ಹಾವೇರಿ: ಹಾನಗಲ್ನ ಲಾಡ್ಜ್ನಲ್ಲಿ ಸಿಕ್ಕಿಬಿದ್ದ ಮುಸ್ಲಿಂ ಮಹಿಳೆಯನ್ನು ಕಾರಿನಲ್ಲಿ ಕರೆದುಕೊಂಡು ಹೋದ ಪುಂಡರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ (Physical Abuse) ನಡೆಸಿದ್ದಾರೆ ಎಂದು ದೂರಲಾಗಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಭಾನುವಾರ (ಜ.14) ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 6ಕ್ಕೆ ಏರಿಕೆ ಆಗಿದೆ.
ಹಾನಗಲ್ನಲ್ಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜ. 14ರ ಭಾನುವಾರ ಹಾವೇರಿಯ ಎಸ್ಪಿ ಅಂಶುಕುಮಾರ ಸುದ್ದಿಗೋಷ್ಠಿ ನಡೆಸಿದರು. ಬಳಿಕ ಮಾತನಾಡಿದ ಅವರು ನೈತಿಕ ಪೊಲೀಸ್ಗಿರಿ ಹಿನ್ನೆಲೆಯಲ್ಲಿ ಹಾನಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆ ಹೇಳಿಕೆ ಬಳಿಕ ಗ್ಯಾಂಗ್ ರೇಪ್ ಪ್ರಕರಣವೂ ದಾಖಲಾಗಿದೆ.
ಜನವರಿ 10 ರಂದು ಮೂವರ ಬಂಧನವಾಗಿತ್ತು, ಬಳಿಕ ಇಂದು ಮತ್ತಿಬ್ಬರ ಬಂಧನವಾಗಿದೆ. ಬಂಕಾಪುರ ಹಾಗೂ ದಾವಣಗೆರೆಯಲ್ಲಿ ತಲೆಮರೆಸಿಕೊಂಡಿದ್ದ ಇಮ್ರಾನ್ ಮತ್ತು ರೇಹಾನ ಎಂಬವರನ್ನು ಬಂಧಿಸಲಾಗಿದೆ ಎಂದರು. ಮತ್ತೊಬ್ಬ ಆರೋಪಿಗೆ ಅಪಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತ ಚೇತರಿಸಿಕೊಂಡ ಬಳಿಕ ಅವನನ್ನು ವಶಕ್ಕೆ ಪಡೆಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಆಲ್ಟೊ ಕಾರಿನಲ್ಲಿ ಸಂತ್ರಸ್ತೆಯನ್ನು ಕಾಡಿಗೆ ಹೊತ್ಯೊಯ್ದಿದ್ದ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಂತ್ವನ ಕೇಂದ್ರದಿಂದ ಸಂತ್ರಸ್ತೆಯನ್ನು ಶಿರಸಿಗೆ ಬಿಟ್ಟ ಪೊಲೀಸರು
ಹಾವೇರಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಮಹಿಳೆಯನ್ನು ತನಿಖೆ ಮುಗಿದ ಹಿನ್ನೆಯಲ್ಲಿ ಜ.14ರ ಬೆಳ್ಳಂಬೆಳಗ್ಗೆ ಕರೆತಂದ ಪೊಲೀಸರು ಶಿರಸಿಯ ನಿವಾಸಕ್ಕೆ ಬಿಟ್ಟಿದ್ದಾರೆ. ಸಂತ್ರಸ್ತೆಯನ್ನು ಬಿಜೆಪಿ ನಿಯೋಗ ಭೇಟಿ ಮಾಡಲು ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಏಕಾಏಕಿ ಸಂತ್ರಸ್ತೆಯನ್ನು ರವಾನೆ ಮಾಡಿದೆ ಎಂಬ ಆರೋಪವು ಕೇಳಿ ಬಂತು. ಜತೆಗೆ ಸಿಎಂ ಸಿದ್ದರಾಮಯ್ಯ ಹಾವೇರಿ ಪ್ರವಾಸಕ್ಕೆ ಬರುತ್ತಿರುವುದರಿಂದ ಮುಜುಗರ ತಪ್ಪಿಸಲು ಸಂತ್ರಸ್ತೆಯನ್ನು ಏಕಾಏಕಿ ಮಧ್ಯರಾತ್ರಿಯಂದು ಶಿರಸಿಗೆ ರವಾನಿಸಲಾಗಿದೆ ಎನ್ನಲಾಗಿದೆ.
ಏನಿದು ಪ್ರಕರಣ?
ಶಿರಸಿ ಮೂಲದ ಸಮರೀನಾ ಬಾನು ಎಂಬಾಕೆ ತನಗೆ ಪರಿಚಯಸ್ಥನಾಗಿದ್ದ ಸೋಮಶೇಖರ್ ಎಂಬಾತನ ಜತೆ ಜನವರಿ 8ರಂದು ಮಧ್ಯಾಹ್ನದಂದು ಹಾನಗಲ್ಲ ಸಮೀಪದ ಖಾಸಗಿ ಹೋಟೆಲ್ನಲ್ಲಿ ತಂಗಿದ್ದಳು. ಆಗ ಆಟೋ ಚಾಲಕ ನೀಡಿದ ಮಾಹಿತಿ ಮೇರೆಗೆ ಐದಾರು ಪುಂಡ -ಪೋಕರಿಗಳು ಏಕಾಏಕಿ ಹೋಟೆಲ್ಗೆ ನುಗ್ಗಿದ್ದರು. ರೂಮಿನ ಬಾಗಿಲು ತಟ್ಟಿದ ಪುಂಡರು ತೆರೆಯುತ್ತಿದ್ದಂತೆ ಏಕಾಏಕಿ ಏಳಕ್ಕೂ ಅಧಿಕ ಮುಸ್ಲಿಂ ಯುವಕರ ಗುಂಪು ಅಕ್ರಮವಾಗಿ ಪ್ರವೇಶಿಸಿದ್ದರು. ಸಂತ್ರಸ್ತೆ ಹಾಗೂ ಸೋಮಶೇಖರ್ ಮೇಲೆ ಹಲ್ಲೆ ಮಾಡಿದ್ದರು. ಅಲ್ಲಿಂದ ಕಾರಲ್ಲಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ. ಮೊದಮೊದಲು ಈ ಪ್ರಕರಣವನ್ನು ನೈತಿಕ ಪೊಲೀಸ್ ಗಿರಿ ಎನ್ನಲಾಗಿತ್ತು. ತದನಂತರ ಸಂತ್ರಸ್ತೆ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿದ್ದಾಳೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