Site icon Vistara News

Best Places to Visit in Haveri: ಹಾವೇರಿಯಲ್ಲಿನ ಈ ಪ್ರಸಿದ್ಧ ತಾಣಗಳನ್ನು ನೀವು ನೋಡಿದ್ದೀರಾ?

haveri railway board at junction

ಸಂತ ಶಿಶುನಾಳ ಶರೀಫ, ಕನಕದಾಸರು, ಸರ್ವಜ್ಞ, ಜ್ಞಾನಯೋಗಿ ಪಂಚಾಕ್ಷರಿ ಗವಾಯಿ ಸೇರಿ ಅನೇಕ ಸಾಧಕರನ್ನು ಕರುನಾಡಿಗೆ ಕೊಟ್ಟ ಜಿಲ್ಲೆ ಹಾವೇರಿ. ಏಲಕ್ಕಿ ಬೆಳೆ ಮತ್ತು ಬ್ಯಾಡಗಿ ಮೆಣಸಿನಿಂದಾಗಿ ಪ್ರಸಿದ್ಧವಾದ ಈ ಜಿಲ್ಲೆಯು ಪ್ರವಾಸಿಗರ ನೆಚ್ಚಿನ ಸ್ಥಳವೂ ಹೌದು. ಹಲವಾರು ಪ್ರವಾಸಿ ತಾಣಗಳನ್ನು ಹೊಂದಿರುವ ಈ ಜಿಲ್ಲೆಗೆ ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ತೆರಳುತ್ತಾರೆ. ಈ ಜಿಲ್ಲೆಗೆ ಪ್ರವಾಸಕ್ಕೆ ಹೋದಾಗ ಯಾವ ಯಾವ ಸ್ಥಳಗಳನ್ನು ಮರೆಯದೆ ನೋಡಬೇಕು ಎನ್ನುವ ಮಾಹಿತಿ (Best Places to Visit in Haveri) ಇಲ್ಲಿದೆ.

ಹಾನಗಲ್‌


ಹಾವೇರಿ ಜಿಲ್ಲೆಗೆ ಸೇರಿದ ಸಣ್ಣ ಪಟ್ಟಣ ಹಾನಗಲ್‌. ಈ ಪಟ್ಟಣದ ವ್ಯಾಪ್ತಿಯಲ್ಲಿ ಹಲವಾರು ದೇವಾಲಯಗಳಿದ್ದು, ಅವುಗಳು ತಮ್ಮ ಐತಿಹಾಸಿಕ ಮಹತ್ವದಿಂದಾಗಿ ಜನಪ್ರಿಯವಾಗಿವೆ. ಕದಂಬರ ಕಾಲದಲ್ಲಿ ಹಾನಗಲ್‌ ಕದಂಬರ ಶಾಖೆಯ ರಾಜಧಾನಿಯಾಗಿತ್ತು. ಈ ಪ್ರದೇಶದಲ್ಲಿ 12 ಮತ್ತು 13ನೇ ಶತಮಾನಕ್ಕೆ ಸೇರಿದ 200ಕ್ಕೂ ಹೆಚ್ಚು ಶಾಸನಗಳು ದೊರೆತಿವೆ.

ಐರಾಣಿ

ರಾಣೆಬೆನ್ನೂರಿನಿಂದ 24 ಕಿ.ಮೀ ದೂರದಲ್ಲಿ ಐರಾಣಿ ಹೆಸರಿನ ಸ್ಥಳವಿದೆ. ಇಲ್ಲಿ ಪಾಳುಬಿದ್ದ ಕೋಟೆಯೊಂದನ್ನು ನೋಡಬಹುದು. ಹಾಗೆಯೇ ಅದರ ಜತೆಗೆ ವೀರಶೈವ ಮಠವನ್ನೂ ನೋಡಿಕೊಂಡು ಬರಬಹುದು. ಇಲ್ಲಿನ ಜನರು ಕಂಬಳಿ ತಯಾರಿಕೆಯಲ್ಲಿ ಪ್ರಸಿದ್ಧವಾಗಿರುವುದರಿಂದ ಇಲ್ಲಿಗೆ ಹೋದಾಗ ಕಂಬಳಿ ಕೊಳ್ಳುವುದನ್ನು ಮರೆಯದಿರಿ.

