರೆ. ಶೀಘ್ರ ದರ್ಶನ ಎಂದು 1000 ರೂ. ಟಿಕೆಟ್ ತೆಗೆದುಕೊಂಡು ಬೆಳಗ್ಗೆಯಿಂದ ಕಾದಿರುವ ಭಕ್ತರು ʻʻಅಯ್ಯಯ್ಯೊ ಅನ್ಯಾಯʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಸಿಟ್ಟಿಗೆದ್ದರು.
ಜನರ ನೂಕಾಟ, ತಳ್ಳಾಟ ಯಾವ ಮಟ್ಟಕ್ಕಿದೆ ಎಂದರೆ, ಎಲ್ಲಾ ಗೇಟ್ ಗಳ ಮುಂಭಾಗ ನೂಕುನುಗ್ಗಲು ಉಂಟಾಗಿದೆ. ಗೇಟ್ ನಿಂದ ಒಳಕ್ಕೆ ಬಿಡುವಂತೆ ಭಕ್ತರು ಒತ್ತಾಯಿಸುವುದಲ್ಲದೆ, ಬ್ಯಾರಿಕೇಡ್‌ಗಳನ್ನು ತಳ್ಳಾಡುತ್ತಿದ್ದಾರೆ.
ಸರತಿ ಸಾಲಿನಲ್ಲಿ ನಿತ್ರಾಣಗೊಂಡು ಕುಸಿದು ಬಿದ್ದ ವೃದ್ಧೆ
ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕೆ ಕಾಯುತ್ತಿದ್ದ ವೃದ್ಧೆಯೊಬ್ಬರು ಸುಸ್ತಾಗಿ ಕುಸಿದು ಬಿದ್ದ ಘಟನೆ ನಡೆದಿದೆ. ಅವರು ಸಾವಿರ ರೂಪಾಯಿ ಕೊಟ್ಟು ಶೀಘ್ರ ದರ್ಶನದ ಟಿಕೆಟ್ ಕ್ಯೂನಲ್ಲಿ ಬೆಳಿಗ್ಗೆಯಿಂದ ಕಾದಿದ್ದರು. ವೃದ್ಧೆ ಬಿದ್ದ ಕೂಡಲೇ ಸರತಿ ಸಾಲಿನಿಂದ ಹೊರಗೆ ಕರೆತಂದರು. ಆರೋಗ್ಯ ಇಲಾಖೆ ಸಿಬ್ಬಂದಿ ವೃದ್ಧೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು.
ವಿವಿಐಪಿ ಗೇಟ್‌ನಲ್ಲೇ ಡಿಸಿಪಿ ಶ್ರೀನಿವಾಸ ಗೌಡ
ಹಾಸನದ ಸಿಸಿಬಿ ಡಿಸಿಪಿ ಶ್ರೀನಿವಾಸ ಗೌಡ ಅವರು ರಜೆ ಹಾಕಿ ಹಾಸನಾಂಬ ದೇವಿಯ ದರ್ಶನಕ್ಕೆ ಬಂದಿದ್ದರು. ಆದರೆ, ಇಲ್ಲಿನ ಅಯೋಮಯ ಪರಿಸ್ಥಿತಿಯನ್ನು ಗಮನಿಸಿದ ಅವರು ವಿವಿಐಪಿ ಗೇಟ್ ಮುಂದೆ ಮೊಕ್ಕಾಂ ಹೂಡಿ ಅಲ್ಲೇ ಭಕ್ತರನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ.
ಶ್ರೀನಿವಾಸ ಗೌಡ ಅವರು ಹಿಂದೆ ಹಾಸನದಲ್ಲಿ ಎಸ್ಪಿಯಾಗಿದ್ದರು. ಹಾಗಾಗಿ ಅವರಿಗೆ ಇಲ್ಲಿನ ಸ್ಥಿತಿಗತಿಗಳ ಅರಿವಿದೆ. ಹೀಗಾಗಿ ಅವರು ದೇವಾಲಯದ ಒಳಗೆ ಮತ್ತು ಹೊರಗೆ ಭಕ್ತರನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ. ಗರ್ಭಗುಡಿಯ ಮುಂದೆ ನಿಂತು ಬರೋ ಭಕ್ತರನ್ನು ತಾಯಿಯ ದರ್ಶನದ ಬಳಿಕ ವೇಗವಾಗಿ ಕಳುಹಿಸುತ್ತಿದ್ದಾರೆ.
