ಹಾಸನ: ಆಸ್ತಿಗಾಗಿ ಸಹೋದರರು ಹೊಡೆದಾಡೋದನ್ನ ನಾವ್ ನೋಡಿದ್ದೇವೆ, ಆದ್ರೆ ಆಸ್ತಿಗಾಗಿ ಅಗ್ನಿಸಾಕ್ಷಿಯಾಗಿ ತಾಳಿಕಟ್ಟಿದ ಗಂಡನನ್ನೇ ಮುಗಿಸಿದ್ದಾಳೆ. ಪತಿಯನ್ನ ಕೊಂದು ಹಸು ತುಳಿದು ಸಾವನ್ನಪ್ಪಿದ್ದಾನೆ ಅಂತಾ ನಾಟವಾಡಿದ್ದಾಳೆ. ಆದರೆ ಪೊಲೀಸರ ಚಾಣಾಕ್ಷ ತನಿಖೆಯಿಂದ ಕೊಲೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಮದುವೆಯಾಗಿ ಎರಡೇ ವರ್ಷಕ್ಕೆ ಜಗಳವಾಡಿಕೊಂಡು ಎರಡನೇ ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದ ಗಂಡನ ಉಸಿರು ತೆಗೆದಿದ್ದಾಳೆ.
ಜಮೀನಿಗಾಗಿ ಪತ್ನಿಯೇ ಪತಿಯನ್ನೇ ಹೊಡೆದು ಕೊಂದಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಯಡವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರವೀಶ (56) ಕೊಲೆಯಾದ ವ್ಯಕ್ತಿ.
ಯಡವನಹಳ್ಳಿ ಗ್ರಾಮದ ರವೀಶ ಮೂವತ್ತು ವರ್ಷಗಳ ಹಿಂದೆ ತಿಪಟೂರು ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಶಿವಗಂಗಮ್ಮ ಎಂಬುವವರನ್ನು ಮದುವೆಯಾಗಿದ್ದರು. ದಂಪತಿಗೆ ರೂಪೇಶ ಎಂಬ ಗಂಡು ಮಗನಿದ್ದು, ಶಿವಗಂಗಮ್ಮ ಮತ್ತೊಮ್ಮೆ ಎರಡು ತಿಂಗಳ ಗರ್ಭಿಣಿಯಾಗಿದ್ದಳು. ರವೀಶಗೆ ಎರಡನೇ ಮಗು ಬೇಕೆಂಬ ಮಹದಾಸೆಯಿತ್ತು. ಆದರೆ, ಶಿವಗಂಗಮ್ಮ ಪತಿಗೂ ಹೇಳದೆ ಗರ್ಭಪಾತ ಮಾಡಿಸಿಕೊಂಡು ಪತಿಯ ಆಸೆಗೆ ತಣ್ಣೀರು ಎರೆಚ್ಚಿದ್ದಳು.
ಇದೇ ವಿಚಾರಕ್ಕೆ ಮದುವೆಯಾಗಿ ಎರಡೇ ವರ್ಷದಲ್ಲಿ ಸಂಸಾರದಲ್ಲಿ ಹೊಂದಾಣಿಕೆ ಬಾರದೇ ಶಿವಗಂಗಮ್ಮ ಪತಿ ರವೀಶ ಅವರನ್ನು ಬಿಟ್ಟುಹೋಗಿದ್ದರು. ಜೊತೆಯಲ್ಲಿಯೇ ಮಗ ರೂಪೇಶನನ್ನು ಕರೆದುಕೊಂಡು ಹೋಗಿದ್ದರು. ಜಮೀನು ವಿಚಾರಕ್ಕೆ ಶಿವಗಂಗಮ್ಮ ಮತ್ತು ರವೀಶ ನಡುವೆ ಪದೇ ಪದೇ ಜಗಳವಾಡುತ್ತಿದ್ದಳು. ಇದೇ ಕಾರಣಕ್ಕೆ ಮಗ ರೂಪೇಶ ಒಂಭತ್ತನೇ ತರಗತಿ ಓದುತ್ತಿರುವಾಗಲೇ ತಾಯಿಯನ್ನು ಬಿಟ್ಟು ಬೆಂಗಳೂರಿಗೆ ಹೋಗಿದ್ದ.
