ಹಾಸನ: ಅಂಗನವಾಡಿ ಕೇಂದ್ರದಲ್ಲಿ ಹಾವು ಕಚ್ಚಿ ಬಾಲಕನೊಬ್ಬ ಸಾವಿಗೀಡಾದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡಕಲ್ಲೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಯಶವಂತ್- ಗೌರಿ ಎಂಬವರ ಮಗ, ನಾಲ್ಕುವರೆ ವರ್ಷದ ರೋಷನ್ ಮೃತಪಟ್ಟ ಬಾಲಕ. ಅಂಗನವಾಡಿ ಸಹಾಯಕಿ ಮಕ್ಕಳನ್ನು ಕರೆತರಲು ಮನೆಗಳಿಗೆ ಹೋದಾಗ ಘಟನೆ ನಡೆದಿದೆ.
ಹಾವು ಕಚ್ಚಿದ ತಕ್ಷಣ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸಿಗದೆ ಹೋದುದರಿಂದ, ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಗುವನ್ನು ತಂದೆ ಬೈಕ್‌ನಲ್ಲೇ ಕರೆತಂದಿದ್ದಾರೆ. ಹೆತ್ತೂರಿನಿಂದಲೂ ಸಕಲೇಶಪುರಕ್ಕೆ ಆಂಬ್ಯುಲೆನ್ಸ್ ಸಿಕ್ಕಿಲ್ಲ. ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗದೇ ಬಾಲಕ ಸಾವನ್ನಪ್ಪಿದ್ದಾನೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಕಲೇಶಪುರಕ್ಕೆ ಬೈಕ್‌ನಲ್ಲಿ ಬಾಲಕನನ್ನು ಕೊಂಡೊಯ್ಯುತ್ತಿದ್ದಾಗ ಅರ್ಧ ದಾರಿಯಲ್ಲಿ ಆಂಬ್ಯುಲೆನ್ಸ್ ಎದುರಾಗಿದೆ. ಸಕಲೇಶಪುರ ತಾಲೂಕಿನಾದ್ಯಂತ ಕೇವಲ ಒಂದೇ ಆಂಬ್ಯುಲೆನ್ಸ್ ಓಡಾಟ ನಡೆಸುತ್ತಾ ಇದೆ. ಇದು ಎಲ್ಲಿಗೂ ಸಾಲದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ | Snake Bite | ಆಟ ಆಡುವಾಗ ಹಾವು ಕಚ್ಚಿ ಎರಡು ವರ್ಷದ ಬಾಲಕ ಸಾವು