ಜಿಲ್ಲಾಧಿಕಾರಿ ಮತ್ತು ಎಸಿ/ಎಸ್‌ಪಿ ನಡುವೆಯೇ ಮಾತಿನ ಚಕಮಕಿ
ಹಾಸನದ ಹಾಸನಾಂಬ ದೇವಸ್ಥಾನದಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ ಜನರ ನೂಕುನುಗ್ಗಲಿನಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಮತ್ತು ಎಸ್ಪಿ ಮೊಹಮ್ಮದ್ ಸುಜೀತಾ ನಡುವೆ ಮಾತಿನ ಚಕಮಕಿ ಕೂಡಾ ನಡೆದಿದೆ.
ಒಂದು ಹಂತದಲ್ಲಿ ಶಾಸಕ ಸಿಮೆಂಟ್ ಮಂಜು ಅವರ ಜತೆ ಬಂದ ನೂರಾರು ಮಂದಿ ಒಳಗೆ ನುಗ್ಗಿದರು. ಸಕಲೇಶಪುರ ಎಸಿ ಅವರು ನೋಡಿಕೊಳ್ಳುತ್ತಿದ್ದ ಗೇಟ್‌ನಲ್ಲಿ ಜನರು ನುಗ್ಗಿದ್ದರಿಂದ ಜಿಲ್ಲಾಧಿಕಾರಿ ಸತ್ಯಭಾಮ ಅವರು ಎಸಿ ಶ್ರುತಿ ಅವರ ಮೇಲೆ ಸಿಕ್ಕಾಪಟ್ಟೆ ಗರಂ ಆದರು. ಎಲ್ಲಿವರೆಗೆ ಎಂದರೆ ಸತ್ಯಭಾಮ ಅವರು ಶ್ರುತಿ ಅವರ ಮೇಲೆ ಕೈಎತ್ತಲು ಮುಂದಾದರು. ವಸ್ತುಶಃ ಕೈಗೆ ಹೊಡೆದೇ ಬಿಟ್ಟಿದ್ದರು.
ಇನ್ನೊಂದು ಕಡೆ ಎಸಿ ಮತ್ತು ಜಿಲ್ಲಾಧಿಕಾರಿ ನಡುವೆಯೂ ಮಾತಿನ ಚಕಮಕಿ ನಡೆಯಿತು. ಕಂಟ್ರೊಲ್ ಮಾಡೋದಕ್ಕೆ ಆಗದಿದ್ದರೆ ಬಿಟ್ಟು ಬಿಡಿ ಎಂದು ಎಸ್ಪಿ ಆಗ್ತಿಲ್ಲ ಬಿಡಿ ಎಂದ ಎಸ್ಪಿ ಮೊಹಮ್ಮದ್ ಸುಜೀತಾ ಹೇಳಿದ್ದು ಡಿಸಿ ಸತ್ಯಭಾಮ ಅವರನ್ನು ಕೆರಳಿಸಿತು. ಸ್ವತಃ ಡಿಸಿಯವರೇ ನಾವೇ ಹೋಗೋಣ ಎಂದು ಎಸಿಯವರನ್ನು ಕರೆದುಕೊಂಡು ಹೊರಡಲು ಅನುವಾದರು. ಆಗ ಎಸ್ಪಿಯೇ ಅಲ್ಲಿಂದ ಹೊರಟರು.
ಪಟಾಕಿ ಹೊಡೆಯಬೇಡಿ, ಹಣತೆ ಹಚ್ಚಿ ಎಂದ ವಿನಯ್ ಗುರೂಜಿ
ಹಾಸನಾಂಬೆ ದರ್ಶನಕ್ಕೆ ಬಂದ ಕೊಪ್ಪದ ಗೌರಿಗದ್ದೆ ಮಠದ ವಿನಯ್ ಗುರೂಜಿ ಅವರು, ದೇವಿ ದರ್ಶನ ನಂತರ ಮಾತನಾಡಿದರು. ʻʻದೇವಿಗೆ ಪೂಜೆ ಸಲ್ಲಿಸಿ ಉತ್ತಮ ಮಳೆ, ಬೆಳೆಗೆ ಪ್ರಾರ್ಥಿಸಿದ್ದೇನೆ. ಹಾಸನಾಂಬೆ ಜನತೆಗೆ ಒಳ್ಳೆಯದು ಮಾಡಲಿʼʼ ಎಂದರು.