ನಾಲ್ಕು ವರ್ಷಗಳ ಹಿಂದೆ ರವೀಶ, ಹಾವೇರಿ ಜಿಲ್ಲೆಯ ಮಮತಾ ಎಂಬುವವರ ಜೊತೆ ಎರಡನೇ ವಿವಾಹವಾಗಿದ್ದರು. ರವೀಶಗಿದ್ದ ಮೂರು ಎಕರೆ ಇಪ್ಪತ್ತು ಗುಂಟೆ ಜಮೀನು ಶಿವಗಂಗಮ್ಮ ಹೆಸರಿಗೆ ಖಾತೆಯಾಗಿತ್ತು. ಇದರಲ್ಲಿ ಅರ್ಧ ಜಮೀನು ನೀಡುವಂತೆ ರವೀಶ ಒತ್ತಾಯಿಸುತ್ತಿದ್ದರು. ಆದರೆ ಶಿವಗಂಗಮ್ಮ ಪೂರ್ತಿ ಜಮೀನು ನನಗೆ ಬೇಕು ಎಂದು ಹಠ ಹಿಡಿದಿದ್ದಳು. ಒಮ್ಮೆ ಇದು ವಿಕೋಪಕ್ಕೆ ತಿರುಗಿ ಶಿವಗಂಗಮ್ಮ ತಮ್ಮ ಸಂಬಂಧಿ ಗುರುಪ್ರಸಾದ್ ಎಂಬುವವರ ಜೊತೆ ಜಮೀನಿನ ಬಳಿ ಬಂದು ಪತಿಯ ಜೊತೆ ಜಗಳವಾಡಿ ಹಲ್ಲೆ ನಡೆಸಿದ್ದು, ರವೀಶ ಗಂಡಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ಮಾಡಿ ಅರ್ಧ ಜಮೀನನ್ನು ಶಿವಗಂಗಮ್ಮ ಬಿಟ್ಟಿಕೊಟ್ಟಿದ್ದರು. ನವೆಂಬರ್ 29 ರಂದು ಬೆಳಿಗ್ಗೆ ಹನ್ನೊಂದು ಗಂಟೆ ಸಮಯದಲ್ಲಿ ರವೀಶ ಜಮೀನಿನಲ್ಲಿ ಹಸು ಮೇಯುಸುತ್ತಿದ್ದ ವೇಳೆ ಅಲ್ಲಿಗೆ ಬಂದ ಶಿವಗಂಗಮ್ಮ ಈಕೆಯ ಅಣ್ಣನ ಮಗ ಗುರುಪ್ರಸಾದ್ ರವೀಶ ಜೊತೆ ಜಗಳ ಶುರುಮಾಡಿದ್ದು, ಮಾತಿಗೆ ಮಾತು ಬೆಳೆದು ಶಿವಗಂಗಮ್ಮ ಹಾಗೂ ಯುವಕ ಸೇರಿ ದೊಣ್ಣೆಯಿಂದ ಹೊಡೆದು ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿದ್ದಾರೆ.
ಕೊಲೆ ಮಾಡಿದ ಬಳಿಕ ಶಿವಗಂಗಮ್ಮ, ಈ ವಿಷಯವನ್ನು ತನಗೆ ಪರಿಚಯ ಇದ್ದ ರೈತ ಸಂಘದ ಮುಖಂಡ ದಯಾನಂದ್‌ಗೆ ತಿಳಿಸಿದ್ದಾಳೆ. ಆತ ಸಿಂಧು ಹಸು ತುಳಿದು ರವೀಶ್ ಗಂಭೀರ ಗಾಯಗೊಂಡಿದ್ದಾರೆ ಎಂದು ಆಂಬ್ಯುಲೆನ್ಸ್‌ಗೆ ಫೋನ್ ಮಾಡಿ ಆಸ್ಪತ್ರೆಗೆ ಸಾಗಿಸಿ ಎಂದು ಐಡಿಯಾ ನೀಡಿದ್ದಾನೆ. ಶಿವಗಂಗಮ್ಮ ಮತ್ತು ಗುರುಪ್ರಸಾದ್ ಅದೇ ರೀತಿ ಮಾಡಿ, ಆಸ್ಪತ್ರೆಗೆ ಸೇರಿಸಿ ಇದೇ ರೀತಿಯ ಹೇಳಿಕೆ ನೀಡಿ ಹೊರಟು ಹೋಗಿದ್ದರು. ನಂತರ ಅನಾಮಧೇಯ ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ರವೀಶನ ಜಮೀನಿನ ಬಳಿ ಜಗಳ ನಡೆಯುತ್ತಿತ್ತು. ಸಾವಿನ ಬಗ್ಗೆ ತನಿಖೆ ನಡೆಸುವಂತೆ ಹೇಳಿದ್ದಾರೆ. ಇದೇ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದಾಗ ಕೊಲೆ ಹಿಂದಿನ ರಹಸ್ಯ ಬಯಲಾಗಿದೆ. ಈ ಸಂಬಂಧ ಶಿವಗಂಗಮ್ಮ, ಗುರುಪ್ರಸಾದ್ ಕೃತ್ಯ ಮುಚ್ಚಿ ಹಾಕಲು ಸಹಕಾರ ನೀಡಿದ ದಯಾನಂದ ಸೇರಿ ಒಟ್ಟು ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲ್ಯದಿಂದಲೂ ತಂದೆ ತಾಯಿ ಪ್ರೀತಿ ಇಲ್ಲದೇ ಬೆಳೆದಿದ್ದ ಮಗ ರೂಪೇಶ ತಂದೆಯನ್ನು ಕಳೆದುಕೊಂಡಿದ್ದರೆ, ತಾಯಿ ಜೈಲು ಪಾಲಾಗಿದ್ದಾರೆ. ಇತ್ತ ಎರಡನೇ ಪತ್ನಿ ಮಮತಾ ಕೂಡ ತನಗೆ ಆಧಾರವಾಗಿದ್ದ ಪತಿಯನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದು, ಜಮೀನಿಗಾಗಿ ಪತಿಯನ್ನೇ ಕೊಂದ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Murder Case | ಮುಸ್ಲಿಂ ಮಹಿಳೆಯಿಂದ ಅಜ್ಜಿಯ ಭೀಕರ ಕೊಲೆ; ಕಬೋರ್ಡ್‌ನಲ್ಲಿ ಶವ ಬಚ್ಚಿಟ್ಟು ಪರಾರಿ