ಬೆಂಗಳೂರು: ಕೆಎಸ್‌ಡಿಎಲ್ ಲಂಚ ಪ್ರಕರಣದಲ್ಲಿ ಎಫ್‌ಐಆರ್ ರದ್ದು ಮತ್ತು ಜಾಮೀನು ಕೋರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ (Lokayukta Raid) ಹೈಕೋರ್ಟ್‌ನಲ್ಲಿ ಶುಕ್ರವಾರ ನಡೆಯಿತು. ಸುದೀರ್ಘ ಎರಡು ಗಂಟೆಗಳ ಕಾಲ ವಿಚಾರಣೆ ಬಳಿಕ ತೀರ್ಪು ಕಾಯ್ದಿರಿಸಿ ವಿಚಾರಣೆಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಮುಂದೂಡಿದೆ.
ಮಾಡಾಳು ಪರ ವಕೀಲ ಸಂದೀಪ್ ಪಾಟೀಲ್ ವಾದ ಮಂಡಿಸಿದರೆ, ಲೋಕಾಯುಕ್ತ ಪರ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಅಶೋಕ್ ಹಾರನಹಳ್ಳಿ ವಾದ ಮಂಡನೆ ಮಾಡಿದರು. ಲೋಕಾಯುಕ್ತ ಪರ ವಕೀಲರು ಮಾಡಾಳು ಅವರಿಗೆ ನೀಡಿರುವ ಮಧ್ಯಂತರ ಜಾಮೀನು ಅರ್ಜಿಯನ್ನು ರದ್ದು ಮಾಡಬೇಕು ಎಂದು ವಾದಿಸಿದರು. ಈ ವೇಳೆ ನ್ಯಾಯಾಧೀಶರು ʻʻಈಗ ಅವರು ವಿಚಾರಣೆಗೆ ಬರುತ್ತಿದ್ದಾರಲ್ಲಾ? ಅವರನ್ನು ಯಾಕೆ ಬಂಧಿಸಬೇಕು? ಸಿನಿಮಾದಲ್ಲಿ ತೋರಿಸುವಂತೆ ಕುರ್ಚಿಗೆ ಕಟ್ಟಿಹಾಕಿ, ಥರ್ಡ್ ಡಿಗ್ರಿ ಟ್ರೀಮ್ ಕೊಟ್ಟು ಬಾಯಿಬಿಡಿಸುವ ಪ್ಲ್ಯಾನ್ ಏನಾದರೂ ಇದೆಯಾʼ ಎಂದು ಪ್ರಶ್ನಿಸಿದರು.
ಮಾಡಾಳು ವಿರುದ್ಧ ಯಾವುದೇ ಸಾಕ್ಷ್ಯವಿಲ್ಲ ಎಂದ ವಕೀಲರು
ಮಾಡಾಳು ಪರ ವಕೀಲ ಸಂದೀಪ್ ಪಾಟೀಲ್ ವಾದ ಮಂಡಿಸಿ, ದೂರಿನಲ್ಲಿ ಎಲ್ಲೂ ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಸಾಕ್ಷ್ಯ ಇಲ್ಲ. ಪೊಲೀಸರ ಮಹಜರು ವೇಳೆ ಸಾಕ್ಷ್ಯ ಸಿಕ್ಕಿಲ್ಲ. ವಿರೂಪಾಕ್ಷಪ್ಪ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್‌ಡಿಎಲ್) ಅಧ್ಯಕ್ಷರಾಗಿದ್ದಾರೆ. ಅವರು ಒಬ್ಬರೇ ಟೆಂಡರ್ ಮಾಡಲು ಆಗುವುದಿಲ್ಲ. ಆರೋಪ ಬಂದ ಬೆನ್ನಲ್ಲೆ ರಾಜೀನಾಮೆ ನೀಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆಗೆ ಸಹಕರಿಸುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ | Pocso case : 7 ವರ್ಷದ ಬಾಲಕಿ ಮೇಲೆ ಆಟೋ ಚಾಲಕನ ದೌರ್ಜನ್ಯ; ಶಾಲೆಗೆ ಕರೆದೊಯ್ಯುತ್ತಿದ್ದವನಿಂದಲೇ ದುಷ್ಕೃತ್ಯ
ಈ ವೇಳೆ ಅಶೋಕ್ ಹಾರನಹಳ್ಳಿ ವಾದ ಮಂಡಿಸಿ, ಪ್ರಕರಣದಲ್ಲಿ ಮಾಡಾಳು ವಿರೂಪಾಕ್ಷಪ್ಪ ಅವರು ನೇರವಾಗಿ ಭಾಗಿಯಾಗಿದ್ದು, ಅವರು ತನಿಖೆಗೆ ಸಹಕರಿಸುತ್ತಿಲ್ಲ, ಪರ್ಚೇಸ್ ಆರ್ಡರ್ ನೀಡಲು ಹಣಕ್ಕೆ ಬೇಡಿಕೆ ಇಡಲಾಗಿದೆ. ವಿರೂಪಾಕ್ಷಪ್ಪ ತನ್ನ ಮಗನ ಮೂಲಕ ಭ್ರಷ್ಟಾಚಾರ ಮಾಡಿಸಿದ್ದಾರೆ. ರಾಸಾಯನಿಕ ಸರಕಿಗೆ ಖರೀದಿ ಆದೇಶ, ಬಿಲ್ ನೀಡಲು ಲಂಚ ಪಡೆಯಲಾಗಿದೆ. ಸ್ಯಾಂಪಲ್‌ಗಳನ್ನ ನಿರಾಕರಿಸಿ ಹಣಕ್ಕೆ ಬೇಡಿಕೆ ಇಡುವ ಕೆಲಸ ಆರೋಪಿಗಳು ಮಾಡಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಸ್ಯಾಂಪಲ್ ಚೆಕ್ ಮಾಡುವ ಅಧಿಕಾರ ಯಾರಿಗೆ ಇದೆ? ಕೆಎಎಸ್‌ಡಿಎಲ್ ಅಧ್ಯಕ್ಷರಿಗೆ ಸ್ಯಾಂಪಲ್ ನಿರಾಕರಿಸುವ ಅಧಿಕಾರ ಇದೆಯಾ? ಎಂದು ನ್ಯಾ. ಕೆ. ನಟರಾಜನ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಲೋಕಾ ವಕೀಲರು, ಅಧ್ಯಕ್ಷರ ಸೂಚನೆ ಮೇರೆಗೆ ನಿರಾಕರಣೆ ಮಾಡುತ್ತಾರೆ ಎಂದು ತಿಳಿಸಿದರು.
