ಬೆಂಗಳೂರು: ವಂಟಮೂರಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣದಲ್ಲಿ (Woman Assault Case) ಗ್ರಾಮಸ್ಥರ ವರ್ತನೆ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದೆ. ಮಹಿಳೆ ಮೇಲೆ ಹಲ್ಲೆ ನಡೆಯುತ್ತಿದ್ದರೆ ಮೂಕ ಪ್ರೇಕ್ಷಕರಾಗಿ ನಿಂತಿದ್ದ ಗ್ರಾಮಸ್ಥರಿಗೆ ದಂಡ ವಿಧಿಸಿ, ಆ ಹಣವನ್ನು ಸಂತ್ರಸ್ತೆಗೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಡ್ ಸೂಚಿಸಿದೆ.
ನ್ಯಾ ಪ್ರಸನ್ನ ಬಿ.ವರಾಳೆ ಹಾಗೂ ನ್ಯಾ ಕೃಷ್ಣ ದೀಕ್ಷಿತರಿದ್ದ ಪೀಠ ಪಿಐಎಲ್ ಅರ್ಜಿ ವಿಚಾರಣೆಯನ್ನು ನಡೆಸಿದ್ದು, ಹಲ್ಲೆ ಆಗುತ್ತಿದ್ದರು ಸುಮ್ಮನೆ ನಿಂತ ಜನರ ವರ್ತನೆಯನ್ನು ಖಂಡಿಸಿದ್ದಾರೆ. ಗ್ರಾಮದ ಎಲ್ಲರಿಗೂ, ನಿರ್ದಿಷ್ಟವಾಗಿ ತಪ್ಪು ಮಾಡಿದವರು ಹಣ ಪಾವತಿಸುವಂತೆ ಮಾಡಬೇಕು. ಬ್ರಿಟಿಷ್ ಗವರ್ನರ್ ಜನರಲ್ ವಿಲಿಯಮ್ ಬೆಂಟಿಂಕ್ ಆಡಳಿತದಲ್ಲಿ ಕಳ್ಳರು ಇರುವ ಗ್ರಾಮಕ್ಕೆ ಪುಂಡ ದಂಡ ಎಂಬ ತೆರಿಗೆ ವಿಧಿಸುತ್ತಿದ್ದ. ಅದೇ ರೀತಿಯಲ್ಲಿ ತೆರಿಗೆ ವಿಧಿಸಿದಲ್ಲಿ ಗ್ರಾಮಗಳಲ್ಲಿ ಜನರಿಗೆ ಸ್ವಲ್ಪ ಜವಾಬ್ದಾರಿ ಹೆಚ್ಚಾಗಲಿದೆ. ಆಗ ಇಂತಹ ಘಟನೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಮೌನವಾಗಿರದೆ ತಡೆಯಲು ಯತ್ನಿಸುತ್ತಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪ್ರಕರಣದಲ್ಲಿ ಗ್ರಾಮಸ್ಥರ ಪಾತ್ರ ಏನಿದೆ? ಈ ಘಟನೆಗೆ ಜನರು ಏಕೆ ಮೂಕಪ್ರೇಕ್ಷಕರಾಗಿದ್ದರು ಎಂಬುದಕ್ಕೆ ಕಾರಣಗಳಿವೆಯೇ? ಅವರು ಪೊಲೀಸ್, ನ್ಯಾಯಾಂಗ, ರಾಜಕೀಯ ವ್ಯಕ್ತಿಗಳಿಗೆ ಹೆದರಿದ್ದಾರೆಯೇ ಎಂದು ನ್ಯಾಯಪೀಠ ಪ್ರಶ್ನಿಸಿದ್ದು, ಜನರು ಏಕೆ ಅಪರಾಧದ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂಬ ವಿಚಾರವನ್ನು ನಿರ್ಲಕ್ಷಿಸಲಾಗದು. ಘಟನೆ ನಡೆಯುತ್ತಿದ್ದರೂ ಇಡೀ ಗ್ರಾಮದಲ್ಲಿ ಯಾರೂ ಏಕೆ ಮುಂದೆ ಬರಲಿಲ್ಲ. ಈ ವಿಚಾರಗಳನ್ನು ತನಿಖಾ ಅಧಿಕಾರಿಗಳು ಸಂಗ್ರಹಿಸಬೇಕು ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ | Murder Case : ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ
ಸಿಐಡಿ ತನಿಖೆ ಆರಂಭ
ಮಹಿಳೆ ಮೇಲೆ ಹಲ್ಲೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಹೀಗಾಗಿ ಪ್ರಕರಣದ ತನಿಖೆಗಾಗಿ ಸಿಐಡಿ ಡಿಐಜಿ ಸುಧೀರಕುಮಾರ್ ರೆಡ್ಡಿ ಬೆಳಗಾವಿಗೆ ಆಗಮಿಸಿದ್ದಾರೆ. ಭಾನುವಾರವಷ್ಟೇ ಸಿಐಡಿ ಎಸ್ಪಿ ಪೃಥ್ವಿಕ್, ರಶ್ಮಿ ಪರಡ್ಡಿ ಹಾಗೂ ಡಿವೈಎಸ್‌ಪಿ ಅಂಜುಮಳ ನಾಯಕ ಸೇರಿ 6 ಜನರ ತಂಡ ನಗರಕ್ಕೆ ಆಗಮಿಸಿತ್ತು.