ಸವಣೂರು


ಆಫ್ರಿಕಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು ಬಾವೊಬಾಬ್‌ ಮರಗಳು. ವಿಶೇಷವೆಂದರೆ ಈ ಬಾವೊಬಾಬ್‌ ಮರಗಳು ಹಾವೇರಿಯ ಸವಣೂರಿನಲ್ಲೂ ಇವೆ. ಮೂರು ಬಾವೊಬಾಬ್‌ ಮರಗಳನ್ನು ಹತ್ತಿರ ಹತ್ತಿರದಲ್ಲೇ ತ್ರಿಕೋನಾಕಾರದಲ್ಲಿ ನೆಡಲಾಗಿದೆ. ಈ ರೀತಿ ಹತ್ತಿರದಲ್ಲಿ ಮೂರು ಬಾವೊಬಾಬ್‌ ಮರಗಳನ್ನು ಹೊಂದಿರುವ ದೇಶದ ಏಕೈಕ ಸ್ಥಳ ಎನ್ನುವ ಖ್ಯಾತಿ ಸವಣೂರಿಗೆ ಸಿಕ್ಕಿದೆ. ಆಫ್ರಿಕಾದ ಈ ಗಿಡವನ್ನು ಇಲ್ಲಿಗೆ ಯಾರು ತಂದು ನೆಟ್ಟರು ಎನ್ನುವುದಕ್ಕೆ ಯಾವುದೇ ಮಾಹಿತಿಯಿಲ್ಲ. ಈ ಮರಗಳು ಸರಿಸುಮಾರು 2 ಸಾವಿರ ವರ್ಷಗಳಷ್ಟು ಹಳೆಯವು ಎನ್ನಲಾಗುತ್ತದೆ. ಈ ಸ್ಥಳಕ್ಕೆ ಭೇಟಿ ನೀಡಿ ನೀವು ಅಪರೂಪದ ಮರಗಳನ್ನು ನೋಡಬಹುದು.

ಸಿದ್ದೇಶ್ವರ ದೇವಸ್ಥಾನ


ಸಿದ್ದೇಶ್ವರ ದೇವಸ್ಥಾನವು ಹಾವೇರಿ ಪಟ್ಟಣದಲ್ಲಿಯೇ ಇದೆ. ಈ ದೇವಸ್ಥಾನವನ್ನು 12ನೇ ಶತಮಾನದ ಪಶ್ಚಿಮ ಚಾಲುಕ್ಯರ ಕಲೆಯ ಉದಾಹರಣೆ ಎಂದು ಪರಿಗಣಿಸಲಾಗಿದೆ. ಈ ದೇಗುಲವು ಸೂರ್ಯನು ಉದಯಿಸುವ ದಿಕ್ಕಾದ ಪೂರ್ವಕ್ಕೆ ಮುಖ ಮಾಡದೆ ಪಶ್ಚಿಮಕ್ಕೆ ಮುಖ ಮಾಡಿದೆ. ಈ ರೀತಿಯ ದೇವಸ್ಥಾನಗಳನ್ನು ಚಾಲುಕ್ಯರು ಕಟ್ಟಿಸುತ್ತಿದ್ದರು. ದೇವಾಲಯದ ಮಂಟಪವು ಉಮಾ ಮಹೇಶ್ವರ, ವಿಷ್ಣು ಮತ್ತು ಅವನ ಪತ್ನಿ ಲಕ್ಷ್ಮಿ, ಸೂರ್ಯ ದೇವರು, ನಾಗ-ನಾಗಿಣಿ, ಗಣಪತಿ ಮತ್ತು ಕಾರ್ತಿಕೇಯನ ಶಿಲ್ಪಗಳನ್ನು ಒಳಗೊಂಡಿದೆ.

ತಾರಕೇಶ್ವರ ದೇವಾಲಯ


ಈ ದೇವಾಲಯವು ಭಗವಾನ್ ತಾರಕೇಶ್ವರನಿಗೆ (ಶಿವನ ರೂಪ) ಸಮರ್ಪಿತವಾಗಿದೆ. ಈ ದೇವಾಲಯದ ನಿರ್ಮಾಣವನ್ನು ಕದಂಬರು ಮಾಡಿದ್ದಾರೆ ಎಂದು ನಂಬಲಾಗಿದೆ. ಆದರೆ ಕಲ್ಯಾಣಿ ಚಾಲುಕ್ಯರು ದೇವಾಲಯದಲ್ಲಿ ಹಲವು ಗಮನಾರ್ಹ ಬದಲಾವಣೆಗಳನ್ನು ಮಾಡಿದರು.

