ಹಾಸನ: ನೂತನ ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿರುವ ಲೇಖಕಿ ರೂಪ ಹಾಸನ್, ತಮ್ಮ ಕವಿತೆಯನ್ನು ಪಠ್ಯದಿಂದ ಕೈಬಿಡುವಂತೆ ಪತ್ರ ಬರೆದಿದ್ದಾರೆ. ಒಂಬತ್ತನೇ ತರಗತಿಯ ತೃತೀಯ ಭಾಷೆ ಕನ್ನಡದ ‘ಅಮ್ಮನಾಗುವುದೆಂದರೆ’ ಕವಿತೆ ಬಳಸಲು ತಾವು ನೀಡಿದ್ದ ಅನುಮತಿಯನ್ನು ಹಿಂಪಡೆದು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆಯನ್ನು ವಿರೋಧಿಸಿ ಸಾಹಿತಿ, ಲೇಖಕರ ಪ್ರತಿರೋಧ ಮುಂದುವರೆದಿದೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಓರ್ವ ಮಹಿಳೆ ಇಲ್ಲದಿರುವುದು ರೂಪಾ ಹಾಸನ್ ಅವರಿಗೆ ಅಸಮಾಧಾನ ಉಂಟಾಗಿದೆ. ಅಲ್ಲದೆ, ಹತ್ತನೇ ತರಗತಿಯ ಕನ್ನಡ ಪಠ್ಯದಲ್ಲಿ ಒಬ್ಬೇ ಒಬ್ಬ ಮಹಿಳಾ ಲೇಖಕಿಯ ಗದ್ಯ ಪದ್ಯ ಇಲ್ಲದಿರುವುದು ಮಹಿಳಾ ಸಂಕುಲಕ್ಕೆ ಮಾಡಿದ ಅಪಮಾನ ಎಂದು ಅಸಮಧಾನ ಹೊರಹಾಕಿದ್ದಾರೆ.
ಅಲ್ಲದೆ, ಹೊಸ ಪಠ್ಯಪುಸ್ತಕ ಪರಿಷ್ಕರಣೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ಕ್ಕೆ ವಿರುದ್ದವಾಗಿದೆ ಎಂದು ಹೇಳಿದ್ದಾರೆ. ಈ ಕಾರಣದಿಂದ, ರೂಪಾ ಹಾಸನ್ ತಮ್ಮ “ಅಮ್ಮನಾಗುವುದೆಂದರೆ” ಕವಿತೆ ಬೋಧಿಸಲು ನೀಡಿದ್ದ ಅನುಮತಿ ಹಿಂಪಡೆದಿರುವುದಾಗಿ ಪತ್ರ ಬರೆದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ಆಯ್ಕೆಗೆ ಮಾನದಂಡ ಏನು?: ಸರ್ಕಾರಕ್ಕೆ 83 ಸಾಹಿತಿಗಳ ಪತ್ರ