ಬೆಂಗಳೂರು: ದೊಡ್ಡ ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡಿದ್ದರಿಂದ ಮುಚ್ಚಲಾಗಿದ್ದ ರಾಕ್‌ಲೈನ್ ಮಾಲ್ ತೆರೆಯಲು ಹೈಕೋರ್ಟ್ ಅನುಮತಿ ನೀಡಿದೆ. ಸುಮಾರು 11.51 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡ ಕಾರಣಕ್ಕಾಗಿ ಟಿ.ದಾಸರಹಳ್ಳಿಯ ಪ್ರಶಾಂತ್ ನಗರದಲ್ಲಿರುವ ರಾಕ್‌ಲೈನ್ ಮಾಲ್‌ಗೆ (Rockline Mall) ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದರು. ಇದನ್ನು ಪ್ರಶ್ನಿಸಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್, ಮಾಲ್‌ನಲ್ಲಿ ವ್ಯಾಪಾರಕ್ಕೆ ಯಾವುದೇ ತೊಂದರೆ ನೀಡಬಾರದು, ತಕ್ಷಣವೇ ಮಾಲ್‌ಗೆ ಹಾಕಿರುವ ಸೀಲ್ ತೆಗೆಯಿರಿ ಎಂದು ಪಾಲಿಕೆಗೆ ಸೂಚಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸುನಿಲ್ ದತ್ ಯಾದವ್ ಅವರು, ತಕ್ಷಣವೇ ಮಾಲ್‌ಗೆ ಹಾಕಿರುವ ಸೀಲ್ ಓಪನ್ ಮಾಡಬೇಕು. ವ್ಯಾಪಾರಕ್ಕೆ ಯಾವುದೇ ತೊಂದರೆಗಳನ್ನು ಮಾಡಬಾರದು. ತೆರಿಗೆ ಹಣದ ವಿಚಾರವಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಎಂದು ಬಿಬಿಎಂಪಿಗೆ ಸೂಚಿಸಿದ್ದಾರೆ.
ಕಾಟೇರ ಸೇರಿದಂತೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ (Rockline Venkatesh) ಒಡೆತನದ ರಾಕ್‌ಲೈನ್ ಮಾಲ್‌ಗೆ (Rockline Mall) ಇತ್ತೀಚೆಗೆ ಬಿಬಿಎಂಪಿ ಅಧಿಕಾರಿಗಳು (BBMP officials) ಬೀಗ ಜಡಿದಿದ್ದರು. ಸುಮಾರು 11.51 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡ ಕಾರಣಕ್ಕಾಗಿ ಟಿ ದಾಸರಹಳ್ಳಿಯ ಪ್ರಶಾಂತ್ ನಗರದಲ್ಲಿರುವ ರಾಕ್‌ಲೈನ್ ಮಾಲ್‌ಗೆ ಬೀಗ ಹಾಕಲಾಗಿತ್ತು. ಆದರೆ, ರಾಕ್ ಲೈನ್ ವೆಂಕಟೇಶ್ ಅವರು ಇದೊಂದು ಅಕ್ರಮವಾಗಿದ್ದು, ತೆರಿಗೆ ವಿಚಾರದಲ್ಲಿ (Tax issue) ಬಿಬಿಎಂಪಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ್ದರು.
ಈ ಮಾಲ್‌ಗೆ ಸಂಬಂಧಿಸಿ 2011ರಿಂದ 2023ರ ಒಟ್ಟು 11.51 ಕೋಟಿ ರೂ. ತೆರಿಗೆಯನ್ನು ಬಾಕಿ ಇರಿಸಲಾಗಿದೆ. ಇದುವರೆಗೂ ತೆರಿಗೆ ಪಾವತಿಸದಿದ್ದರಿಂದ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿದ್ದರು ಎನ್ನಲಾಗಿದೆ.
ಇದನ್ನೂ ಓದಿ | Challenging Star darshan: ಹುಟ್ಟುಹಬ್ಬ ಆಚರಣೆ ಹಿನ್ನೆಲೆ: ಧನ್ಯವಾದ ತಿಳಿಸಿದ ದಾಸ!
ಇನ್ನು 2021ರಲ್ಲಿ ರಾಕ್‌ಲೈನ್ ವೆಂಕಟೇಶ್ ಮತ್ತು ಪದ್ಮಕುಮಾರಿ ಅವರು ಬಿಬಿಎಂಪಿಗೆ 8.5 ಕೋಟಿ ರೂ.ಗೂ ಅಧಿಕ ಮೊತ್ತದ ತೆರಿಗೆ ವಂಚಿಸಿದ್ದಾರೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಎನ್ ಆರ್ ರಮೇಶ್ ಆರೋಪಿಸಿದ್ದರು. ಬಿಬಿಎಂಪಿಯ ದಾಸರಹಳ್ಳಿ ವಲಯದ ವ್ಯಾಪ್ತಿಯಲ್ಲಿರುವ ರಾಕ್‌ಲೈನ್ ಮಾಲ್ ಕೇವಲ 48,500 ಚದರ ಅಡಿ ವಿಸ್ತೀರ್ಣ ಇದೆ ಎಂದು ಬಿಬಿಎಂಪಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದರೆ, ಆರು ಮಹಡಿ ಸೇರಿದಂತೆ 1,22,743 ಚದರ ಅಡಿ ವಿಸ್ತಾರದಲ್ಲಿ ಈ ಮಾಲ್ ನಿರ್ಮಾಣಗೊಂಡಿದೆ ಎಂದು ಅವರು ದೂರಿದ್ದರು. ಆದರೆ, ಇದೀಗ ಮಾಲ್ ತೆರೆಯಲು ಹೈಕೋರ್ಟ್ ಸೂಚನೆ ನೀಡಿದೆ.