ಗಳಗೇಶ್ವರ ದೇವಸ್ಥಾನ


ಗಳಗನಾಥ ದೇವಸ್ಥಾನ ಎಂದೂ ಕರೆಯಲ್ಪಡುವ ಗಳಗೇಶ್ವರ ದೇವಸ್ಥಾನವು ಗಳಗನಾಥ ಎಂಬ ಸಣ್ಣ ಹಳ್ಳಿಯಲ್ಲಿದೆ. ಇದನ್ನು ಚಾಲುಕ್ಯರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಈ ದೇವಾಲಯದ ತುಂಬ ಶಿಲ್ಪಗಳು ಮತ್ತು ಸಂಕೀರ್ಣವಾದ ಕೆತ್ತನೆಗಳನ್ನು ಕಾಣಬಹುದಾಗಿದೆ. ಈ ದೇವಸ್ಥಾನದ ಗೋಪುರ ನೆಲದಿಂದಲೇ ಮೇಲಕ್ಕೆದ್ದಂತೆ ಕಾಣುವುದರಿಂದಾಗಿ ಇದು ಬೇರೆ ದೇಗುಲಗಳಿಗಿಂತ ವಿಭಿನ್ನವಾಗಿದೆ.

ಕಾಗಿನೆಲೆ


ಕಾಗಿನೆಲೆಯು ಇತಿಹಾಸ ಪ್ರಸಿದ್ಧ ಸ್ಥಳವಾಗಿದ್ದು, ಇಲ್ಲಿ ನೀವು ಸಂಗಮೇಶ್ವರ ದೇವಾಲಯ, ಆದಂ ಶಾಫಿಯಾ ದರ್ಗಾ, ಆದಿಕೇಶ್ವರ ದೇವಸ್ಥಾನವು ಇಲ್ಲಿದೆ. ಹಾಗೆಯೇ ಪ್ರಸಿದ್ಧ ಕನಕದಾಸರ ಬೃಂದಾವನ ಮತ್ತು ಕನಕ ಗುರು ಪೀಠವನ್ನು ಇಲ್ಲಿ ನೀವು ಕಾಣಬಹುದು.

ನಗರೇಶ್ವರ ದೇವಸ್ಥಾನ


ಹಾವೇರಿ ಜಿಲ್ಲೆಯ ಬಂಕಾಪುರ ಗ್ರಾಮದಲ್ಲಿ ನಗರೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನವು 12ನೇ ಶತಮಾನದಲ್ಲಿ ಚಾಲುಕ್ಯರ ವಾಸ್ತುಶಿಲ್ಪದಂತೆ ನಿರ್ಮಾಣಗೊಂಡಿರುವುದಾಗಿದೆ. ಇಲ್ಲಿ ಸುಂದರವಾಗಿ ಕೆತ್ತಲ್ಪಟ್ಟಿರುವ 60 ಕಂಬಗಳಿವೆ. ಈ ದೇವಸ್ಥಾನದಲ್ಲಿ ಶಿವನನ್ನು ಆರಾಧಿಸಲಾಗುತ್ತದೆ.

ಇತರೆ ದೇವಸ್ಥಾನಗಳು

ಇವಷ್ಟೇ ಅಲ್ಲದೆ ಇನ್ನೂ ಹಲವಾರು ದೇವಸ್ಥಾನಗಳನ್ನು ನೀವು ಹಾವೇರಿ ಜಿಲ್ಲೆಯಾದ್ಯಂತ ಕಾಣಬಹುದು. ಚೌಡದಾನಪುರದಲ್ಲಿನ ಮುಕ್ತೇಶ್ವರ ದೇವಸ್ಥಾನ, ದೇವರಗುಡ್ಡದಲ್ಲಿನ ಮೈಲಾರ ಸ್ವಾಮಿ ದೇವಸ್ಥಾನ, ರಟ್ಟಹಳ್ಳಿಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಕೆಲವು ಅತ್ಯುತ್ತಮ ಸ್ಮಾರಕಗಳನ್ನು ಪ್ರದರ್ಶಿಸುವ ಕದಂಬೇಶ್ವರ ದೇವಸ್ಥಾನ, ಸಾತೇನಹಳ್ಳಿ, ಹಾಗೆಯೇ ಹಾವೇರಿ ಜಿಲ್ಲಾ ಕೇಂದ್ರದಲ್ಲೇ ಇರುವ ಉಗ್ರನರಸಿಂಹ ದೇವಸ್ಥಾನ, ವೀರಶೈವ ಮಠಗಳನ್ನು ನೀವು ಕಣ್ತುಂಬಿಸಿಕೊಳ್ಳಬಹುದು.

