ಹಾಸನ: ಒಂದು ರಸ್ತೆಯಾಗಲಿ, ವಿಮಾನ ನಿಲ್ದಾಣವಾಗಲಿ, ನೈರ್ಮಲ್ಯ ಕಾರ್ಯಕ್ರಮ ಎಲ್ಲವಕ್ಕೂ ರಾಜೀವ್ ಗಾಂಧಿ, ಇಂಧಿರಾಗಾಂಧಿ ಬಿಟ್ಟು ಬೇರೆ ಯಾರೂ ಕಾಂಗ್ರೆಸ್‌ಗೆ ನೆನಪಾಗುವುದಿಲ್ಲ. ನಾಮ ಕೆ ವಸ್ತೆಗೆ ಸ್ವಲ್ಪ ಗಾಂಧೀಜಿ ನೆನಪಾಗುತ್ತಾರೆ. ಇಂಥವರಿಗೆ ಭಗತ್ ಸಿಂಗ್ ಬಗ್ಗೆ ಲವ್ & ಅಫೆಕ್ಷನ್ ಹೇಗೆ ಶುರುವಾಯಿತು ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಹಾಸನದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಇದ್ದಕ್ಕಿದ್ದ ಹಾಗೇ ಭಗತ್ ಸಿಂಗ್ ಬಗ್ಗೆ ಸಿದ್ದರಾಮಯ್ಯ ಬಾಯಲ್ಲಿ ಮಾತು ಬರುತ್ತಿದೆ. ಇದು ಸೋಜಿಗ ಅನ್ನಿಸುತ್ತಿದೆ. ಅವರ ಐದು ವರ್ಷದ ಆಡಳಿತಾವಧಿಯಲ್ಲಿ ಅವರು ಮಾತಾಡಿದ್ದೆಲ್ಲಾ ಟಿಪ್ಪು, ಹೈದರಾಲಿ ಬಗ್ಗೆ. ಇದೀಗ ಭಗತ್ ಸಿಂಗ್ ಬಗ್ಗೆ ಯಾಕೆ ಸುಳ್ಳು ಹೇಳುತ್ತೀರಿ? ನಾರಾಯಣ ಗುರುಗಳ ವಿಷಯವನ್ನ ಇತಿಹಾಸದ ಬದಲಾಗಿ ಕನ್ನಡ ವಿಷಯಕ್ಕೆ ಸೇರಿಸಲಾಗಿದೆ. ವಿನಾಕಾರಣವಾಗಿ ಹುಯಿಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಭಗತ್ ಸಿಂಗ್, ರಾಜಗುರು ಸುಖದೇವ್‌ಗೆ ಗಲ್ಲು ಹಾಕಿದ ಸಂದರ್ಭದಲ್ಲಿ ಗಾಂಧೀಜಿ ದುಂಡು ಮೇಜಿನ ಸಭೆಗೆ ಇಂಗ್ಲೆಂಡ್‌ಗೆ ಹೊರಟಿದ್ದರು. ಇಡೀ ದೇಶದ ಜನ ಈ ಮೂವರ ಗಲ್ಲು ಶಿಕ್ಷೆ ಪರವಾಗಿ ಚರ್ಚಿಸುವಂತೆ ಮನವಿ ಮಾಡಿದ್ದರು. ಆಗ ಏಕೆ ಕಾಂಗ್ರೆಸ್ ಈ ವಿಷಯ ಚರ್ಚಿಸಲಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | ಮುಂದಿನ ದಸರಾದೊಳಗೆ ಬೆಂಗಳೂರು- ಮೈಸೂರು ದಶಪಥ ಪೂರ್ಣ: ಪ್ರತಾಪ್‌ಸಿಂಹ
ಟಿಪ್ಪು ವಿರುದ್ಧ ಸಂಸದ ಪ್ರತಾಪ್ ಸಿಂಹ ವ್ಯಂಗ್ಯ
ಭಾರತದ ಇತಿಹಾಸವನ್ನ ವಸ್ತುನಿಷ್ಠವಾಗಿ ನೋಡಬೇಕೇ ಅಥವಾ ಗಿರೀಶ್ ಕಾರ್ನಾಡ್ ಬರೆದ ಕಾಲ್ಪನಿಕ ಪುಸ್ತಕ, ಟಿಪ್ಪುವಿನ ಕನಸುಗಳು ಎಂಬಂತೆ ನೋಡಬೇಕೇ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯ ಮಾಡಿದರು. ಬಹಳಷ್ಟು ಇಸ್ಲಾಮಿಕ್ ಆಡಳಿತಗಾರರಲ್ಲಿ ಶೌರ್ಯ ಕಂಡಿಲ್ಲ, ಕೇವಲ ಕ್ರೌರ್ಯ ಕಂಡಿದ್ದೇವೆ. ಟಿಪ್ಪು ಸುಲ್ತಾನ್ ಕಟ್ಟಿಸಿರೋ ಒಂದು ಕೆರೆ ಕಟ್ಟೇನಾದ್ರೂ ತೋರಿಸಿ ನೋಡೋಣ. ನಮ್ಮ ಮೈಸೂರು ಮಹಾರಾಜರು ಇಷ್ಟು ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅವರು ನಿಜವಾದ ಹುಲಿ. ಯಾರೋ ಭಾಗಮಂಡಲ ದೇವಾಲಯದ ಮೇಲೆ ಕತ್ತಿ ಬೀಸಿದವನ್ನ ಹುಲಿ ಅಂದ್ರೆ ಮೂರ್ಖತನ ಎಂದರು.
ಮೋದಿ ಭೇಟಿ
ಮೋದಿಯವರು ಯೋಗ ದಿನಕ್ಕೆ ಮೈಸೂರಿಗೆ ಆಗಮಿಸುತ್ತಿದ್ದಾರೆ. ಮಹಾರಾಜರು ಹಾಕಿಕೊಟ್ಟ ಪರಂಪರೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೋದಿ ಆಗಮಿಸುತ್ತಿದ್ದಾರೆ. ಯಾವ ಜಾಗದಲ್ಲಿ ನಡೆಯಲಿದೆ ಎಂಬದು ಇನ್ನೂ ನಿರ್ಧಾರವಾಗಿಲ್ಲ. ಮೈಸೂರಿಗೂ ಯೋಗಕ್ಕೂ ಅವಿನಾಭಾವ ಸಂಬಂಧವಿದೆ. ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಮತ್ತು ಕುಟುಂಬ ಸಮೇತ ಆಹ್ವಾನ ನೀಡಿದ್ದೆ. ಪಿಎಂ ಆಫೀಸಿನಿಂದ ಧೃಢೀಕೃತವಾದ ನಂತರ ಕಾರ್ಯಕ್ರಮ ನಿರ್ಧಾರವಾಗುತ್ತದೆ. ಕಾರ್ಯಕ್ರಮಕ್ಕೆ ಒಂದೂವರೆ ಲಕ್ಷ ಯೋಗ ಪಟುಗಳನ್ನ ಭಾಗವಹಿಸಲು ಸಜ್ಜುಗೊಳಿಸುತ್ತೇವೆ ಎಂದರು.
ಇದನ್ನೂ ಓದಿ | International Yoga day : ಮೈಸೂರಿಗೆ ಆಗಮಿಸುತ್ತಾರೆ ಪ್ರಧಾನಿ ನರೇಂದ್ರ ಮೋದಿ