Site icon Vistara News

Haveri Accident: ಹಾವೇರಿ ಅಪಘಾತ ಪ್ರಕರಣ; ಭಾರತ ಅಂಧರ ಪುಟ್‌ಬಾಲ್ ತಂಡದ ಕ್ಯಾಪ್ಟನ್ ಕೂಡ ಸಾವು

Haveri Accident

ಶಿವಮೊಗ್ಗ: ಹಾವೇರಿ ಜಿಲ್ಲೆಯ ಬ್ಯಾಡಗಿ ಬಳಿ ನಡೆದ ಭೀಕರ ಅಪಘಾತದಲ್ಲಿ (Haveri Accident) ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದ 13 ಮೃತಪಟ್ಟಿದ್ದು, ಇದರಿಂದ ಗ್ರಾಮದಲ್ಲಿ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಮೃತರ ಪೈಕಿ 24 ವರ್ಷದ ಯುವತಿ ಮಾನಸ ಕೂಡ ಇದ್ದು, ಇವರು ಭಾರತ ಅಂಧರ ಪುಟ್ ಬಾಲ್ ತಂಡ ಕ್ಯಾಪ್ಟನ್ ಆಗಿದ್ದರು.

ಅಂಧತ್ವಕ್ಕೆ ಸೆಡ್ಡು ಹೊಡೆದು ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದ ಮಾನಸ, ಭಾರತ ತಂಡದ ಅಂಧರ ಪುಟ್ ಬಾಲ್ ತಂಡ ಕ್ಯಾಪ್ಟನ್ ಆಗಿದ್ದರು. ಐಎಎಸ್ ಕನಸು ಕಂಡಿದ್ದ ಮಾನಸ ಬೆಂಗಳೂರಿನಲ್ಲಿ ಓದುತ್ತಿದ್ದರು. ದೇವಸ್ಥಾನ ತೆರಳಲು ಭಾನುವಾರ ಗ್ರಾಮಕ್ಕೆ ಆಗಮಿಸಿದ್ದಳು. ಕುಟುಂಬಸ್ಥರೊಂದಿಗೆ ಮಹಾರಾಷ್ಟ್ರ ತಿವಾರಿ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿ ವಾಪಸ್‌ ಬರುತ್ತಿದ್ದಾಗ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಯನ್ನು ಕಾಣದೆ ಟಿಟಿ ಡಿಕ್ಕಿಯಾಗಿದ್ದರಿಂದ ಮಾನಸ ಸೇರಿ 13 ಮಂದಿ ಮೃತಪಟ್ಟಿದ್ದರು. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆ ಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದ 17 ಜನ ಪ್ರಯಾಣ ಟಿಟಿ ವಾಹನದಲ್ಲಿ ಮಾಡುತ್ತಿದ್ದರು. ಈ ಪೈಕಿ 13 ಜನರ ಸಾವಿಗೀಡಾಗಿದ್ದು, 4 ಜನ ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಪರಶುರಾಮ್ (45), ಭಾಗ್ಯ (40), ನಾಗೇಶ್ (50), ವಿಶಾಲಾಕ್ಷಿ (50), ಸುಭದ್ರಾ ಭಾಯಿ (65), ಪುಣ್ಯ (50), ಮಂಜುಳಾಬಾಯಿ (57), ಆದರ್ಶ್ (23), ಮಾನಸಾ (24), ರೂಪಾ (40), ಮಂಜುಳಾ (50) ಎಂದು ಗುರುತಿಸಲಾಗಿದೆ. 4 ವರ್ಷದ ಹಾಗೂ 6 ವರ್ಷದ ಇಬ್ಬರು ಮಕ್ಕಳು ಸಹ ಮೃತಪಟ್ಟಿದ್ದಾರೆ. ಗಾಯಾಳುಗಳಾದ ಅರ್ಪಿತಾ, ಅರುಣಾ, ಅನ್ನಪೂರ್ಣ ಆಸ್ಪತ್ರೆಯಲ್ಲಿದ್ದಾರೆ.

ಇದನ್ನೂ ಓದಿ | Viral Video: ನಡುರಸ್ತೆಯಲ್ಲಿ ಶಿಕ್ಷಕಿಯ ಹಣೆಗೆ ಸಿಂಧೂರ ಹಚ್ಚಿ ಬಲವಂತವಾಗಿ ಮದುವೆಯಾದ ಯುವಕ!

ಹಾವೇರಿ ಅಪಘಾತ ಪ್ರಕರಣ; 13 ಮೃತರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಬೆಂಗಳೂರು: ಹಾವೇರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Haveri Accident) ಮೃತಪಟ್ಟವರಿಗೆ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದು, 13 ಮೃತರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಹಾವೇರಿ ಜಿಲ್ಲಾಸ್ಪತ್ರೆಗೆ 13 ಮೃತದೇಹಗಳನ್ನು ರವಾನಿಸಿದ್ದು, ಈ ವೇಳೆ ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು, ಇಲ್ಲದಿದ್ದರೆ ಶವಗಳನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಸಂಬಂಧಿಕರು, ಗ್ರಾಮಸ್ಥರು ಆಗ್ರಹಿಸಿದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ.

ಶುಕ್ರವಾರ ಮುಂಜಾನೆ ಭೀಕರ ಅಪಘಾತ ನಡೆದು 13 ಮಂದಿ ಸಾವನ್ನಪ್ಪಿದ್ದರೂ ಜಿಲ್ಲಾಸ್ಪತ್ರೆಗೆ ಯಾರೂ ಜನಪ್ರತಿನಿಧಿಗಳು ಬಾರದ ಹಿನ್ನೆಲೆಯಲ್ಲಿ ಸಂಬಂಧಿಕರು, ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದರು. ಅಲ್ಲದೇ ಸರ್ಕಾರದಿಂದ ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು, ಪರಿಹಾರ ನೀಡದಿದ್ದರೆ ಶವಾಗಾರದಿಂದ ಶವ ತೆಗೆದುಕೊಂಡು ಹೋಗಲ್ಲ ಎಂದು ಕಿಡಿಕಾರಿ, ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದರು. ಮೊದಲಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯ ಸಂತಾಪವನ್ನಷ್ಟೇ ತಿಳಿಸಿದ್ದರು. ಬಳಿಕ ಪರಿಹಾರ ಘೋಷಣೆ ಮಾಡಿದ್ದಾರೆ.

ಸಿಎಂ ಸಂತಾಪ

ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಹಾವೇರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ 13 ಮಂದಿ ಮೃತಪಟ್ಟ ಸುದ್ದಿ ತಿಳಿದು ನೋವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ತಮ್ಮವರನ್ನು ಕಳೆದುಕೊಂಡ ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.

Exit mobile version