ಕೃಷ್ಣಮೃಗ ಅಭಯಾರಣ್ಯ


ರಾಣೆಬೆನ್ನೂರಿನಲ್ಲಿ ಕೃಷ್ಣಮೃಗ ಅಭಯಾರಣ್ಯವಿದೆ. ಈ ಅಭಯಾರಣ್ಯವು 119 ಚದರ ಕಿ.ಮೀ.ಗೆ ಹಬ್ಬಿದೆ. ಅದರಲ್ಲಿ 14.87 ಕಿ.ಮೀ. ಅನ್ನು ಮುಖ್ಯ ಅಭಯಾರಣ್ಯವೆಂದು ಪರಿಗಣಿಸಲಾಗಿದೆ. ಇಲ್ಲಿ ಕುರುಚಲು ಕಾಡು ಮತ್ತು ನೀಲಗಿರಿ ತೋಟ ಹೆಚ್ಚಿದೆ. ಕೃಷ್ಣಮೃಗ ಮಾತ್ರವಲ್ಲದೆ ಇಲ್ಲಿ ತೋಳ, ಕಾಡು ಹಂದಿ, ಕತ್ತೆ ಕಿರುಬ, ನರಿ, ಲಾಂಗುರ್‌, ಮುಳ್ಳು ಹಂದಿ, ಮುಂಗುಸಿ, ಮೊಲ ಮತ್ತು ಪ್ಯಾಂಗೋಲಿನ್‌ಗಳೂ ಇವೆ. ಅದಲ್ಲದೆ ನವಿಲು, ಸಿರ್ಕೀರ್‌ ಕೋಗಿಲೆ, ಬೂದು ಬಣ್ಣದ ಬಾಬ್ಲರ್‌, ಬೇಬ್ಯಾಕ್ಡ್‌ ಶ್ರೈಕ್‌, ಬ್ಲ್ಯಾಕ್‌ ಡ್ರೊಂಗೊ, ಗ್ರೇ ಪಾರ್ಟ್ರಿಡ್ಜ್, ಸ್ಯಾಂಡ್ ಗ್ರೌಸ್ ಹೆಸರಿನ ಹಕ್ಕಿಗಳು ಕೂಡ ಇವೆ.

ಬಂಕಾಪುರ ನವಿಲು ಅಭಯಾರಣ್ಯ


ಬಂಕಾಪುರ ನವಿಲು ಅಭಯಾರಣ್ಯವು ಕರ್ನಾಟಕದಲ್ಲಿ ನವಿಲುಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿಗೆ ಎರಡನೇ ಪ್ರಮುಖ ಅಭಯಾರಣ್ಯವಾಗಿದೆ. ಇನ್ನೊಂದು ನವಿಲು ಅಭಯಾರಣ್ಯ ಆದಿಚುಂಚನಗಿರಿಯಲ್ಲಿದೆ. ಬಂಕಾಪುರ ನವಿಲು ಅಭಯಾರಣ್ಯದಲ್ಲಿ ಸುಮಾರು 1000 ನವಿಲುಗಳು ಇವೆ ಎಂದು ಅಂದಾಜಿಸಲಾಗಿದೆ. ಇಲ್ಲಿ ನವಿಲುಗಳು ಮಾತ್ರವಲ್ಲದೆ ವುಡ್ ಪೆಕರ್, ಗೂಬೆಗಳು, ಮ್ಯಾಗ್ಪಿ, ರಾಬಿನ್, ಗ್ರೀನ್ ಬೀ ಈಟರ್, ಪ್ಯಾರಡೈಸ್ ಫ್ಲೈಕ್ಯಾಚರ್, ಸ್ಪಾಟೆಡ್ ಡವ್, ಪ್ಯಾರಾಕೀಟ್, ಕಿಂಗ್‌ಫಿಷರ್, ಗ್ರೇ ಹಾರ್ನ್‌ಬಿಲ್, ಮುಂತಾದ ಪಕ್ಷಿಗಳನ್ನು ಸಹ ಇವೆ.

