Site icon Vistara News

Hijab Row : ಹಾಸನ ಖಾಸಗಿ ಕಾಲೇಜಿನಲ್ಲಿ ಹಿಜಾಬ್‌ VS ಕೇಸರಿ ಶಾಲು

Hijab row Hasana College

ಹಾಸನ: ವರ್ಷದ ಹಿಂದೆ ರಾಜ್ಯದ ಕಾಲೇಜುಗಳಲ್ಲಿ ಭಾರಿ ಗದ್ದಲ, ಪ್ರತಿಭಟನೆಗೆ ಕಾರಣವಾಗಿದ್ದ ಹಿಜಾಬ್‌ ವರ್ಸಸ್‌ ಕೇಸರಿ ಶಾಲು (Hijab Vs Saffron Shawl) ಸಮರ (Hijab Row) ಮತ್ತೆ ತಲೆ ಎತ್ತಿದೆ. ರಾಜ್ಯದ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ, ಹೀಗಾಗಿ ಹಿಜಾಬ್‌ಗೆ ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್‌ ತನ್ನ ತೀರ್ಪಿನಲ್ಲಿ ವಿವರಿಸಿದ ಬಳಿಕವೂ ಹಾಸನದ ಖಾಸಗಿ ಕಾಲೇಜಿನಲ್ಲಿ (Private College in Hassan) ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು (Muslim Girl Students) ಹಿಜಾಬ್‌ ಧರಿಸಿ ಬರಲು ಆರಂಭಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಯಾಗಿ ಈಗ ಕೆಲವು ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರಲು ಶುರು ಮಾಡಿದ್ದಾರೆ. ಇದರಿಂದ ಕಾಲೇಜಿನಲ್ಲಿ ಧರ್ಮ ದಂಗಲ್‌ (Dharma Dangal) ಶುರುವಾದಂತಾಗಿದೆ.

ಹಾಸನದ ಕೈಗಾರಿಕಾ ಪ್ರದೇಶದಲ್ಲಿರುವ ವಿದ್ಯಾ ಸೌಧ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಈ ಕಾಲೇಜಿನಲ್ಲಿ ಹಿಂದಿನಿಂದಲೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಸ್ತುಬದ್ಧವಾಗಿ ಸಮವಸ್ತ್ರ ಧರಿಸಿಯೇ ಬರುತ್ತಿದ್ದರು. ಹಿಜಾಬ್‌ ಗಲಾಟೆಯ ಸಂದರ್ಭದಲ್ಲೂ ಇಲ್ಲಿ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ, ಈ ಬಾರಿ ಯಾಕೋ ಇಲ್ಲಿ ಸಮಸ್ಯೆ ಉಂಟಾಗಿದೆ.

ಕೆಲವು ವಾರಗಳಿಂದ ಇಲ್ಲಿನ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್‌ ಧರಿಸಿ ಬರಲು ಆರಂಭಿಸಿದ್ದರು. ಈ ವಿದ್ಯಾರ್ಥಿನಿಯರನ್ನು ಪ್ರಿನ್ಸಿಪಾಲರು ಕರೆದು ಕಿವಿಮಾತು ಹೇಳಿದ್ದರು. ಉಪನ್ಯಾಸಕರು ಈ ರೀತಿ ಹಿಜಾಬ್‌ ಧರಿಸುವುದು ವಿವಾದಕ್ಕೆ ಕಾರಣವಾದೀತು ಎಂದು ಎಚ್ಚರಿಸಿದ್ದರು. ಉಪನ್ಯಾಸಕರು ಹಾಗೂ ಕಾಲೇಜಿನ ಪ್ರಾಂಶುಪಾಲರ ಬುದ್ಧಿ ಮಾತಿಗೂ ಕ್ಯಾರೇ ಎನ್ನದೆ ಹಿಜಾಬ್ ಧರಿಸುವುದನ್ನು ಮುಸ್ಲಿಂ ವಿದ್ಯಾರ್ಥಿನಿಯರು ಮುಂದುವರಿಸಿದ್ದರು.

ಇದನ್ನೂ ಓದಿ : Hijab Row : ಸಿದ್ದರಾಮಯ್ಯ 2ನೇ ಟಿಪ್ಪು ಸುಲ್ತಾನ್‌ ಎಂದ ಬಿಜೆಪಿ ನಾಯಕ ರವಿ ಕುಮಾರ್‌

ಇದು ಹಿಂದು ವಿದ್ಯಾರ್ಥಿಗಳನ್ನು ಕೆರಳಿಸಿತ್ತು. ಇದರ ವಿರುದ್ಧ ಸಿಡಿದೆದ್ದ ಅವರು ಕಾಲೇಜಿನ ಆಡಳಿತ ಮಂಡಳಿಗೂ ತಿಳಿಸಿದ್ದರು. ಆದರೆ, ಅದ್ಯಾವುದೂ ಫಲ ನೀಡದೆ ಇದ್ದಾಗ ಅವರೇ ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬರಲು ಶುರು ಮಾಡಿದರು.

ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಬರುತ್ತಿರುವ ದೃಶ್ಯಗಳನ್ನು ವೈರಲ್‌ ಮಾಡಿದ ವಿದ್ಯಾರ್ಥಿಗಳು ತಾವು ಕೇಸರಿ ಶಾಲು ಧರಿಸಿಕೊಂಡು ಬಂದು ವಿಡಿಯೋ, ರೀಲ್ಸ್‌ ಮಾಡಲು ಶುರು ಮಾಡಿದರು. ಹಿಂದು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿರುವುದನ್ನು ಪ್ರಶ್ನಿಸುವ ಉಪನ್ಯಾಸಕಿಯೊಬ್ಬರು, ಅವರು ಹಿಜಾಬ್‌ ಹಾಕಿಕೊಂಡು ಬಂದಿದ್ದಕ್ಕೆ ತಾನೇ ನೀವು ಕೇಸರಿ ಶಾಲು ಹಾಕಿಕೊಂಡು ಬಂದಿರುವುದು ಎಂದು ಕೇಳಿದ್ದಾರೆ. ಆಗ ವಿದ್ಯಾರ್ಥಿಗಳು ಹೌದು, ಹೌದು, ಏನೀವಾಗ ಎಂದು ಕೇಳಿದ್ದಾರೆ.

ವಿದ್ಯಾರ್ಥಿಗಳ ನಡುವೆ ಶುರುವಾದ ಈ ಧರ್ಮ ದಂಗಲ್‌ ಕಾಲೇಜು ಆಡಳಿತ ಮಂಡಳಿಗೆ ತಲೆ ನೋವಾಗಿದೆ.

Exit mobile version