ಹಾವೇರಿ: ಶರಣ ಚಳವಳಿಯ (Sharana Movement) ಕಾಯಕ ಪ್ರತಿನಿಧಿ ಎಂದೇ ಹೆಸರಾದ ಶ್ರೀ ಗುರು ಶಿವಯೋಗಿ ಸಿದ್ದರಾಮೇಶ್ವರರ (Shivayogi Siddarameshwara) 851ನೇ ಜಯಂತಿ ಮಹೋತ್ಸವ (Birth day Celebration) ಜನವರಿ 14 ಮತ್ತು 15ರಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ನಡೆಯುತ್ತಿದೆ. ಎರಡು ದಿನಗಳ ಈ ಹಬ್ಬದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaih) ಅವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಚೆನ್ನಬಸವಣ್ಣ ಮತ್ತು ಸಿದ್ದರಾಮೇಶ್ವರರು ಶರಣ ಸಂಸ್ಕೃತಿಯ ಪಂಚ ಹರಿಕಾರರೆಂದೇ ಹೆಸರಾದವರು. ಅವರಲ್ಲಿ ಶ್ರೀ ಗುರು ಸಿದ್ದರಾಮೇಶ್ವರರು ಕಾಯಕಯೋಗಿ, ಶಿವಯೋಗಿ, ಕರ್ಮಯೋಗಿ ಎಂದೇ ಪ್ರಸಿದ್ಧರು. ಮಹಾರಾಷ್ಟ್ರದ ಸೊನ್ನಲಾಪುರದಲ್ಲಿ 12ನೇ ಶತಮಾನದಲ್ಲಿ ಜನಿಸಿದ ಸಿದ್ದರಾಮೇಶ್ವರರು ಸಮಾಜದ ಮೇಲು ಕೀಳು, ವರ್ಣಭೇದದ ವಿರುದ್ಧ ಹೋರಾಡಿದ್ದರು. ಕೆಲಸ ಮಾಡದೆ ಉಣ್ಣಬಾರದು ಎನ್ನುವುದು ಅವರ ಪ್ರತಿಪಾದನೆ. ಸಿದ್ದರಾಮೇಶ್ವರರು ವಚನ, ಸ್ವರ ವಚನ, ಬಸವ ಸ್ತೋತ್ರದ ತ್ರಿವಿಧಿ, ಅಷ್ಟಾವರಣ ಸ್ತೋತ್ರದ ತ್ರಿವಿಧಿ, ಸಂಕೀರ್ಣ ತ್ರಿವಿಧಿ ಮುಂತಾದ ವೈವಿಧ್ಯಮಯ ಸಾಹಿತ್ಯವನ್ನು ರಚಿಸಿದ್ದಾರೆ. ಇವರ ಸುಮಾರು 1162 ವಚನಗಳು ಲಭ್ಯವಿದೆ. ಹೀಗೆ ಸಮಾಜವನ್ನು ಹೊಸ ದಿಕ್ಕಿನೆಡೆಗೆ ಕರೆದೊಯ್ದ ಗುರು ಸಿದ್ದರಾಮೇಶ್ವರರು ಸದಾಕಾಲ ಸ್ಮರಣೀಯರು.
ಅವರ ಸ್ಮರಣೆ ಪ್ರತಿ ವರ್ಷವೂ ರಾಜ್ಯದ ಹಲವು ಭಾಗಗಳಲ್ಲಿ ನಡೆಯುತ್ತದೆ. ಅವುಗಳಲ್ಲಿ ಬೆಂಗಳೂರಿನ ಬೆಂಗಳೂರಿನ ನೊಳಂಬ ಲಿಂಗಾಯತ ಸಂಘದ ವತಿಯಿಂದ ನಡೆಯುವ ಜಯಂತಿ ಮಹೋತ್ಸವವು ಪ್ರಮುಖ. ನೊಳಂಬ ಲಿಂಗಾಯತ ಸಂಘವು ಈ ಬಾರಿ ಜಯಂತಿ ಉತ್ಸವವನ್ನು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರು ಗ್ರಾಮದ ಎ.ಪಿ.ಎಂ.ಸಿ ಆವರಣದ ಹಿಂಬದಿ ಹಮ್ಮಿಕೊಂಡಿದೆ. ನೊಳಂಬ ಸ್ವಯಂಸೇವಕ ಸಂಘ ಈ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.
ಏನೇನು ಕಾರ್ಯಕ್ರಮ?
ಜನವರಿ 14ರಂದು ಬೆಳಗ್ಗೆ ಕುಪ್ಪೂರು ತಮ್ಮಡಿಹಳ್ಳಿಯ ಡಾ. ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಮಹಾಸ್ವಾಮಿಗಳು ಷಟಸ್ಥಳ ಧ್ವಜಾರೋಹಣ ನಡೆಸಿದರು. ನಂದಿಗುಡಿ ಮತ್ತು ಅತ್ತಿಕಟ್ಟಿಯ ವೃಷಭಪುರಿ ಮಹಾಸಂಸ್ಥಾನ ಬೃಹನ್ಮಠದ ಶ್ರೀ 1108 ಜಗದ್ಗುರು ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಳೆಬೀಡು ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ಹಲವು ಸ್ವಾಮೀಜಿಗಳು ಭಾಗವಹಿಸಿದ್ದರು. ನೊಳಂಬ ಲಿಂಗಾಯತ ಸಂಘದ ಅಧ್ಯಕ್ಷರಾಗಿರುವ ಎಸ್.ಆರ್. ಪಾಟೀಲ್ ನಂದಿ ಧ್ವಜಾರೋಹಣ ನೆರವೇರಿಸಿದರು.
11ಕ್ಕೆ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೊಳಂಬ ಶ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಮಧ್ಯಾಹ್ನ 3ಕ್ಕೆ ಶರಣ ಸಾಹಿತ್ಯ ಗೋಷ್ಠಿಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸಲಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬಿಟ್ಟು ಬಂದಳ್ಳಿಯ ಕಥೆಗಳು’ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಚಿತ್ರನಟ ಡಾಲಿ ಧನಂಜಯ ಕ್ಯಾಲೆಂಡರ್ ಬಿಡುಗಡೆಗೊಳಿಸಲಿದ್ದಾರೆ. ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಇದನ್ನೂ ಓದಿ: Raja Marga Column : ಕೌಸಲ್ಯಾ ಸುಪ್ರಜಾ ರಾಮ; ಶ್ರೀರಾಮನೆಂಬ ಶಾರ್ದೂಲ ಸದೃಶ ವ್ಯಕ್ತಿತ್ವ
ಜ.15ರಂದು ಬೆಳಿಗ್ಗೆ 9ಕ್ಕೆ ಮಹಿಳಾ ಗೋಷ್ಠಿಯನ್ನು ಸಂಸದ ಶಿವಕುಮಾರ ಉದಾಸಿ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 11ಕ್ಕೆ ಕೃಷಿ ಗೋಷ್ಠಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 3ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಎರಡು ದಿನ ನಡೆಯುವ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು, ಶಾಸಕರು, ಮಾಜಿ ಶಾಸಕರು, ಗಣ್ಯರು ಭಾಗವಹಿಸಲಿದ್ದಾರೆ. ಸುಮಾರು 2ರಿಂದ 3 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.