ಉತ್ಸವ ರಾಕ್‌ ಗಾರ್ಡನ್‌


ಖ್ಯಾತ ಕಲಾವಿದರಾದ ಡಾ. ಟಿ. ಬಿ. ಸೊಲಬಕ್ಕನವರ್‌ ಅವರು ಕಲ್ಪಿಸಿ ವಿನ್ಯಾಸಗೊಳಿಸಿದ ಉದ್ಯಾನವನ ಉತ್ಸವ ರಾಕ್‌ ಗಾರ್ಡನ್‌. ಇದು ಒಳಾಂಗಣ ಮತ್ತು ಹೊರಾಂಗಣ ವಸ್ತು ಸಂಗ್ರಾಹಲಯಗಳನ್ನು ಹೊಂದಿರುವ ವಿಶಿಷ್ಟ ಉದ್ಯಾನವಾಗಿದೆ. ಈ ಉದ್ಯಾನವು 8 ವಿಶ್ವ ದಾಖಲೆಗಳನ್ನು ಹೊಂದಿದೆ. ಇದು ಮನೋರಂಜನೆಯ ಪಾರ್ಕ್‌ ಮಾತ್ರವಲ್ಲದೆ ಕಲೆ, ಸಂಸ್ಕೃತಿ ಮತ್ತು ಶಿಕ್ಷಣದ ಕೇಂದ್ರವೂ ಹೌದು. ಇಲ್ಲಿ ಉತ್ತರ ಕರ್ನಾಟಕದ ಗ್ರಾಮೀಣ ಸಂಸ್ಕೃತಿಯನ್ನು ತೋರಿಸುವಂತಹ ಶಿಲ್ಪಗಳನ್ನು ಕಾಣಬಹುದು. ಇಲ್ಲಿ ಸುಮಾರು 2 ಸಾವಿರ ಶಿಲ್ಪಗಳನ್ನು ಇರಿಸಲಾಗಿದೆ. ಅದರಲ್ಲಿ ಕನ್ನಡದ ಖ್ಯಾತ ನಟ ಡಾ.ರಾಜ್‌ಕುಮಾರ್‌ ಅವರ ಹಲವು ಚಿತ್ರಗಳ ವಿವಿಧ ಪಾತ್ರಗಳದ್ದೂ ಶಿಲ್ಪಗಳಿರುವುದು ವಿಶೇಷ.

ಬ್ಯಾಡಗಿ


ಎಲ್ಲರ ಬಾಯಲ್ಲೂ ಕೇಳಿಬರುವ ಬ್ಯಾಡಗಿ ಮೆಣಿಸಿನಕಾಯಿಯ ಮೂಲ ಹಾವೇರಿ ಜಿಲ್ಲೆಯ ಬ್ಯಾಡಗಿ. ದೇಶದಲ್ಲಿ ಅತಿ ಹೆಚ್ಚಿನ ವಹಿವಾಟು ಹೊಂದಿರುವ ಮೆಣೆಸಿನಕಾಯಿಯ ಪ್ರಭೇದಕ್ಕೆ ಆ ಹೆಸರನ್ನು ತಂದುಕೊಟ್ಟ ಊರನ್ನು ನೀವೊಮ್ಮೆ ಭೇಟಿ ಮಾಡಬೇಕು. ಈ ಮೆಣಸಿಕಾಯಿಗೆ ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಕೂಡ ನೀಡಲಾಗಿದೆ. ಈ ಮೆಣಸಿನಕಾಯಿಗಳ ಬೀಜಗಳಿಂದ ತೆಗೆದ ಎಣ್ಣೆಯನ್ನು ನೇಲ್ ಪಾಲಿಷ್ ಮತ್ತು ಲಿಪ್‌ಸ್ಟಿಕ್‌ಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ.