ಕಾಕತಿ ಪೊಲೀಸ್ ಠಾಣೆಯಿಂದ ಫೈಲ್ ಪಡೆದಿರುವ ಸಿಐಡಿ ತಂಡ ತನಿಖೆ ಆರಂಭಿಸಿದೆ. ಸಂತ್ರಸ್ತೆ, ಕುಟುಂಬಸ್ಥರನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಿರುವ ಅಧಿಕಾರಿಗಳು, ಸದ್ಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಮಹಿಳೆಯನ್ನು ಭೇಟಿಯಾಗಿ ಮಾಹಿತಿ ಪಡೆಯಲಿದ್ದಾರೆ.
ಮಾನವ ಹಕ್ಕುಗಳ ಆಯೋಗದ ಡಿಐಜಿ ಆಗಮನ
ಪ್ರಕರಣದಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಡಿಐಜಿ ಸುನೀಲಕುಮಾರ್ ಮೀನಾ ಅವರು ದೆಹಲಿಯಿಂದ ಬೆಳಗಾವಿಗೆ ಆಗಮಿಸಿದ್ದಾರೆ. ಘಟನಾ ಸ್ಥಳ ವಂಟಮೂರಿ ಗ್ರಾಮಕ್ಕೆ ತೆರಳಿದ್ದ ಅವರು, ಸಂತ್ರಸ್ತೆಯ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ನಂತರ ನೆರೆ ಹೊರೆಯ ಜನರಿಂದ ಘಟನೆ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ಈಗಾಗಲೇ ಘಟನಾ ಸ್ಥಳಕ್ಕೆ ಬಿಜೆಪಿ ರಾಷ್ಟ್ರೀಯ ಸತ್ಯಶೋಧನಾ ಸಮಿತಿ, ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ಪರಿಶಿಷ್ಟ ಪಂಗಡಗಳ ಆಯೋಗವೂ ಭೇಟಿ ನೀಡಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಸಿಐಡಿ ಹಾಗೂ ಸ್ಥಳೀಯ ಪೊಲೀಸರ ಸಭೆ ನಡೆಸಿದ್ದು, ಘಟನೆಯ ಸಂಪೂರ್ಣ ವಿವರವನ್ನು ಸಿಐಡಿ ಡಿಜಿಪಿ ಪಡೆದಿದ್ದಾರೆ.
ಇದನ್ನೂ ಓದಿ | ನಾದಿನಿ ಜತೆ ಅನೈತಿಕ ಸಂಬಂಧ; ಹೆಂಡ್ತಿಗೆ ಗೊತ್ತಾಗಿದ್ದಕ್ಕೆ ಇಬ್ಬರೂ ನೇಣಿಗೆ ಶರಣು
ಏನಿದು ಘಟನೆ?
ಪ್ರೇಮಿಗಳು ಮನೆಬಿಟ್ಟು ಓಡಿಹೋಗಿದ್ದ ಹಿನ್ನೆಲೆಯಲ್ಲಿ ಯುವಕನ ಮನೆಗೆ ದಾಳಿ ನಡೆಸಿದ್ದ ಯುವತಿಯ ಕಡೆಯವರು, ಆತನ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದರು. ಡಿ.10ರಂದು ನಡೆದಿದ್ದ ಈ ಅಮಾನವೀಯ ಘಟನೆಗೆ ರಾಜ್ಯ, ಮಾತ್ರವಲ್ಲದೆ ಇಡೀ ದೇಶದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು. ಘಟನೆ ಸಂಬಂಧ ಪೊಲೀಸರು 11 ಮಂದಿಯನ್ನು ಬಂಧಿಸಿದ್ದು, ಪ್ರಕರಣದ ತನಿಕೆ ಹೊಣೆಯನ್ನು ಸಿಐಡಿಗೆ ನೀಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