ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಹಿಂದು ಕಾರ್ಯಕರ್ತರ ಬೈಕ್ ರ‍್ಯಾಲಿ ವೇಳೆ ಕಲ್ಲು ತೂರಾಟ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಲೋಕಾರ್ಪಣೆ ಹಿನ್ನೆಲೆಯಲ್ಲಿ ಬೈಕ್ ರ‍್ಯಾಲಿ ನಡೆಯುತ್ತಿದ್ದಾಗ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಲಾಗಿದೆ. ಇದರಿಂದ ರೊಚ್ಚಿಗೆದ್ದ ಹಿಂದು ಕಾರ್ಯಕರ್ತರು ಮಸೀದಿ ಹಾಗೂ ಮನೆಗಳ ಮೇಲೆ ಕಲ್ಲು ತೂರಾಟ (Stone Pelting) ನಡೆಸಿದ್ದು, ಪ್ರಕರಣದಲ್ಲಿ ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಪರಿಸ್ಥಿತಿ ಕೋಮು ಸಂಘರ್ಷಕ್ಕೆ (Haveri Communal riots) ತಿರುಗಿದೆ.
ರಟ್ಟಿಹಳ್ಳಿಯಲ್ಲಿ ಕೆಲವು ತಿಂಗಳ ಹಿಂದಷ್ಟೇ ಆರ್‌ಎಸ್‌ಎಸ್ ಪ್ರಮುಖರ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮಂಗಳವಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಲೋಕಾರ್ಪಣೆ ವೇಳೆ ಕಲ್ಲು ತೂರಾಟ ನಡೆದಿದೆ. ಇದರಿಂದ ಕೋಪಗೊಂಡ ಹಿಂದು ಕಾರ್ಯಕರ್ತರು, ಮಸೀದಿ, ಮನೆಗಳು ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಆಟೋ ಚಾಲಕರೊಬ್ಬರ ಮೇಲೆ ಹಲ್ಲೆ ನಡೆದಿದ್ದು, ಹಲವು ವಾಹನಗಳು ಜಖಂಗೊಂಡಿವೆ.
ಇದನ್ನೂ ಓದಿ | Puneeth Rajkumar: ಸಿಂಧನೂರಲ್ಲಿ ಪುನೀತ್ ಪುತ್ಥಳಿ ಗಲಾಟೆ; ತಡೆಯಲು ಹೋದ ಪಿಎಸ್‌ಐಗೆ ಹೊಡೆದರೇ ಅಭಿಷೇಕ್ ನಾಡಗೌಡ?
ಸಚಿವರಾದ ಬಿ.ಸಿ. ಪಾಟೀಲ್, ಭೈರತಿ ಬಸವರಾಜ್ ಅವರು ರಾಯಣ್ಣನ ಪ್ರತಿಮೆ ಲೋಕಾರ್ಪಣೆ ಮಾಡಿ ಬೃಹತ್ ಬೈಕ್ ರ‍್ಯಾಲಿಗೆ ಚಾಲನೆ ನೀಡಿದ್ದರು. ಇದೆ ವೇಳೆ ಕಾರಂಜಿ ವೃತ್ತದಲ್ಲಿ ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಹೈ ಅಲರ್ಟ್ ಘೋಷಣೆ ಮಾಡಿದ್ದು, 15 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರ್‌ಎಸ್‌ಎಸ್ ಪ್ರಮುಖರ ಮೇಲೆ ಅನ್ಯಕೋಮಿನವರಿಂದ ಹಲ್ಲೆ ನಡೆದ ಬಳಿಕ ಬೂದಿ ಮುಚ್ಚಿದ ಕೆಂಡದಂತಾಗಿದ್ದ ರಟ್ಟಿಹಳ್ಳಿಯಲ್ಲಿ ನಾಲ್ಕೈದು ದಿನಗಳ ಹಿಂದೆ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆಯ ಮೆರವಣಿಗೆ ಮಾಡಲಾಗಿತ್ತು. ಇದೆ ವೇಳೆ ಅನ್ಯಕೋಮಿನ ಯುವಕರು ರಾಯಣ್ಣನ ಪ್ರತಿಮೆಯ ಮೆರವಣಿಗೆಗೂ ಅಡ್ಡಿಪಡಿಸಿದ್ದರು. ಕೈಯಲ್ಲಿ ಕಲ್ಲು ಹಿಡಿದು ಬ್ಯಾರಿಕೇಡ್ ಕಿತ್ತೆಸೆದು ಬೆದರಿಕೆ ಹಾಕಿದ್ದರು. ಇದೀಗ ಮತ್ತೆ ಬೈಕ್ ರ‍್ಯಾಲಿ ವೇಳೆ ಕಲ್ಲು ತೂರಾಟ ನಡೆದಿದೆ. ಇದರಿಂದ ಗಲಾಟೆಯಾಗಿ ಕೋಮು ಸಂಘರ್ಷಕ್ಕೆ ತಿರುಗಿದೆ.
ಅಲ್ಲದೆ, ಈ ವೇಳೆ ರಸ್ತೆಯಲ್ಲಿದ್ದ ಪುಟ್ಟ ಪುಟ್ಟ ಮಕ್ಕಳು ಭಯಭೀತರಾಗಿದ್ದು, ಹೆದರಿಕೆಯಿಂದ ಕಣ್ಣೀರು ಹಾಕುತ್ತಿದ್ದಾರೆ. ದೊಡ್ಡ ದೊಡ್ಡ ಕಲ್ಲುಗಳನ್ನೇ ತೂರಲಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಸಚಿವ ಬಿ.ಸಿ. ಪಾಟೀಲ್ ಖಂಡನೆ
ಇಂತಹ ಘಟನೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಕಲ್ಲು ತೂರಾಟ ಮಾಡುವ ಮೂಲಕ ಸಂಗೊಳ್ಳಿ ರಾಯಣ್ಣ ಅವರಿಗೆ ಅಪಮಾನ ಮಾಡಲಾಗಿದೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.