ಹಾಸನ: ಹೆದ್ದಾರಿ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ (Road Accident) ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ. ಹಾಸನ (Hassan News) ಜಿಲ್ಲೆ ಆಲೂರು ತಾಲ್ಲೂಕಿನ ಈಶ್ವರಹಳ್ಳಿ ಕೂಡಿಗೆ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಘಟನೆ ನಡೆದಿದೆ.
ಹೋಟೆಲ್ ಒಂದರ ಪೂಜೆಗೆಂದು ಹೊರಟಿದ್ದ ಪ್ರದೀಪ್ (30), ಗುರು (25) ಸ್ಥಳದಲ್ಲೇ ಸಾವಿಗೀಡಾದವರು. ಕಾರಿನಲ್ಲಿದ್ದ ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಟಿಂಬರ್ ತುಂಬಿದ್ದ ಲಾರಿ ಟೈರ್ ಪಂಕ್ಚರ್ ಆಗಿ ರಸ್ತೆ ಮಧ್ಯೆ ನಿಂತಿತ್ತು. ಇಂದು ಮುಂಜಾನೆ ವಾತಾವರಣದಲ್ಲಿ ಸಂಪೂರ್ಣವಾಗಿ ಮಂಜು ಆವರಿಸಿದ್ದ ಪರಿಣಾಮ ರಸ್ತೆಯಲ್ಲಿ ಸಾಗುವವರಿಗೆ ಮುಂದಿನ ವಾಹನಗಳು ಕಾಣದಂತಹ ಪರಿಸ್ಥಿತಿ ಇತ್ತು. ಹೀಗಾಗಿ ಕಾರಿನಲ್ಲಿದ್ದವರಿಗೆ ಲಾರಿ ನಿಂತಿದ್ದುದು ಗೊತ್ತಾಗಿಲ್ಲ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆಯಲ್ಲಿ ಉರುಳಿಬಿದ್ದಿದೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೈಕ್‌ಗಳ ಡಿಕ್ಕಿ, ವಿದ್ಯಾರ್ಥಿ ಮೇಲೆ ಹರಿದ ಬಸ್, ಸ್ಥಳದಲ್ಲೇ ಸಾವು
ಆನೇಕಲ್: ಬೈಕ್‌ಗಳ ನಡುವೆ ಡಿಕ್ಕಿಯಾಗಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಸರ್ಜಾಪುರ ಸಮೀಪದ ದೊಡ್ಡ ತಿಮ್ಮಸಂದ್ರದ ಬಳಿ ಘಟನೆ ನಡೆದಿದೆ.
ಶಾಲೆ ಮುಗಿಸಿಕೊಂಡು ವಿದ್ಯಾರ್ಥಿಗಳು ಬೈಕಿನಲ್ಲಿ ಸಾಗುತ್ತಿದ್ದಾಗ ಬೈಕ್‌ಗಳ ನಡುವೆ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯಾರ್ಥಿಗಳು ಕೆಳಗೆ ಬಿದ್ದಿದ್ದು, ಕೆಳಗೆ ಬಿದ್ದ ವಿದ್ಯಾರ್ಥಿ ಮೇಲೆ ಸ್ಕೂಲ್ ಬಸ್ ಹರಿದಿದೆ. ಸ್ಕೂಲ್ ಬಸ್ ಚಕ್ರಕ್ಕೆ ಸಿಲುಕಿ ಸೃಜನ್ ಗೌಡ (16) ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ತಿಂಡ್ಲು ಗ್ರಾಮದ ಸೃಜನ್ ಗೌಡ ದೊಡ್ಡತಿಮ್ಮಸಂದ್ರದ ಆಕ್ಸ್‌ಫರ್ಡ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿದ್ದ. ಬಸ್ ಚಾಲಕನನ್ನು ಚಾಲಕರು ವಶಕ್ಕೆ ಪಡೆದಿದ್ದಾರೆ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಜರಿ ಗೋಡೌನ್ ಬೆಂಕಿಗೆ ಭಸ್ಮ
ಹೊಸಕೋಟೆ: ಹೊಸಕೋಟೆ ತಾಲೂಕಿನ ಚಿಕ್ಕನಹಳ್ಳಿ ಗೇಟ್ ಬಳಿ ಹೆದ್ದಾರಿ ಬದಿಯಲ್ಲಿ ಆಕಸ್ಮಿಕ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ನೋಡ ನೋಡುತ್ತಿದ್ದಂತೆ ಗುಜರಿ ಗೋಡೌನ್ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.
ಪ್ಲಾಸ್ಟಿಕ್ ಸೇರಿದಂತೆ ಕೆಮಿಕಲ್ ಸಂಗ್ರಹಿಸಿದ್ದ ಕಾರಣ ಬೆಂಕಿ ಹೊತ್ತಿಕೊಂಡಿರುವ ಶಂಕೆ ಇದೆ. ಬೆಂಕಿಯ ಕೆನ್ನಾಲಿಗೆಗೆ ಬಾನೆತ್ತರಕ್ಕೆ ದಟ್ಟ ಹೊಗೆ ಹಬ್ಬಿತು. ಅಗ್ನಿ ಅವಘಡದಿಂದ ಕೂಗಳತೆ ದೂರದಲ್ಲೆ ಪೆಟ್ರೋಲ್ ಬಂಕ್, ಹೋಟೆಲ್, ವಾಸದ ಮನೆಗಳಿದ್ದು, ಹೆಚ್ಚಿನ ಅಪಾಯ ತಪ್ಪಿದೆ. ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟು ಮೂರು ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Road Accident: ರೈತ ನಾಯಕ ಜೆ. ಕಾರ್ತಿಕ್ ರಸ್ತೆ ಅಪಘಾತದಲ್ಲಿ ಸಾವು; ಕೊಲೆ ಶಂಕೆ