ಹಾಸನ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಳಸೂರು ಕಾಡಿನಲ್ಲಿ ನಡೆದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೃತಪಟ್ಟ ಆನೆ ಅರ್ಜುನನ (Elephant Arjuna) ಅಂತ್ಯ ಸಂಸ್ಕಾರವನ್ನು (final rites) ಆತ ಮೃಪಪಟ್ಟ ಕಾಡಿನೊಳಗಿನ ಜಾಗದಲ್ಲಿ ನಡೆಸಬಾರದು, ಎಲ್ಲರಿಗೂ ಕಾಣುವ ರೀತಿಯಲ್ಲಿ ಮೈಸೂರಿನಲ್ಲಿ ಅಥವಾ ಬೇರೆ ಎಲ್ಲಾದರೂ ತೆರೆದ ಜಾಗದಲ್ಲಿ ನಡೆಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ (public protest) ಮತ್ತು ಅಂತ್ಯ ಸಂಸ್ಕಾರ ತಡೆಯಲು ಮುಂದಾದ ಸಾರ್ವಜನಿಕರು ಮತ್ತು ಹೋರಾಟಗಾರರನ್ನು ಪೊಲೀಸರು ಲಾಠಿ ಚಾರ್ಜ್ (Police Lathicharge) ಮೂಲಕ ಹಿಮ್ಮೆಟ್ಟಿಸಿದ್ದಾರೆ.
ಸೋಮವಾರ ನಡೆದ ಕಾರ್ಯಾಚರಣೆಯ ವೇಳೆ ಅರ್ಜುನ ಮೃತಪಟ್ಟಿದ್ದ. ದೇಹ ತುಂಬ ಜರ್ಜರಿತವಾಗಿರುವುದರಿಂದ ಅಲ್ಲೇ ಅಂತ್ಯ ಸಂಸ್ಕಾರ ನಡೆಸಲು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ನಿರ್ಧರಿಸಿತ್ತು. ಆದರೆ, ಇದಕ್ಕೆ ಕೆಲವು ಹೋರಾಟಗಾರರು ಆಕ್ಷೇಪಿಸಿದ್ದರು. ಆದರೆ, ಅವರ ವಿರೋಧವನ್ನು ಲೆಕ್ಕಿಸದೆ ಅದೇ ಜಾಗದಲ್ಲಿ ಅಂತ್ಯ ಸಂಸ್ಕಾರ ವಿಧಿ ವಿಧಾನಗಳನ್ನು ಬೆಳಗ್ಗೆ ನಡೆಸಲಾಯಿತು. ಹೋರಾಟಗಾರರ ಧಿಕ್ಕಾರ ಮತ್ತು ಪ್ರತಿಭಟನೆಯ ನಡುವೆಯೇ ಅಂತಿಮ ವಿಧಿಗಳು ನಡೆದವು. ಜಿಲ್ಲಾಧಿಕಾರಿ ಸತ್ಯಭಾಮ, ಎಸ್ಪಿ ಮೊಹಮದ್ ಸುಜೀತಾ, ಡಿಸಿಎಫ್ ಮೋಹನ್ ಕುಮಾರ್ ಅವರ ಸಮ್ಮುಖದಲ್ಲಿ ಮೈಸೂರು ಅರಮನೆಯ ಪುರೋಹಿತರಾದ ಪ್ರಹ್ಲಾದ್ ಅವರು ಅಂತಿಮ ವಿಧಿ ವಿಧಾನ ನಡೆಸಿದರು. ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಜನರು ಹೂವಿನ ಹಾರಗಳ ಪುಷ್ಪಾರ್ಚನೆ ನಡೆಸಿದರು.
ಜಿಲ್ಲಾಡಳಿತದ ವತಿಯಿಂದ ಅರ್ಜುನನಿಗೆ ಸರ್ಕಾರಿ ಗೌರವ ಸಮರ್ಪಣೆ ಮಾಡಲಾಯಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಪೊಲೀಸ್ ಇಲಾಖೆಯ ಸಿಬ್ಬಂದಿಯಿಂದ ಸರ್ಕಾರಿ ಗೌರವದ ವಿಧಿ ಪೂರೈಸಲಾಯಿತು. ರಾಜ್ಯ ಅರಣ್ಯ ಇಲಾಖೆ ಭಾಗವಾಗಿ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಸಹಾಯಕ ಅರಣ್ಯ ಮುಖ್ಯ ಪ್ರದಾನ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರ ಗೌರವ ಸಲ್ಲಿಸಿದರು.
ಇಷ್ಟೆಲ್ಲದರ ನಡುವೆಯೂ ಜನರ ಪ್ರತಿಭಟನೆ ಮುಂದುವರಿದಿತ್ತು. ಅಂತ್ಯಕ್ರಿಯೆಯನ್ನು ಬೇರೆ ಕಡೆ ನಡೆಸಬೇಕು, ಅಲ್ಲಿ ಸ್ಮಾರಕ ನಿರ್ಮಿಸಬೇಕು ಮತ್ತು ಆನೆಯ ಸಾವಿಗೆ ಕಾರಣರಾದ ಎಲ್ಲರಿಗೂ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಈ ನಡುವೆ, ಅರ್ಜುನನ ಪಾರ್ಥಿವ ಶರೀರವನ್ನು ದಫನ ಮಾಡುವುದಕ್ಕಾಗಿ ಜೆಸಿಬಿ ಮೂಲಕ ಗುಂಡಿ ತೋಡಲು ಆರಂಭವಾಗುತ್ತಿದ್ದಂತೆಯೇ ಜನರ ಆಕ್ರೋಶದ ಕಟ್ಟೆ ಒಡೆಯಿತು.
ಇದನ್ನೂ ಓದಿ: Elephant Arjuna : ಎದ್ದೇಳು ರಾಜ, ನಾನು ಬಂದಿದ್ದೀನಿ ; ಅರ್ಜುನನ ಮುಂದೆ ಕಾವಾಡಿಗರ ಕಣ್ಣೀರು!
ಪೊಲೀಸರು ಕಟ್ಟಿದ ತಡೆಗಳನ್ನು ದಾಟಿ ಮುನ್ನುಗ್ಗಲು ಯತ್ನಿಸಿದರು. ಆಗ ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಲಾಠಿ ಏಟು ಬೀಳುತ್ತಿದ್ದಂತೆಯೇ ಜನರು ದಿಕ್ಕಾಪಾಲಾಗಿ ಓಡಿದರು. ಜನರ ಈ ವರ್ತನೆಯಿಂದ ಪರಿಸರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ.