Site icon Vistara News

ಮಾವು ನೋಡಿದರೆ ಸಿಹಿ.. ಬೆಲೆ ಕೇಳಿದರೆ  ಕಹಿ..

ಮಾವು

ಹಾವೇರಿ: ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮಾವು ಪ್ರಿಯರಿಗೆ ಸಿಹಿ ಅನುಭವ ನೀಡಿದೆ. ಹವಾಮಾನ ವೈಪರೀತ್ಯದಿಂದ ಇಳುವರಿ ಕುಂಠಿತವಾಗಿದ್ದರೂ, ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ.

ಹಾವೇರಿಯ ಮಾರುಕಟ್ಟೆ, ರಸ್ತೆ ಅಕ್ಕಪಕ್ಕ  ಜನನಿಬಿಡ ಸ್ಥಳಗಳಲ್ಲಿ ಈಗ ಮಾವಿನಹಣ್ಣಿನದೇ ದರ್ಬಾರ್. ಕಣ್ಣು ಹಾಯಿಸಿದಲ್ಲೆಲ್ಲಾ ಬಗೆ ಬಗೆಯ ಮಾವಿನಹಣ್ಣುಗಳು ಮಾವು ಪ್ರಿಯರ ಬಾಯಲ್ಲಿ ನೀರು ತರಿಸುತ್ತಿದೆ. ಈ ಬಾರಿ ಮಾರುಕಟ್ಟೆಗೆ ಮಾವು ತಡವಾಗಿ ಬಂದಿದೆ. ಸಾಮಾನ್ಯವಾಗಿ ಯುಗಾದಿ  ಬಳಿಕ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದ್ದ ಮಾವು ಮೇ ಮೊದಲ ವಾರ ಹೆಚ್ಚಿನ ಪ್ರಮಾಣದಲ್ಲಿ ಲಗ್ಗೆ ಇಟ್ಟಿದೆ. ಅದರಲ್ಲೂ ಹಾವೇರಿ ಜಿಲ್ಲೆಯ ಹಾನಗಲ್ ಮಾವು ಬೆಳೆಗೆ ಹೆಸರುವಾಸಿ. ಇಲ್ಲಿಯ ಆಪೂಸ್ ಮಾವು ಹೊರರಾಜ್ಯಗಳಲ್ಲು ಫೇಮಸ್ ಆಗಿದೆ.

ಇದನ್ನೂ ಓದಿ | areca news : ಹೆಚ್ಚುತ್ತಿದೆ ಅಡಕೆ ಆಮದು, ತಡೆಗೆ ಮತ್ತೊಂದು ಪಿಐಎಲ್‌

ಆಪೂಸ್, ಕಲ್ಕಿ, ಬದಾಮಿ, ತೋತಾಪುರಿ, ಸಿಂದೂಲಾ, ಬೇನಿಶಾ, ಮಲ್ಲಿಕಾ , ನಿಲಂ ಸೇರಿದಂತೆ ಹತ್ತಾರು ಬಗೆಯ ಮಾವಿನ ಹಣ್ಣುಗಳು ಬಂದಿವೆ. ಆಪೂಸ್ ಮತ್ತು ತೋತಾಪುರಿಯಂತಹ ಹಣ್ಣು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಕಾಣಿಸುತ್ತಿದೆ. ಕಳೆದ  ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಹಣ್ಣುಗಳ ದರ ಹೆಚ್ಚಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕುವಂತಿದೆ.

ಮಾವಿನ ಹಣ್ಣಿನ‌ ದರ ಹೆಚ್ಚಳವಾಗಿದ್ದು ಮಾವು ಬೆಳೆಯುವ ಹಾವೇರಿ ಜಿಲ್ಲೆಯಲ್ಲೆ ಆಪೂಸ್ ಡಜನ್‌ಗೆ ₹300, ತೋತಾಪುರಿ, ಬದಾಮಿ ₹200 ಆಗಿದ್ದರೆ ಕಲ್ಕಿ ₹250 ಗೆ ಮಾರಾಟವಾಗುತ್ತಿದೆ.  ದರ ಹೆಚ್ಚಳಕ್ಕೆ ಪ್ರಮುಖ ಕಾರಣ ಇಳುವರಿ ಕಡಿಮೆ ಆಗಿರುವುದು.

ಕಳೆದ ವರ್ಷಕ್ಕಿಂತ ಈ ವರ್ಷ 40% ಇಳುವರಿ ಕಡಿಮೆಯಾಗಿದೆ. ಅಕಾಲಿಕ ಮಳೆಯ ಹಿನ್ನೆಲೆ ಇಳುವರಿ ಕಡಿಮೆಯಾಗಿದ್ದು, ಈಗ ಸುರಿಯುತ್ತಿರುವ ಮಳೆ ಗಾಳಿಯಿಂದ ಮತ್ತಷ್ಟು ಬೆಳೆ ಹಾನಿಯಾಗುವ ಸಾಧ್ಯತೆ ದಟ್ಟವಾಗಿದೆ. ಮುಂಗಾರು ಮಳೆ ಆರಂಭವಾದರೆ  ಮಾರುಕಟ್ಟೆಯಲ್ಲಿ ಮಾವು ಕಡಿಮೆ ಆಗಬಹುದು ಎನ್ನುತ್ತಾರೆ ವ್ಯಾಪಾರಸ್ಥ ನಾಗೇಶ.
-ವರದಿ: ಸುರೇಶ ನಾಯ್ಕ ಹಾವೇರಿ

ಇದನ್ನೂ ಓದಿ | ಭತ್ತದ ಬೆಲೆ ಕುಸಿತದಿಂದ ಕಂಗಾಲಾದ ರೈತ: ಖರೀದಿ ಕೇಂದ್ರ ಆರಂಭಿಸದ ಸರ್ಕಾರ

Exit mobile version