ಸ್ಮಾರ್ಟ್ ವಾಚ್‌ನಲ್ಲಿ ರೆಕಾರ್ಡ್ ಮಾಡಿದ ವಿಡಿಯೊದಲ್ಲಿ ಅಡಿಯೊ ಕೂಡ ಇದೆಯಾ ಎಂಬ ನ್ಯಾಯಾಧೀಶರ ಪ್ರಶ್ನಿಗೆ ಉತ್ತರಿಸಿದ ಲೋಕಾ ಪರ ವಕೀಲರು, ಪ್ರಶಾಂತ್ ಮಾಡಾಳ್ ಹಾಗೂ ಕೆಎಸ್‌ಡಿಎಲ್‌ಗೆ ಯಾವುದೇ ಸಂಬಂಧವೇ ಇಲ್ಲ. ಅವರು ಬಿಡಬ್ಲ್ಯುಎಸ್‌ಎಸ್‌ಬಿ ಪ್ರಧಾನ ಲೆಕ್ಕಾಧಿಕಾರಿಯಾಗಿದ್ದಾರೆ. ಅವರ ಖಾಸಗಿ ಕಚೇರಿಯಲ್ಲಿ ಲಂಚ ಸ್ವೀಕರಿದ್ದಾರೆ. ಬಿಲ್ ಪಾವತಿಗೆ ಲಂಚ ನೀಡುವಂತೆ ಬೇಡಿಕೆ ಇಡಲಾಗಿತ್ತು. 81 ಲಕ್ಷ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಡಲಾಗಿತ್ತು. ಸಂಭಾಷಣೆಯನ್ನು ದೂರುದಾರರು ರೆಕಾರ್ಡ್ ಮಾಡಿಕೊಂಡಿದ್ದಾರೆ. ನಿಗಮದ ಎಂಡಿ ಮತ್ತು ಮಾಡಾಳ್ ಪ್ರಶಾಂತ್ ವಾಟ್ಸ್ ಆ್ಯಪ್ ಮಾತುಕತೆ ರೆಕಾರ್ಡ್ ಅಗಿದೆ. ಅದರಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಹೆಸರು ಕೂಡ ಉಲ್ಲೇಖವಾಗಿದೆ ಎಂದು ತಿಳಿಸಿದರು.
ಹಣ ಸಿಕ್ಕ ಮನೆಯ ಬಗ್ಗೆ ನ್ಯಾಯಾಧೀಶರು ಮಾಹಿತಿ ಕೇಳಿದ್ದಕ್ಕೆ ಉತ್ತರಿಸಿದ ವಕೀಲ, ಅದು ಪ್ರಶಾಂತ್ ಮಾಡಾಳ್‌ಗೆ ಸೇರಿದ ಮನೆಯಾಗಿದೆ. ಅದರಲ್ಲಿ ಒಂದು ಬೆಡ್ ರೂಮ್ ಮಾಡಾಳ್ ವಿರೂಪಾಕ್ಷಪ್ಪಗೆ ಸೇರಿದೆ. ಅಲ್ಲಿ ಕೂಡ 10 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಅವರ ಸೊಸೆಯೇ ಹೇಳಿಕೆ ನೀಡಿರುವುದಾಗಿ ವಕೀಲ ಅಶೋಕ್ ಹಾರನಳ್ಳಿ ತಿಳಿಸಿದರು.
ತನಿಖೆಗೆ ಸಹಕರಿಸುತ್ತಿಲ್ಲ, ಕಸ್ಟಡಿ ವಿಚಾರಣೆಗೆ ನೀಡಿ
ಶಾಸಕ ಮಾಡಾಳು ವಿರೂಪಾಕ್ಷಪ್ಪ ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ ಅವರ ಜಾಮೀನು ರದ್ದು ಮಾಡಿ ಕಸ್ಟಡಿ ವಿಚಾರಣೆಗೆ ನೀಡಬೇಕು ಎಂದು ಲೋಕಾಯುಕ್ತ ಪರ ವಕೀಲ ಅಶೋಕ್ ಹಾರನಹಳ್ಳಿ ನ್ಯಾಯಾಧೀಶರನ್ನು ಕೋರಿದರು. ಇದಕ್ಕೆ ಸ್ಪಂದಿಸಿದ ನ್ಯಾಯಮೂರ್ತಿಗಳು, ಈಗಾಗಲೇ ವಿಚಾರಣೆಗೆ ಬರುತ್ತಿದ್ದಾರೆ. ಆದರೂ ಯಾಕೆ ಅವರ ಬಂಧನ ಮಾಡಬೇಕು? ಸಿನಿಮಾ ಶೈಲಿಯಲ್ಲಿ ಹಿಂಸೆ ನೀಡಿ ತನಿಖೆ ಮಾಡಲಾಗುತ್ತಾ ಎಂದು ಪ್ರಶ್ನಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ವಕೀಲ ಅಶೋಕ್ ಹಾರನಹಳ್ಳಿ, ಮಾಡಾಳು ವಿರೂಪಾಕ್ಷಪ್ಪ ಯಾವುದೇ ಪ್ರಶ್ನೆಗಳಿಗೂ ಉತ್ತರಿಸುತ್ತಿಲ್ಲ. ಅವರ ಮೊಬೈಲ್ ನಂಬರ್ ಕೂಡ ಕೊಡುತ್ತಿಲ್ಲ. ಹೀಗಾಗಿ ಬಂಧಿಸಿ ವಿಚಾರಣೆ ಮಾಡಿದರೆ ತನಿಖೆ ಸಹಕಾರಿಯಾಗಿ ಸತ್ಯಾಂಶ ಹೊರಬರುತ್ತದೆ ಎಂದು ಹೇಳಿದರು.