ಬಾಡ

ಕನಕದಾಸರು ಕನ್ನಡಿಗರೆಲ್ಲರಿಗೂ ಗೊತ್ತಿರುವ ವ್ಯಕ್ತಿ. ಅವರು ಹುಟ್ಟಿದ್ದು ಇದೇ ಹಾವೇರಿಯ ಬಾಡ ಗ್ರಾಮದಲ್ಲಿ. ಅದರ ನೆನಪಿಗಾಗಿ ಇಲ್ಲಿ ಕನಕದಾಸರ ಅರಮನೆಯನ್ನು ನಿರ್ಮಿಸಲಾಗಿದೆ. ಇಲ್ಲಿಗೆ ಭೇಟಿ ನೀಡಿ ನೀವು 16ನೇ ಶತಮಾನದ ಕವಿ, ದಾರ್ಶನಿಕ ಮತ್ತು ಸಂಗೀತಕಾರನ ನೆನಪುಗಳನ್ನು ಮನದಲ್ಲಿ ತುಂಬಿಕೊಂಡು ಬರಬಹುದು.

ಶಿಶುನಾಳ


ಕನಕದಾಸರಂತೆಯೇ ಶಿಶುನಾಳ ಶರೀಫರು ಕೂಡ ಸಮಾಜದಲ್ಲಿ ಬದಲಾವಣೆಗಾಗಿ ಹೋರಾಡಿದವರು. ಅವರ ಜನ್ಮಸ್ಥಳ ಹಾವೇರಿಯ ಶಿಶುವಿನಹಾಳ. ಈ ಗ್ರಾಮದಲ್ಲಿಯೇ ಶಿಶುನಾಳ ಶರೀಫರು ಜನಿಸಿದ್ದು. 19ನೇ ಶತಮಾನದಲ್ಲಿ ಅವರು ಸಮಾಜ ಸುಧಾರಕರಾಗಿ, ದಾರ್ಶನಿಕರಾಗಿ ಹಾಗೂ ಕವಿಯಾಗಿ ಗುರುತಿಸಿಕೊಂಡಿದ್ದರು.

ಅಬಲೂರು


ಕನ್ನಡದ ಶ್ರೇಷ್ಠ ಕವಿ ಸರ್ವಜ್ಞ ಅವರ ಜನ್ಮಸ್ಥಳ ಹಾವೇರಿಯ ಅಬಲೂರು. ಇಲ್ಲಿ ನಂದಿ ದೇವಾಲಯವೊಂದಿದ್ದು, ಅದು ಕೂಡ ಸಾಕಷ್ಟು ಪ್ರಸಿದ್ಧವಾಗಿದೆ.

ಹೊಳೆ ಆನೆವೇರಿ

ಕರ್ನಾಟಕದ ಎರಡು ಪ್ರಮುಖ ನದಿಗಳಾದ ತುಂಗಭದ್ರಾ ಮತ್ತು ಕುಮುದ್ವತಿ ನದಿಗಳು ಹಾವೇರಿನ ಹೊಳೆ ಆನೆವೇರಿ ಸ್ಥಳದಲ್ಲಿ ವಿಲೀನಗೊಳ್ಳುತ್ತವೆ. ಇಲ್ಲಿ ರಾಮೇಶ್ವರ ದೇವಸ್ಥಾನ ಮತ್ತು ಬನಶಂಕರಿ ದೇವಸ್ಥಾನಗಳೂ ಇದ್ದು, ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

FAQs

ಹಾವೇರಿ ಏಕೆ ಪ್ರಸಿದ್ಧವಾಗಿದೆ?

ಹಾವೇರಿಯು ಏಲಕ್ಕಿ , ಮಾಲೆ ಮತ್ತು ಬ್ಯಾಡಗಿ ಕೆಂಪು ಮೆಣಸಿನಕಾಯಿಗೆ ಹೆಸರುವಾಸಿಯಾಗಿದೆ.

ಹಾವೇರಿಯ ಪ್ರಸಿದ್ಧ ವ್ಯಕ್ತಿಗಳು ಯಾರು?

ಸರ್ವಜ್ಞ, ಸಂತ ಕನಕದಾಸರು, ಶಿಶುನಾಳ ಷರೀಫ್, ಹಾನಗಲ್ ಕುಮಾರ ಶಿವಯೋಗಿಗಳು, ವಾಗೀಶ್ ಪಂಡಿತರು, ಲೇಖಕ ಗಳಗನಾಥರು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಡಾ.ವಿ.ಕೆ. ಗೋಕಾಕ್ ಮತ್ತು ಇನ್ನೂ ಅನೇಕ.

Exit mobile version