ಹಾಸನ: ಮಲಗಿದಲ್ಲಿಯೇ ನಿಗೂಢ ರೀತಿಯಲ್ಲಿ ಇಬ್ಬರು ಯುವಕರು ಪ್ರಾಣ ಬಿಟ್ಟ ಘಟನೆ (udr case) ಹಾಸನ ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ನಡೆದಿದೆ.
ಉದ್ಯೋಗ ಅರಸಿ ಉತ್ತರ ಪ್ರದೇಶದಿಂದ ಬಂದಿದ್ದ ಇಬ್ಬರು ಯುವಕರ ನಿಗೂಢ ಸಾವು ಕುತೂಹಲ ಕೆರಳಿಸಿದೆ. ನಬಾಬ್ (24), ರಾಮ್ಸಂಜೀವನ್ (30) ಮೃತ ಯುವಕರು. ಮೂಲತಃ ಉತ್ತರಪ್ರದೇಶದ ನಯನಪುರ್ ಗ್ರಾಮದ ಈ ಯುವಕರು ಕೊಠಡಿಯಲ್ಲಿ ಮಲಗಿದ್ದ ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದಾರೆ.
ಕೆಲಸ ಅರಸಿ ಬಂದಿದ್ದ ಇವರು ಹನುಮಂತಪುರ ಗ್ರಾಮದ ಮಹೇಶ್ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ರೂಂ ಪಡೆದು ವಾಸವಿದ್ದರು. ಎರಡು ದಿನ ಕೆಲಸ ಮಾಡಿದ ಬಳಿಕ ಜ್ವರದಿಂದ ಬಳಲಿ ರಜೆ ಮಾಡಿದ್ದರು. ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗಿ ಬಂದು ಬುಧವಾರ ರಾತ್ರಿ ಊಟ ಮುಗಿಸಿ ಔಷಧ ಸೇವಿಸಿ ರೂಮಿನಲ್ಲಿ ಮಲಗಿದ್ದರು. ನಿನ್ನೆವರೆಗೂ ರೂಂನ ಬಾಗಿಲು ತೆರೆಯದಿದ್ದಾಗ ಮನೆಯ ಮಾಲೀಕರು ಬಾಗಿಲು ಒಡೆದಿದ್ದು, ಯುವಕರು ಮಲಗಿದ್ದ ಜಾಗದಲ್ಲಿಯೇ ಸಾವನ್ನಪ್ಪಿರುವುದು ಕಂಡುಬಂದಿದೆ.
ಮೃತದೇಹಗಳನ್ನು ಹಾಸನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Rain News: ದೆಹಲಿಯಲ್ಲಿ ವರುಣಾರ್ಭಟ; ಪ್ರವಾಹದ ನೀರಲ್ಲಿ ಸ್ನಾನ ಮಾಡಲು ಹೋದ 3 ಮಕ್ಕಳ ಸಾವು