ಮಾಡಾಳ್‌ಗೆ ಯಾವ ಕಾರಣಕ್ಕೆ ನಿರೀಕ್ಷಣಾ ಜಾಮೀನು ನೀಡಬಾರದು ಎಂದ ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದ ಲೋಕಾ ಪರ ವಕೀಲ, ಅಧಿಕಾರಿಗಳು ವಶಕ್ಕೆ ಪಡೆಯುವ ಮೊದಲು ಶಾಸಕ ಮಧ್ಯಂತರ ಜಾಮೀನು ಪಡೆದಿದ್ದಾರೆ. ಅವರನ್ನು ಕಸ್ಟಡಿಯಲ್ ಇಂಟೆರೋಗೇಷನ್ ಮಾಡಿದರೆ ಸತ್ಯಾಂಶ ಹೊರ ಬರುತ್ತದೆ. ಯಾವುದೇ ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್ ಕೊಡವುದಕ್ಕಲ್ಲ ಎಂದು ಹೇಳಿದರು.
ಇದನ್ನೂ ಓದಿ | Delhi liquor case: ದಿಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಇ.ಡಿ ಕಸ್ಟಡಿ ಅವಧಿ ಮತ್ತೆ 5 ದಿನ ವಿಸ್ತರಣೆ
ಜಾಮೀನು ರದ್ದು ಮಾಡಬಹುದಲ್ಲವೇ?
ಜಾಮೀನು ಪಡೆದ ಮೇಲೂ ಸಹಕರಿಸುತ್ತಿಲ್ಲ ಎಂದರೆ ಜಾಮೀನು ರದ್ದು ಮಾಡಬಹುದಲ್ಲವೇ? ಪ್ರಶಾಂತ್ ಮಾಡಾಳುಗೂ ಕೆಎಸ್‌ಡಿಎಲ್‌ಗೂ ಏನು ಸಂಬಂಧ? ಎ1 ಸೂಚನೆಯಂತೆ ಎ2 ಮಾಡುತ್ತಿದ್ದಾರೆ ಎಂದು ತನಿಖಾಧಿಕಾರಿ ಹೇಳುತ್ತಿದ್ದಾರೆ ಎಂದು ಮಾಡಾಳು ವಿರೂಪಾಕ್ಷಪ್ಪ ಪರ ವಕೀಲರಿಗೆ ನ್ಯಾ. ಕೆ. ನಟರಾಜನ್ ಪ್ರಶ್ನಿಸಿದರು. ಇದಕ್ಕೆ ಮಾಡಾಳು ಪರ ವಕೀಲ ಸ್ಪಂದಿಸಿ, ಅದು ಅವರ ಕಲ್ಪನೆಯಾಗಿದೆ ಎಂದು ಚಿದಂಬರಂ ಕೇಸ್ ಉಲ್ಲೇಖಿಸಿ ವಾದ ಮಾಡಿದರು. ನಂತರ ಇಬ್ಬರು ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳು, ತೀರ್ಪು ಕಾಯ್ದಿರಿಸಿ ವಿಚಾರಣೆಯನ್ನು ಮುಂದೂಡಿದರು.