ದೀಪಾವಳಿ ಹಬ್ಬಕ್ಕೆ ಜನರು ಪಟಾಕಿ ಸಿಡಿಸಬೇಡಿ. ಹಣತೆ ಹಚ್ಚಿ ಹಬ್ಬ ಆಚರಿಸೋಣ. ವಾಯುಮಾಲಿನ್ಯವೂ ಆಗೋದಿಲ್ಲ. ಬರ ಇರೋದ್ರಿಂದ ಹಣದ ದುಂದುವೆಚ್ಚ ತಡೆದಂತಾಗುತ್ತದೆ ಎಂದರು.
ʻʻದೇವಿಗೆ ಕಣ್ಣು ಉರಿಯುತ್ತೆ ಅಂತ ಜಾತ್ರೆ ವೇಳೆ ಒಗ್ಗರಣೆ ಹಾಕೋದಿಲ್ಲ. ಹಾಗಿರುವಾಗ ಪಟಾಕಿ ಸಿಡಿಸುವುದು ಕೂಡಾ ಬೇಡʼʼ ಎಂದರು ವಿನಯ್ ಗುರೂಜಿ. ʻʻಮುಂದಿನ ವರ್ಷ ಜಾತ್ರೆ ವೇಳೆ ಊರ ಜನ ಗುಂಪು ಮಾಡಿಕೊಂಡು ಅನ್ನದಾನ ಮಾಡಿ. ನಾನು ಕೈ ಜೋಡಿಸುತ್ತೇನೆʼʼ ಎಂದು ವಿನಯ್ ಗುರೂಜಿ ಹೇಳಿದರು.
ಗರ್ಭಗುಡಿ ಪ್ರವೇಶಿಸಿದ ಸಚಿವ ಆರ್.ಬಿ. ತಿಮ್ಮಾಪುರ: ವಿವಾದ
ದೇವರ ಗರ್ಭಗುಡಿಗೆ ಅರ್ಚಕರನ್ನು ಹೊರತುಪಡಿಸಿ ಬೇರೆ ಯಾರೂ ಪ್ರವೇಶಿಸುವಂತಿಲ್ಲ ಎಂಬ ಆದೇಶವನ್ನು ಜಿಲ್ಲಾಡಳಿತ ನೀಡಿದೆ. ಆದರೆ, ಈ ಸೂಚನೆಯನ್ನು ಉಲ್ಲಂಘಿಸಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರನ್ನು ಗರ್ಭ ಗುಡಿಗೆ ಕರೆದುಕೊಂಡು ಹೋದ ವಿಚಾರ ವಿವಾದಕ್ಕೆ ಒಳಗಾಗಿದೆ.
ಸಚಿವರ ಕುಟುಂಬ ಗರ್ಭಗುಡಿಯಲ್ಲಿ ನಿಂತು ತಾಯಿಯ ದರ್ಶನ ಹಾಗೂ ಪೂಜೆ ಮಾಡಿದ ಚಿತ್ರಗಳು ವೈರಲ್ ಆಗಿವೆ. ಸಾಮಾನ್ಯ ಜನರಿಗೊಂದು ಕಾನೂನು, ಸಚಿವರಿಗೊಂದು ಕಾನೂನು ಇದೆಯಾ ಎಂದು ಜನರು ಕೇಳುತ್ತಿದ್ದಾರೆ.
ಇದನ್ನು ಓದಿ: Hasanamba Temple : ಹಾಸನಾಂಬೆ ದರ್ಶನದ ವೇಳೆ ಕರೆಂಟ್ ಶಾಕ್! ದಿಕ್ಕಾಪಾಲಾಗಿ ಓಡಿದ ಭಕ್ತರು!
ಇನ್ನು ಎಷ್ಟು ದಿನ ಹಾಸನಾಂಬೆ ದರ್ಶನ?
ಈ ಬಾರಿ ನವೆಂಬರ್ 2ರಿಂದ ನವೆಂಬರ್ 15 ರವರೆಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈ ಹನ್ನೆರಡು 12 ದಿನಗಳಲ್ಲಿ ಮುಂಜಾನೆ 6 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 10:30 ರವರೆಗೆ ಭಕ್ತರಿಗೆ ದರ್ಶನಕ್ಕೆ ತೆರೆದಿರುತ್ತದೆ. ಪ್ರತಿವರ್ಷದಂತೆ ಈ ವರ್ಷದ ದೀಪಾವಳಿ ಸಮಯದಲ್ಲೂ ಹಾಸನಾಂಬೆ ದೇವಸ್ಥಾನದ ದರ್ಶನಕ್ಕೆ ಅವಕಾಶವಿದೆ.